ಬಿಬಿಎಂಪಿ ಅಗ್ನಿ ಅವಘಡ: ಮುಖ್ಯ ಇಂಜಿನಿಯರ್ ಸ್ಥಿತಿ ಗಂಭೀರ, ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲು

ಪಾಲಿಕೆ ಕೇಂದ್ರ ಕಚೇರಿಯ ಗುಣಮಟ್ಟ ನಿಯಂತ್ರಣ ಕೊಠಡಿಯಲ್ಲಿ (ಕ್ಯೂಸಿಆರ್‌) ಸಂಭವಿಸಿದ ಅಗ್ನಿ ಅವಘಡದಲ್ಲಿ ಸುಟ್ಟಗಾಯಗಳಿಂದ ಬಳಲುತ್ತಿರುವ ಬಿಬಿಎಂಪಿ ಮುಖ್ಯ ಎಂಜಿನಿಯರ್‌ ಶಿವಕುಮಾರ್‌ (45) ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಪಾಲಿಕೆ ಕೇಂದ್ರ ಕಚೇರಿಯ ಗುಣಮಟ್ಟ ನಿಯಂತ್ರಣ ಕೊಠಡಿಯಲ್ಲಿ (ಕ್ಯೂಸಿಆರ್‌) ಸಂಭವಿಸಿದ ಅಗ್ನಿ ಅವಘಡದಲ್ಲಿ ಸುಟ್ಟಗಾಯಗಳಿಂದ ಬಳಲುತ್ತಿರುವ ಬಿಬಿಎಂಪಿ ಮುಖ್ಯ ಎಂಜಿನಿಯರ್‌ ಶಿವಕುಮಾರ್‌ (45) ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.

ಘಟನೆ ವೇಳೆ ರಾಸಾಯನಿಕ ಗಾಳಿ ಉಸಿರಾಡಿದ ಪರಿಣಾಮ ತೀವ್ರತರ ಉಸಿರಾಟ ಸಮಸ್ಯೆಯಿಂದ ಶಿವಕುಮಾರ್ ಅವರು ಬಳಲುತ್ತಿದ್ದು, ಸ್ಥಿತಿ ಗಂಭೀರವಾಗಿದೆ ಎಂದು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ (ಬಿಎಂಸಿಆರ್‌ಐ) ನಿರ್ದೇಶಕ ಡಾ ರಮೇಶ್ ಕೃಷ್ಣ ಕೆ ಅವರು ಹೇಳಿದ್ದಾರೆ.

ಶಿವಕುಮಾರ್ ಅವರ ಬ್ರಾಂಕೋಸ್ಕೋಪಿ ವರದಿಯು ಶ್ವಾಸಕೋಶದಲ್ಲಿ ಗಂಭೀರ ಗಾಯಗಳಾಗಿರುವುದನ್ನು ತೋರಿಸುತ್ತದೆ ಎಂದು ತಿಳಿಸಿದ್ದಾರೆ.

ಇದೀಗ ಶಿವಕುಮಾರ್ ಅವರಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದು, ಇದಕ್ಕಾಗಿ ವೈದ್ಯರು ಎಕ್ಸ್‌ಟ್ರಾಕಾರ್ಪೋರಿಯಲ್ ಮೆಂಬರೇನ್ ಆಕ್ಸಿಜನೇಷನ್ (ECMO) ಬೆಂಬಲವನ್ನು ಶಿಫಾರಸು ಮಾಡಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಸಿಎಂಒ ಸೌಲಭ್ಯ ಇಲ್ಲದ ಕಾರಣ ಸೋಮವಾರ ತಡರಾತ್ರಿ ಶೇಷಾದ್ರಿಪುರದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ, ಅಲ್ಲಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ಅಂಗಗಳು ತೀವ್ರತರವಾಗಿ ದುರ್ಬಲಗೊಂಡಾಗ ಆ ವ್ಯಕ್ತಿಗೆ ECMO ಬೆಂಬಲವನ್ನು ಒದಗಿಸಲಾಗುತ್ತದೆ. ಇದು ಹೃದಯ-ಶ್ವಾಸಕೋಶದ ಬೈ-ಪಾಸ್ ಯಂತ್ರವನ್ನು ಹೋಲುವಂತಿರುತ್ತದೆ, ಇದು ರೋಗಿಯ ರಕ್ತವನ್ನು ದೇಹದ ಹೊರಗೆ ಪಂಪ್ ಮಾಡುತ್ತದೆ ಮತ್ತು ಆಮ್ಲಜನಕವನ್ನು ನೀಡುತ್ತದೆ, ಹೃದಯ ಮತ್ತು ಶ್ವಾಸಕೋಶಗಳಿಗೆ ವಿಶ್ರಾಂತಿ ನೀಡುತ್ತದೆ.

ವೈದ್ಯರ ಸತತ ಪ್ರಯತ್ನಗಳ ಹೊರತಾಗಿಯೂ ಕಳೆದ ಕೆಲವು ದಿನಗಳಿಂದ ಶಿವಕುಮಾರ್ ಅವರ ಆರೋಗ್ಯ ಸ್ಥಿತಿಯಲ್ಲಿ ಸ್ವಲ್ಪವೂ ಬದಲಾವಣೆಗಳು ಕಂಡುಬರುತ್ತಿಲ್ಲ ಎಂದು ಹೇಳಲಾಗುತ್ತಿದೆ,

ಕಿರಣ್ ಹಾಗೂ ಜ್ಯೋತಿ (26) ಅವರ ಸ್ಥಿತಿ ಕೂಡ ಗಂಭೀರವಾಗಿದೆ ಎಂದು ಹೇಳಲಾಗುತ್ತಿದ್ದು, ಇಬ್ಬರನ್ನೂ ಐಸಿಯುವಿನಲ್ಲಿ ಇರಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಇನ್ನುಳಿದ ನಾಲ್ವರು ಗಾಯಾಳುಗಳಾದ ಸಂತೋಷ್ ಕುಮಾರ್ (38), ಶ್ರೀಧರ್ (37), ಸಿರಾಜ್ (29) ಮತ್ತು ಮನೋಜ್ (23) ಚೇತರಿಸಿಕೊಳ್ಳುತ್ತಿದ್ದು, ಅವರನ್ನು ಐಸಿಯುನಿಂದ ವಾರ್ಡ್'ಗೆ ಸ್ಥಳಾಂತರಿಸಲಾಗಿದೆ ಎಂದು ಡಾ ರಮೇಶ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com