ರೈತರ ಅನುಕೂಲಕ್ಕಾಗಿ 'ಏಕೀಕೃತ ಕರೆ ಕೇಂದ್ರ'ಕ್ಕೆ ಸಚಿವ ಚೆಲುವರಾಯಸ್ವಾಮಿ ಚಾಲನೆ

ಕೃಷಿ ಸಂಬಂಧಿತ ಮಾಹಿತಿ, ಸಲಹೆ ಮಾರ್ಗದರ್ಶನ ಪಡೆಯಲು ಏಕೀಕೃತ ರೈತ ಕರೆ ಕೇಂದ್ರ ಹೆಚ್ಚು ಪರಿಣಾಮಕಾರಿಯಾಗಲಿದೆ ಎಂದು ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ  ಕೃಷಿ ಸಚಿವ ಚೆಲುವರಾಯಸ್ವಾಮಿ ಮತ್ತಿತರರು
ಉದ್ಘಾಟನಾ ಕಾರ್ಯಕ್ರಮದಲ್ಲಿ ಕೃಷಿ ಸಚಿವ ಚೆಲುವರಾಯಸ್ವಾಮಿ ಮತ್ತಿತರರು
Updated on

ಬೆಂಗಳೂರು: ಕೃಷಿ ಸಂಬಂಧಿತ ಮಾಹಿತಿ, ಸಲಹೆ ಮಾರ್ಗದರ್ಶನ ಪಡೆಯಲು ಏಕೀಕೃತ ರೈತ ಕರೆ ಕೇಂದ್ರ ಹೆಚ್ಚು ಪರಿಣಾಮಕಾರಿಯಾಗಲಿದೆ ಎಂದು ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಕೃಷಿ ಇಲಾಖೆಯ ಕೃಷಿ ಆಯುಕ್ತಾಲಯದಲ್ಲಿ ರೈತ ಕರೆ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, ಬೆಳೆ, ಹವಾಮಾನ, ವಿಮೆ, ರೈತ ವಿದ್ಯಾನಿಧಿ, ಕೃಷಿ ಸಂಜೀವಿನಿ, ಪಿ.ಎಂ ಕಿಸಾನ್, ಕೆ.ಕಿಸಾನ್, ಬೆಳೆ ಸಮೀಕ್ಷೆ  ಮತ್ತಿತರ ವಿಷಯಗಳಲ್ಲಿ  ಉಪಯುಕ್ತ ಮಾಹಿತಿ, ಸಲಹೆ ಹಾಗೂ ಮಾರ್ಗದರ್ಶನಗಳನ್ನು ಸುಲಭವಾಗಿ ಒದಗಿಸುವುದು ಏಕೀಕೃತ ರೈತ ಕರೆ ಕೇಂದ್ರದ ಉದ್ದೇಶ ಎಂದರು.

ಈ ಹಿಂದೆ  ವಿವಿಧ ಯೋಜನೆಗಳಿಗೆ ಇದ್ದ 8  ಪ್ರತ್ಯೇಕ ಕರೆ ಸಂಖ್ಯೆಗಳನ್ನು ಒಗ್ಗೂಡಿಸಿ ಏಕೀಕೃತ ಕರೆ ಕೇಂದ್ರ ಸ್ಥಾಪಿಸಲಾಗಿದೆ. 1800-425-3553 ನೂತನ ಏಕೀಕೃತ ಸಹಾಯವಾಣಿ ಕರೆ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ. ಮಾಹಿತಿ ಹಾಗೂ ತಾಂತ್ರಿಕ ನೆರವಿನ ಜೊತೆಗೆ ಕೃಷಿ ಉತ್ಪನ್ನಗಳ ಮೌಲ್ಯ ವರ್ಧನೆಗೂ ಇಲಾಖೆ ಮುಂದಾಗಿದೆ ಇದರ ಅಂಗವಾಗಿ ಭೀಮಾ ಫಲ್ಸ್ ಎಂಬ ಬ್ರಾಂಡ್ ತೊಗರಿ ಬೇಳೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ರೈತರಿಗೆ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ತಲುಪಲು ಬೆಳೆ ಸಮೀಕ್ಷೆ ಕೂಡ ಪ್ರಮುಖ. ಕ್ಷೇತ್ರ ಮಟ್ಟದಲ್ಲಿ ಸಮೀಕ್ಷೆ ನಡೆಸುವವರಿಗೆ ತಾಂತ್ರಿಕ ಅರಿವು ಹಾಗೂ ಇತರ ಮಾಹಿತಿ ಅಗತ್ಯ. ಹೀಗಾಗಿ ರಾಜ್ಯ ಮಟ್ಟದಲ್ಲಿ ಬೆಳೆ ಸಮೀಕ್ಷೆ ಮಾಸ್ಟರ್ ತರಬೇತುದಾರರ ತರಬೇತಿ ಹಮ್ಮಿಕೊಳ್ಳಲಾಗಿದೆ. ಎಲ್ಲಾ ಅಧಿಕಾರಿ ಸಿಬ್ಬಂದಿ ಜವಾಬ್ದಾರಿಯಿಂದ ರೈತರ ಹಿತ ಗಮದಲ್ಲಿಟ್ಟು ಸಮೀಕ್ಷೆ  ನಡೆಸಬೇಕು ಎಂದರು. ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ  ಇಲಾಖೆ ಜಂಟಿಯಾಗಿ ಬೆಳೆ ಸಮೀಕ್ಷೆ ಕಾರ್ಯದಲ್ಲಿ ತೊಡಗುತ್ತಿವೆ ಇದರಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳನ್ನು ತೊಡಗಿಸಿಕೊಂಡರೆ ಉತ್ತಮ ಎಂದು ಸಚಿವರು ಹೇಳಿದರು. 

ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ವಿ.ಅನ್ಬುಕುಮಾರ್ ಅವರು ಮಾತನಾಡಿ, ಏಕೀಕೃತ ರೈತ ಕರೆ ಕೇಂದ್ರ ಅತ್ಯಂತ ಮಹತ್ವದ್ದಾಗಿದೆ. ಇದರಿಂದ ರೈತರಿಗೆ ಮಾಹಿತಿ ನೀಡುವ ಜೊತೆಗೆ ಸಮಸ್ಯೆಗಳನ್ನು ತಿಳಿಯಬಹುದಾಗಿದೆ. ಯಾವ ವಿಚಾರ ತಕ್ಷಣಕ್ಕೆ ಹೆಚ್ಚು ಪ್ರ್ರಾಮುಖ್ಯತೆ ನೀಡಬೇಕು, ಗಮನ ಹರಿಸಬೇಕು ಎಂದೂ ಅಂದಾಜಿಸಲು ಅನುಕೂಲವಾಗಲಿದೆ. ಇತರ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಕೃಷಿ ಅಭಿವೃದ್ಧಿ ಯೋಜನೆಗಳು ಹೆಚ್ಚು ಪ್ರಗತಿಪರವಾಗಿವೆ ಎಂದು ಅವರು ಅಭಿಪ್ರಾಯ ಪಟ್ಟರು.

ಕೃಷಿ ಇಲಾಖೆ ಆಯುಕ್ತರಾದ ವೈ.ಎಸ್. ಪಾಟೀಲ್, ತೋಟಗಾರಿಕೆ ಇಲಾಖೆ ನಿರ್ದೇಶಕರಾದ ಡಿ.ಎಸ್. ರಮೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com