ಬಯಲಲ್ಲಿ ಮೂತ್ರ ವಿಸರ್ಜನೆ: ವರ್ತೂರಿನಲ್ಲಿ ಟೆಕ್ಕಿ, ಸೋದರ ಮಾವನ ಮೇಲೆ ಹಲ್ಲೆ, ಪ್ರಕರಣ ದಾಖಲು

ವರ್ತೂರು ಪೊಲೀಸ್ ವ್ಯಾಪ್ತಿಯ ಬಳಗೆರೆ ರಸ್ತೆ ಬಳಿಯ ಖಾಲಿ ಜಾಗದಲ್ಲಿ ಶನಿವಾರ ಸಂಜೆ ಬಯಲಿನಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದ 36 ವರ್ಷದ ಟೆಕ್ಕಿ ಮತ್ತು ಅವರ ಸೋದರ ಮಾವನಿಗೆ ಅಪರಿಚಿತರ ಗುಂಪೊಂದು ಥಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ವರ್ತೂರು ಪೊಲೀಸ್ ವ್ಯಾಪ್ತಿಯ ಬಳಗೆರೆ ರಸ್ತೆ ಬಳಿಯ ಖಾಲಿ ಜಾಗದಲ್ಲಿ ಶನಿವಾರ ಸಂಜೆ ಬಯಲಿನಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದ 36 ವರ್ಷದ ಟೆಕ್ಕಿ ಮತ್ತು ಅವರ ಸೋದರ ಮಾವನಿಗೆ ಅಪರಿಚಿತರ ಗುಂಪೊಂದು ಥಳಿಸಿದೆ.

ಒಡಿಶಾ ಮೂಲದ ಸುರೇಶ್ (ಹೆಸರು ಬದಲಿಸಲಾಗಿದೆ) ಎಂಬ ಟೆಕ್ಕಿ ಕುಟುಂಬದೊಂದಿಗೆ ಬಳಗೆರೆ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದಾರೆ. ಸುರೇಶ್ ಮತ್ತು ಅವರ ಕುಟುಂಬ 12 ವರ್ಷಗಳ ಹಿಂದೆ ಬೆಂಗಳೂರಿಗೆ ಸ್ಥಳಾಂತರವಾಗಿತ್ತು. ಅವರ  35 ವರ್ಷದ ಸೋದರ ಮಾವ ಉದ್ಯಮಿಯಾಗಿದ್ದಾರೆ. ರಾತ್ರಿ 8 ರಿಂದ 8.10 ರ ನಡುವೆ ಮದ್ಯ ಖರೀದಿಗೆ ತೆರಳಿದಾಗ ದಾಳಿ ನಡೆದಿದೆ.

ಮನೆಗೆ ಹಿಂದಿರುಗುವಾಗ ಟೆಕ್ಕಿಯ ಸೋದರ ಮಾವ ಖಾಲಿ ಪ್ಲಾಟ್‌ಗೆ ಹೋಗಿ ಮೂತ್ರ ವಿಸರ್ಜನೆ ಮಾಡುವುದನ್ನು ಕಂಡ ಅಪರಿಚಿತ ವ್ಯಕ್ತಿಗಳು ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿ ಜಗಳ ಆರಂಭಿಸಿದ್ದಾರೆ. ಟೆಕ್ಕಿ ತನ್ನ ಸೋದರ ಮಾವನ ರಕ್ಷಣೆಗೆ ಧಾವಿಸಿದಾಗ ಆತನನ್ನು ಮಳೆನೀರಿನ ಚರಂಡಿಗೆ ನೂಕಿದ್ದಾರೆ. ಇದರಿಂದ ಆತನ ತಲೆಗೆ ತೀವ್ರ ಪೆಟ್ಟಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದು ಮೆಡಿಕೋ-ಲೀಗಲ್ ಕೇಸ್ ಆಗಿದ್ದರಿಂದ ಆಸ್ಪತ್ರೆಯವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸಂತ್ರಸ್ತನ ಹೇಳಿಕೆ ದಾಖಲಿಸಿಕೊಂಡಿರುವ ವರ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಟೆಕ್ಕಿ, “ನನ್ನ ತಲೆಗೆ 12 ಹೊಲಿಗೆಗಳಿವೆ. ಮೊದಲಿಗೆ ಗುಂಪು ನನ್ನ ಸೋದರ ಮಾವನ ಮೇಲೆ ಹಲ್ಲೆ ನಡೆಸಿತು. ಅವರ ರಕ್ಷಣೆಗೆ ಧಾವಿಸಿದಾಗ ನನ್ನನ್ನು ಅಲ್ಲಿಯೇ ಇದ್ದ  ಚರಂಡಿಗೆ ತಳ್ಳಿದರು. ನನಗೆ ತಲೆಗೆ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿತ್ತು. ನಂತರ ನನ್ನ ಸೋದರ ಮಾವ ಹತ್ತಿರದ ನರ್ಸಿಂಗ್ ಹೋಮ್‌ಗೆ ಕರೆದೊಯ್ದರು, ಬಳಿಕ ಅಲ್ಲಿಂದ ಮತ್ತೊಂದು ಆಸ್ಪತ್ರೆಗೆ ಕರೆದೊಯ್ದರು ಎಂದು ತಿಳಿಸಿದರು. 

ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ವೈದ್ಯರ ಸಮ್ಮುಖದಲ್ಲಿ ಪೊಲೀಸರು ಟೆಕ್ಕಿಯ ಹೇಳಿಕೆಯನ್ನು ದಾಖಲಿಸಿಕೊಂಡರು. “ಈ ದಾಳಿಯು ಕ್ಷುಲ್ಲಕ ವಿಚಾರಕ್ಕೆ ನಡೆದಿದೆ. ಆರೋಪಿಗಳನ್ನು ಇನ್ನೂ ಬಂಧಿಸಬೇಕಿದೆ. ಅವರ ಸುಳಿವುಗಳಿಗಾಗಿ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದೇವೆ. ದಾಳಿ ನಡೆದ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾಗಳಿಲ್ಲ. ಇದು ಕತ್ತಲೆಯಲ್ಲಿ ಸಂಭವಿಸಿದೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಇತರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com