ಕಾವೇರಮ್ಮಾ,. ಕಾಪಾಡಮ್ಮಾ.. ಇನ್ನೆರಡು ವಾರದಲ್ಲಿ ಉತ್ತಮ ಮಳೆಯಾಗದಿದ್ದರೆ ಪರಿಸ್ಥಿತಿ ಪ್ರಕ್ಷುಬ್ದ; ಮರುಕಳಿಸುತ್ತಾ ಇತಿಹಾಸ?

ಮೂರು ವರ್ಷಗಳ ಧಾರಾಕಾರ ಮಳೆಯ ನಂತರ, ಈ ವರ್ಷ ಮುಂಗಾರು ಕಣ್ಣ ಮುಚ್ಚಾಲೆ ಆಡುತ್ತಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ನೀರಿಗಾಗಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ಸಮಸ್ಯೆ ಆರಂಭವಾಗಿದೆ.
ಕಾವೇರಿ ಪ್ರತಿಮೆ
ಕಾವೇರಿ ಪ್ರತಿಮೆ

By K Shivakumar

ಮೈಸೂರು: ಮೂರು ವರ್ಷಗಳ ಧಾರಾಕಾರ ಮಳೆಯ ನಂತರ, ಈ ವರ್ಷ ಮುಂಗಾರು ಕಣ್ಣ ಮುಚ್ಚಾಲೆ ಆಡುತ್ತಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ನೀರಿಗಾಗಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ಸಮಸ್ಯೆ ಆರಂಭವಾಗಿದೆ.

ನೀರಿಗಾಗಿ ಎರಡು ರಾಜ್ಯಗಳ ನಡುವಿನ ವ್ಯಾಜ್ಯ ಮುಂದುವರಿದಿದ್ದು ಕಳೆದೆರಡು ವಾರಗಳಲ್ಲಿ ದುರ್ಬಲ ಮುಂಗಾರು ಮತ್ತು ಒಣಹವೆಯಿಂದ ಜಲಾಶಯಗಳ ಒಳಹರಿವು  ಕಡಿಮಯಾಗಿದೆ. ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ರೈತರು ಮತ್ತು ಬಿಜೆಪಿ ಕಾರ್ಯಕರ್ತರು ಬೀದಿಗಿಳಿದು ಹೋರಾಟ ಆರಂಭಿಸಿದ್ದಾರೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಒಟ್ಟು 81,155 ಚ.ಕಿ.ಮೀ ಅಚ್ಚುಕಟ್ಟು ಪ್ರದೇಶವಿದೆ, ಸುಮಾರು 34,273 ಚ.ಕಿ.ಮೀ ಕರ್ನಾಟಕದಲ್ಲಿದೆ, 2,866 ಚ.ಕಿ.ಮೀ ಕೇರಳದಲ್ಲಿ ಮತ್ತು ಉಳಿದ 44,016 ಚ.ಕಿಮೀ ತಮಿಳುನಾಡು ಮತ್ತು ಪುದುಚೇರಿಯಲ್ಲಿ ಹಂಚಿಕೆಯಾಗಿದೆ.

ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಗೆ ಬರುವ ಕೊಡಗಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 50 ರಷ್ಟು ಕಡಿಮೆ ಮಳೆ ದಾಖಲಾಗಿದೆ, 2022 ರಲ್ಲಿ ಇದೇ ಅವಧಿಯಲ್ಲಿ 5675 ಮಿಮೀ  ಮಳೆಯಾಗಿತ್ತು. ಕಳೆದ ವರ್ಷ 2566 ಮಿಮಿ ಮಳೆಯಾಗಿತ್ತು.

2021-2022 ಕ್ಕೆ ಹೋಲಿಸಿದರೆ ಕೊಡಗು ಜಿಲ್ಲೆಯಲ್ಲಿ ಶೇ.70 ಕ್ಕಿಂತ ಕಡಿಮೆ ಮಳೆಯಾಗಿದೆ,  ದುರ್ಬಲ ಮುಂಗಾರು ಭತ್ತ ಬೆಳೆಯುವ ರೈತರನ್ನು ಚಿಂತೆಗೀಡು ಮಾಡಿದೆ, ಮಳೆನೀರಿನಲ್ಲಿ ಬೆಳೆದ ಏಕೈಕ ಬೆಳೆಯನ್ನು ಕಳೆದುಕೊಳ್ಳುವ ಭಯದಲ್ಲಿದ್ದಾರೆ.

ಕೇರಳದ ವಯನಾಡು ಪ್ರದೇಶದ ವ್ಯಾಪ್ತಿಯ ಕಬಿನಿ ಜಲಾನಯನ ಪ್ರದೇಶದಲ್ಲಿ 1829.1 ಮಿಮೀ ವಾಡಿಕೆ ಮಳೆ ಬೀಳುವ ನಿರೀಕ್ಷೆಯಿತ್ತು, ಆದರೆ 991 ಮಿಮೀ ಮಳೆಯಾಗಿದೆ, ಇದರಿಂದ ಶೇ, 52 ರಷ್ಟು ಕೊರತೆಯಾಗಿದೆ. ಮೂಡಿಗೆರೆ ಮತ್ತು ಸಕಲೇಶಪುರದಲ್ಲಿ ಶೇ.36 ರಷ್ಟು ಮಳೆ ಕೊರತೆಯಾಗಿದ್ದು, ಹೇಮಾವತಿ ಅಚ್ಚುಕಟ್ಟಿನಲ್ಲೂ ಪರಿಸ್ಥಿತಿ ಆತಂಕಕಾರಿಯಾಗಿದೆ. ಜೂನ್‌ನಲ್ಲಿ ಆರಂಭವಾದ ಮುಂಗಾರು ಮೂರು ತಿಂಗಳು ಮುಗಿಯುತ್ತಿದೆ. ಆದರೆ ಈ ಪ್ರದೇಶದಲ್ಲಿ 357ಮಿಮೀ ಮಳೆಯಾಗಿದ್ದು, ವಾಡಿಕೆಯಂತೆ ಮಳೆ 554ಮಿಮೀ ಆಗಬೇಕಿತ್ತು.  ಖಾರಿಫ್ ಬೆಳೆಗೆ ನೀರು ನೀಡಲು ನೀರಾವರಿ ಅಧಿಕಾರಿಗಳು ನಿರಾಕರಿಸಿದ್ದರಿಂದ ಕಾವೇರಿ ಅಚ್ಚುಕಟ್ಟಿನ ರೈತರು ಈಗಾಗಲೇ ಕಂಗಾಲಾಗಿದ್ದಾರೆ. ಅರೆ ಒಣ ಬೆಳೆಗಳಿಗೆ ನೀರು ಪೂರೈಸಲು ‘ಆನ್ ಮತ್ತು ಆಫ್’ ವ್ಯವಸ್ಥೆ (ತಿಂಗಳಿಗೆ 15 ದಿನ) ಬಳಸಲು ನೀರಾವರಿ ಸಲಹಾ ಸಮಿತಿ ಸಭೆ ಇತ್ತೀಚೆಗೆ ನಿರ್ಧರಿಸಿದೆ.

ಈ ಭಾಗದಲ್ಲಿ ಕಬ್ಬು ಮತ್ತು ಭತ್ತ ಪ್ರಮುಖ ಬೆಳೆಗಳಾಗಿವೆ, ಹೇಮಾವತಿ, ಕೆಆರ್‌ಎಸ್‌, ಕಬಿನಿ, ಹಾರಂಗಿಯ ಅಚ್ಚುಕಟ್ಟಿನ 6.5 ಲಕ್ಷ ಎಕರೆಗೆ ನೀರು ಇಲ್ಲದ ಕಾರಣ ಭತ್ತದ ಕೃಷಿಗೆ ಸಿದ್ಧತೆ ನಡೆಸಿದ್ದ ರೈತರು ಭತ್ತ ನಾಟಿ ಅಥವಾ ಕಬ್ಬಿನಂಥ ದೀರ್ಘಾವಧಿ ಬೆಳೆಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗಿಲ್ಲ. ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದ ನಾಲ್ಕು ಪ್ರಮುಖ ಅಣೆಕಟ್ಟುಗಳ ಇದುವರೆಗಿನ ಸಂಗ್ರಹವು 114.57 ಟಿಎಂಸಿಎಫ್‌ಟಿ ಆಗಿದ್ದರೂ, ಶುಕ್ರವಾರದ ವೇಳೆಗೆ 71.47 ಟಿಎಂಸಿಎಫ್‌ಟಿ ಸಂಗ್ರಹವಿತ್ತು, ಇದು ಕಳೆದ ವರ್ಷ ಇದೇ ಅವಧಿಯಲ್ಲಿ ಎಲ್ಲಾ ನಾಲ್ಕು ಜಲಾಶಯಗಳಲ್ಲಿ 104 ಟಿಎಂಸಿ ಅಡಿ ಸಂಗ್ರಹವಾಗಿತ್ತು, ಆದರೆ ಈ ಭಾರಿ ಕಾವೇರಿ ಜಲನಾಯನ ಪ್ರದೇಶದಲ್ಲಿ ಶೇ. 38 ರಷ್ಟು ಮಳೆಕೊರತೆಯಾಗಿದೆ.

ಕರ್ನಾಟಕವು ತಮಿಳುನಾಡಿನ ನೀರಿನ ಬೇಡಿಕೆಯನ್ನು ಪೂರೈಸಲು ಅಸಮರ್ಥವಾಗಿದೆ, ಆದರೆ ಸುಪ್ರೀಂ ಕೋರ್ಟ್‌ನ ನಿರ್ದೇಶನಗಳಿಗೆ ಬದ್ಧವಾಗಿದೆ. ನ್ಯಾಯಾಧಿಕರಣದ ತೀರ್ಪಿನ ಅನುಸಾರವಾಗಿ ತನ್ನ ಪಾಲಿನ 27 ಟಿಎಂಸಿ ಅಡಿ ನೀರಿನ ಬದಲಾಗಿ 10 ಟಿಎಂಸಿ ಅಡಿ ನೀರನ್ನು ಬಿಡುಗಡೆ ಮಾಡಿದೆ.

ಕಾವೇರಿ ನದಿ ನೀರು ಹಂಚಿಕೆ ವಿವಾದವನ್ನು ಕಾವೇರಿ ನದಿ ನೀರು ವಿವಾದ ನ್ಯಾಯಮಂಡಳಿ ತೀರ್ಪು ನೀಡಿದ್ದರೂ, ಸಂಕಷ್ಟದ ಸೂತ್ರದ ಕೊರತೆ ಮತ್ತು ಸಂಕಷ್ಟದ ವರ್ಷಗಳಲ್ಲಿ ನೀರು ಹಂಚಿಕೆಯ ಬಗ್ಗೆ ಗೊಂದಲ ಸೃಷ್ಟಿಸಿದೆ. ಪ್ರಧಾನಿ ನೇತೃತ್ವದ ಕಾವೇರಿ ನದಿ ಪ್ರಾಧಿಕಾರ ಮತ್ತು ಮುಖ್ಯಮಂತ್ರಿಗಳು, ನೀರಾವರಿ ಕಾರ್ಯದರ್ಶಿ ಮತ್ತು ಇತರರು ಶತಮಾನಗಳಷ್ಟು ಹಳೆಯದಾದ ಜಲವಿವಾದವನ್ನು ಅಂತ್ಯಗೊಳಿಸಲು ಸಂಕಷ್ಟ ಸೂತ್ರವನ್ನು ರೂಪಿಸಲು ಒಮ್ಮತಕ್ಕೆ ಬರಬೇಕು ಎಂದು ನೀರಾವರಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕುರುವೈ ಬೆಳೆ ಬೆಳೆಯುವ ಪ್ರದೇಶವನ್ನು 1.8 ಲಕ್ಷದಿಂದ 4 ಲಕ್ಷ ಎಕರೆಗೆ ಹೆಚ್ಚಿಸಲು ಮತ್ತು ಕುಡಿಯುವ ನೀರಿನ ಯೋಜನೆಗಳನ್ನು ಹೆಚ್ಚಿಸಲು ತಮಿಳುನಾಡಿನಾಡು ಮುಂದಾಗಿರುವುದಕ್ಕೆ ಕರ್ನಾಟಕ ಆಕ್ಷೇಪ ವ್ಯಕ್ತ ಪಡಿಸಿದೆ.  ಹೊಸ ಬೆಳೆ ಮಾದರಿಗಳಿಗೆ ಬದಲಾಗಲು ರೈತರ ಹಿಂಜರಿಯುತ್ತಿದ್ದಾರೆ. ಭತ್ತ ಮತ್ತು ಕಬ್ಬಿನಂತಹ ನೀರು-ಅವಶ್ಯಕ ಬೆಳೆಗಳನ್ನು ಬೆಳೆಯುವುದನ್ನು ತಪ್ಪಿಸುವುದು ಸಮಸ್ಯೆಯನ್ನು ಸಂಕೀರ್ಣಗೊಳಿಸಿದೆ. ಏಕೆಂದರೆ ಎರಡೂ ರಾಜ್ಯಗಳು ತಮ್ಮ ಹಿತಾಸಕ್ತಿಗಳನ್ನು ರಕ್ಷಿಸಲು ದೃಢವಾಗಿವೆ. ಆದರೆ ರೈತರ ಹಿತಾಸಕ್ತಿ ಕಾಪಾಡುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ  ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ತಿರುಗಿ ಬಿದ್ದಿವೆ.

ಕ್ರೆಸ್ಟ್ ಗೇಟ್ ಮುಚ್ಚದಿದ್ದರೆ ಪ್ರತಿಭಟನೆ ತೀವ್ರಗೊಳಿಸುವುದಾಗಿ ಬೀದಿಗಿಳಿದು ಪ್ರತಿಭಟಿಸುತ್ತಿರುವ ರೈತರು ಬೆದರಿಕೆ ಹಾಕಿದ್ದಾರೆ. ಅಧಿಕಾರಿಗಳು ಕರ್ನಾಟಕದ ರೈತರು ಭತ್ತ ಬೆಳೆಯುವುದನ್ನು ನಿಷೇಧಿಸಿದ್ದಾರೆ. ಆದಕೆ ತಮಿಳುನಾಡಿನ ಕುರುವೈ ಬೆಳೆಗೆ ನೀರು ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ರೈತ ಸಮುದಾಯ ಮತ್ತು ಪ್ರತಿಪಕ್ಷಗಳ ಟೀಕೆಗಳ ಬಿಸಿ ಅನುಭವಿಸಿದ ಸರ್ಕಾರವು ನ್ಯಾಯಾಲಯದ ಮೆಟ್ಟಿಲೇರಲು ನಿರ್ಧರಿಸಿದೆ.

ರಾಜ್ಯಕ್ಕೆ 10 ಟಿಎಂಸಿ ಅಡಿ ನೀರು ಬಿಡುವಂತೆ ಸೂಚಿಸಿ ನೀಡಿರುವ ತೀರ್ಪನ್ನು ಮರುಪರಿಶೀಲಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡುವುದಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ತಮಿಳುನಾಡಿನ ಸಹಕಾರವನ್ನು ಕೋರಿದ ಅವರು, ಉತ್ತಮ ಮಳೆಯಾದರೆ ನೆರೆಯ ರಾಜ್ಯದ ಬೇಡಿಕೆಯನ್ನು ಪೂರೈಸುವುದಾಗಿ ಭರವಸೆ ನೀಡಿದರು, ಉದ್ದೇಶಿತ ಮೇಕೆದಾಟು ಯೋಜನೆಗೆ ಸಹಕಾರ ಕೋರಿದರು.

ತಮಿಳುನಾಡು ರೈತರ ಹಿತಾಸಕ್ತಿಗಳನ್ನು ಕಾಪಾಡಲು ಮತ್ತು ಬೆಂಗಳೂರು, ಮೈಸೂರು, ಮಂಡ್ಯ ಮತ್ತು ಇತರ ಪಟ್ಟಣಗಳ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲು ಬದ್ಧವಾಗಿದೆ, ಆದರೆ ಕರ್ನಾಟಕದ ವಾಸ್ತವ ಸ್ಥಿತಿಯಿಂದ ಏನು ಮಾಡಲಾಗದ ಪರಿಸ್ಥಿತಿ ಎದುರಾಗಿದೆ.

ಕಾವೇರಿ ಜಲಾನಯನ ಪ್ರದೇಶದಲ್ಲಿ ಇನ್ನೆರಡು ವಾರಗಳಲ್ಲಿ ಉತ್ತಮ  ಮಳೆಯಾಗದಿದ್ದರೆ ಮತ್ತು ಜಲಾಶಯಗಳ ಒಳಹರಿವು ಸುಧಾರಿಸದಿದ್ದರೆ ಕೃಷಿ ಚಟುವಟಿಕೆಗಳಿಗೆ ತೊಂದರೆಯಾದರೆ, ಅದು ರಾಜ್ಯಗಳ ನಡುವಿನ ಕಹಿ ಸಂಘರ್ಷದ ನೆನಪುಗಳನ್ನು ಮರುಕಳಿಸುತ್ತದೆ.

ಬರ ಪರಿಸ್ಥಿತಿಯು ರಾಜಕೀಯ ಪ್ರಕ್ಷುಬ್ಧತೆಗೆ ಕಾರಣವಾಗುತ್ತದೆ, ಏಕೆಂದರೆ ಎರಡೂ ರಾಜ್ಯಗಳಲ್ಲಿನ ವಿರೋಧ ಪಕ್ಷಗಳು ಆಡಳಿತಾರೂಢ ಸರ್ಕಾರಗಳನ್ನು ಮೂಲೆಗುಂಪು ಮಾಡಲು ಪ್ರಯತ್ನಿಸಬಹುದು. ಎರಡೂ ರಾಜ್ಯಗಳ ರಾಜಕಾರಣಿಗಳು ಭಾವನಾತ್ಮಕ ಅಥವಾ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವುದನ್ನು ತಡೆಯಬೇಕು ಎಂದು ಅನೇಕ ರಾಜಕೀಯ ವೀಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ, ಇದು ಎರಡೂ  ರಾಜ್ಯಗಳ ರೈತರ ನಡುವೆ ದೊಡ್ಡ ಘರ್ಷಣೆ ಮತ್ತು ಗೊಂದಲಕ್ಕೆ ಕಾರಣವಾಗಬಹುದು.

ಈ ಸಮಸ್ಯೆಗೆ ಸಂಕಷ್ಟದ ಸೂತ್ರವಿಲ್ಲ, ಸಂಕಷ್ಟದ ಸಮಯದಲ್ಲಿ ಕರ್ನಾಟಕವು ನೀರಿನ ಒಳಹರಿವಿನ ಆಧಾರದ ಮೇಲೆ ನೀರು ಬಿಡಬೇಕು. ತಮಿಳುನಾಡು ಸಾಮಾನ್ಯವಾಗಿ ಅಣೆಕಟ್ಟುಗಳನ್ನು ತುಂಬಿಸಿರುತ್ತದೆ , ಮುಂಗಾರು  ಪ್ರಾರಂಭವಾಗುವ ಮೊದಲು ನೀರಾವರಿಗಾಗಿ ನೀರನ್ನು ಬಳಸುತ್ತದೆ, ಆದರೆ, ಕಬಿನಿಯಿಂದ ನೀರು ಬಿಡುವುದರಿಂದ 1.2 ಲಕ್ಷ ಎಕರೆ ಪ್ರದೇಶದ ಬೆಳೆಗೆ ಹಾನಿಯಾಗಲಿದ್ದು, ಮುಂಗಾರು ಮಳೆ ಕೊರತೆಯಿಂದ ಭರ್ತಿಯಾಗದ ನಾಲ್ಕೂ ಜಲಾಶಯಗಳು ಸಂಕಷ್ಟ ಹಂಚಿಕೊಳ್ಳಬೇಕು ಎಂದು ಕಾವೇರಿ ನೀರಾವರಿ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಡಿ.ಶಿವಶಂಕರ್  ಆತಂಕ ವ್ಯಕ್ತ ಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com