ಅನಧಿಕೃತ ಫ್ಲೆಕ್ಸ್-ಬ್ಯಾನರ್ ಅಳವಡಿಕೆ ವಿರುದ್ಧ ಕ್ರಮ ಕೈಗೊಳ್ಳಲು ಬಿಬಿಎಂಪಿಗೆ ಮುಕ್ತ ಅವಕಾಶ!

ಅಕ್ರಮವಾಗಿ ಬ್ಯಾನರ್ ಹಾಕಿದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಹಿಂದುಳಿದ ವರ್ಗಗಳ ಅಭಿವೃದ್ಧಿ ಘಟಕದ ವಿರುದ್ಧ ಬಿಬಿಎಂಪಿ ಪ್ರಕರಣ ದಾಖಲಿಸಿ 50 ಸಾವಿರ ದಂಡ ವಿಧಿಸಿದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬುದಕ್ಕೆ ಸ್ಪಷ್ಟ ನಿದರ್ಶನ ಇದಾಗಿದೆ. 
ಬಿಬಿಎಂಪಿ ಕಚೇರಿ
ಬಿಬಿಎಂಪಿ ಕಚೇರಿ
Updated on

ಬೆಂಗಳೂರು: ಅಕ್ರಮವಾಗಿ ಬ್ಯಾನರ್ ಹಾಕಿದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಹಿಂದುಳಿದ ವರ್ಗಗಳ ಅಭಿವೃದ್ಧಿ ಘಟಕದ ವಿರುದ್ಧ ಬಿಬಿಎಂಪಿ ಪ್ರಕರಣ ದಾಖಲಿಸಿ 50 ಸಾವಿರ ದಂಡ ವಿಧಿಸಿದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬುದಕ್ಕೆ ಸ್ಪಷ್ಟ ನಿದರ್ಶನ ಇದಾಗಿದ್ದು, ಅನಧಿಕೃತ ಬ್ಯಾನರ್ ಮತ್ತು ಫ್ಲೆಕ್ಸ್ ಅಳವಡಿಕೆ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಬಿಬಿಎಂಪಿಗೆ ಮುಕ್ತ ಅವಕಾಶ ನೀಡಿದೆ.

ಮುಜರಾಯಿ ಸಚಿವ ಆರ್‌ ರಾಮಲಿಂಗಾರೆಡ್ಡಿ ಮಾತನಾಡಿ, ಫ್ಲೆಕ್ಸ್‌ ಮತ್ತು ಬ್ಯಾನರ್‌ ಅಳವಡಿಕೆಯ ನಿಯಮಾವಳಿಗಳನ್ನು ಎಲ್ಲರೂ ಅನುಸರಿಸಬೇಕು. ಹಿಂದಿನ ಬಿಜೆಪಿ ಸರ್ಕಾರಗಳಿಗಿಂತ ಭಿನ್ನವಾಗಿ ಈಗಿನ ಸರ್ಕಾರವು ಹೈಕೋರ್ಟ್ ನಿರ್ದೇಶನ ಮತ್ತು ಬಿಬಿಎಂಪಿ ಕಾಯ್ದೆಯ ಬಗ್ಗೆ ಗಂಭೀರವಾಗಿದೆ. ಇಂತಹ ಉಲ್ಲಂಘನೆಗಾಗಿ ಜನರು ಮತ್ತು ಯಾವುದೇ ಸಂಸ್ಥೆಗಳಿಗೆ ದಂಡ ವಿಧಿಸಲು ಪಾಲಿಕೆಯು ಸ್ವತಂತ್ರವಾಗಿದೆ. ಬಿಜೆಪಿಯವರು ರೇಸ್ ಕೋರ್ಸ್ ರಸ್ತೆಯಲ್ಲಿ ಹಾಕಿರುವ ಪ್ರಧಾನಿ ಮೋದಿಯವರ ಚಿತ್ರವಿರುವ ಫ್ಲೆಕ್ಸ್ ಅನ್ನು ಕೆಳಗಿಳಿಸುವ ಧೈರ್ಯವನ್ನು ಕೂಡ ಬಿಬಿಎಂಪಿ ಕೂಡ ಮಾಡಬೇಕು. ಅವರ ವಿರುದ್ಧ ಪ್ರಕರಣ ದಾಖಲಿಸಿ, ದಂಡ ವಿಧಿಸಬೇಕು ಎಂದು ಒತ್ತಾಯಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕವಿತಾ ರೆಡ್ಡಿ ಮಾತನಾಡಿ, ಕಾಂಗ್ರೆಸ್ 2018ರಲ್ಲಿ ಅಧಿಕಾರದಲ್ಲಿದ್ದಾಗ ‘ಫ್ಲೆಕ್ಸ್ ಮುಕ್ತ, ಪೋಸ್ಟರ್ ಮುಕ್ತ ಮತ್ತು ಪ್ಲಾಸ್ಟಿಕ್ ಮುಕ್ತ ಬೆಂಗಳೂರು ನಗರ’ ಅಭಿಯಾನವನ್ನು ಆರಂಭಿಸಿತ್ತು. ಈ ಸಂಬಂಧ ಬಿಬಿಎಂಪಿ ನೋಟಿಫಿಕೇಷನ್ ಹೊರಡಿಸಿದ್ದು, ಅಕ್ರಮ ಫ್ಲೆಕ್ಸ್, ಬ್ಯಾನರ್‌ಗಳ ವಿರುದ್ಧ ಆಯಾ ನಿಯಂತ್ರಣ ಕೊಠಡಿಗೆ ದೂರು ನೀಡುವಂತೆ ಸೂಚಿಸಿದ್ದು, ಪಾಲಿಕೆ ಕಾನೂನು ಪ್ರಕಾರ ಕ್ರಮಕೈಗೊಳ್ಳುವುದಾಗಿ ಜನರಿಗೆ ಭರವಸೆ ನೀಡಿದೆ ಎಂದರು.

ಬಿಬಿಎಂಪಿ ಆಯುಕ್ತರು ಧೈರ್ಯ ತೋರಿಸಬೇಕು ಮತ್ತು ಬಿಜೆಪಿಯ ಅಕ್ರಮ ಪೋಸ್ಟರ್‌ಗಳು ಮತ್ತು ಬ್ಯಾನರ್‌ಗಳ ವಿರುದ್ಧ ಚಾಟಿ ಬೀಸಬೇಕು. ಕೆಪಿಸಿಸಿ ಮುಖ್ಯಸ್ಥರೂ ಆಗಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ದಂಡ ಪಾವತಿಸಿದ್ದಾರೆ ಮತ್ತು ನಾವು ನಿಯಮಗಳನ್ನು ಅನುಸರಿಸುತ್ತೇವೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ ಎಂದು ಹೇಳಿದರು. 

ಆದರೆ, ಬಿಜೆಪಿ ನಾಯಕರು ಈ ಕ್ರಮವನ್ನು ಲೇವಡಿ ಮಾಡಿದ್ದು, ಇದೊಂದು ‘ರಾಜಕೀಯ ಸ್ಟಂಟ್’ ಎಂದಿದ್ದಾರೆ.

ಬಿಜೆಪಿ ಬೆಂಗಳೂರು ದಕ್ಷಿಣ ಘಟಕದ ಅಧ್ಯಕ್ಷ ಎನ್‌ಆರ್ ರಮೇಶ್ ಈ ಕ್ರಮವನ್ನು ಖಂಡಿಸಿದ್ದು, ನಿಯಮಗಳ ಪ್ರಕಾರ ದಂಡವನ್ನು ಗರಿಷ್ಠ 10,000 ರೂ. ವರೆಗೆ ಮಾತ್ರ ಹೆಚ್ಚಿಸಬಹುದು. ಜಾಹೀರಾತು ಸಂಸ್ಥೆಗಳಿಗೆ ಲಾಭ ಮಾಡಿಕೊಡಲು ಕಾಂಗ್ರೆಸ್ ಈ ರೀತಿ ಮಾಡುತ್ತಿದೆ ಎಂದು ದೂರಿದ್ದಾರೆ.

'ಜಾಹೀರಾತು ನೀಡಲು ಬಯಸುವ ಜನರು ಜಾಹೀರಾತು ಫಲಕಗಳು ಮತ್ತು ಬಿಬಿಎಂಪಿ ಆಯ್ಕೆ ಮಾಡಿದ ಸ್ಥಳಗಳಿಗೆ ಹೋಗುವುದರಿಂದ ಕಾಂಗ್ರೆಸ್‌ಗೆ ಸಂಬಂಧಿಸಿದ ಜಾಹೀರಾತು ಸಂಸ್ಥೆಗಳು ಲಾಭ ಪಡೆಯುತ್ತವೆ. ಈ ಸಂಸ್ಥೆಗಳು, ಪಕ್ಷದ ಸಾಮೀಪ್ಯವನ್ನು ಬಳಸಿಕೊಂಡು ಟೆಂಡರ್‌ಗಳನ್ನು ಪಡೆದುಕೊಳ್ಳುತ್ತವೆ. ಇದೇ ಸತ್ಯ. ಉಳಿದದ್ದೆಲ್ಲ ದೊಡ್ಡ ನಾಟಕ' ಎಂದು ರಮೇಶ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com