ಕೋವಿಡ್ ಹಗರಣವನ್ನು ತನಿಖೆಗೆ ವಹಿಸಿದರೆ ಸುಧಾಕರ್ ಮೈಮೇಲೆ ಚೇಳು ಬಿದ್ದಂತೆ ಹೌಹಾರುತ್ತಿರುವುದೇಕೆ?
ಬೆಂಗಳೂರು: ಕೋವಿಡ್ ನಿವಾರಣೆ ಹೆಸರಿನಲ್ಲಿ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಕುರಿತು ತನಿಖೆಗೆ ವಹಿಸಿದರೆ ಮಾಜಿ ಸಚಿವ ಡಾ.ಕೆ. ಸುಧಾಕರ್ ಅವರಿಗೆ ಭಯವೇಕೆ ಎಂದು ಕಾಂಗ್ರೆಸ್ ಮಂಗಳವಾರ ಪ್ರಶ್ನಿಸಿದೆ.
ಬಿಜೆಪಿ ನೇತೃತ್ವದ ಸರ್ಕಾರ ಇದ್ದಾಗ ನಾನು ಯಾವ ತಪ್ಪನ್ನೂ ಮಾಡಿಲ್ಲ. ಯಾವ ತನಿಖೆಗೂ ಹೆದರುವುದಿಲ್ಲ. ಕಾಂಗ್ರೆಸ್ ದ್ವೇಷ ರಾಜಕಾರಣ ಮಾಡುತ್ತಿದೆ’ ಎಂದು ಮಾಜಿ ಸಚಿವ ಸುಧಾಕರ್ ಅವರು ಹೇಳಿಕೆ ನೀಡಿದ್ದರು.
ಈ ಹೇಳಿಕೆ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಕ್ರಿಯೆ ನೀಡಿರುವ ರಾಜ್ಯ ಕಾಂಗ್ರೆಸ್, ಕೋವಿಡ್ ಹಗರಣದ ತನಿಖೆ ಕುರಿತು ಸುಧಾಕರ್ ಅವರು ಮೈಮೇಲೆ ಚೇಳು ಬಿದ್ದಂತೆ ಹೌಹಾರುತ್ತಿರುವುದೇಕೆ? ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ ಎಂದರೆ ಕುಂಬಳಕಾಯಿಯ ಕಳ್ಳರು ಇವರೇ ಎಂದರ್ಥವಲ್ಲವೇ’ ಎಂದು ತಿರುಗೇಟು ನೀಡಿದೆ.
‘ಸುಧಾಕರ್ ಅವರೇ, ಕೋವಿಡ್ ಹಗರಣವೊಂದನ್ನು ತನಿಖೆಗೆ ವಹಿಸುವುದು ದ್ವೇಷ ರಾಜಕಾರಣ ಹೇಗಾಗುತ್ತದೆ?, ಹಗರಣದ ಕಡೆ ನಾವು ಬೆರಳು ತೋರಿಸಿದಾಗ ಸಾಕ್ಷಿ ಎಲ್ಲಿದೆ, ತನಿಖೆಯಾಗಲಿ ಎನ್ನುವ ಬಿಜೆಪಿಗರು ತನಿಖೆಗೆ ವಹಿಸಿದಾಕ್ಷಣ ದ್ವೇಷ ರಾಜಕಾರಣ ಎಂದು ಚೀರಾಡುತ್ತಾರೆ. ಬಿಜೆಪಿಗರು ಸತ್ಯ ಹರೀಶ್ಚಂದ್ರನ ಮರಿ ಮೊಮ್ಮಕ್ಕಳಾಗಿದ್ದರೆ ಆತಂಕಪಡುವುದೇಕೆ’ ಎಂದು ಹೇಳಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ