
ಬೆಂಗಳೂರು: ಹಾವೇರಿ ತಾಲೂಕಿನ ಆಲದಕಟ್ಟೆ ಗ್ರಾಮದ ಪಟಾಕಿ ಸಿಡಿಮದ್ದು ಗೋದಾಮಿನಲ್ಲಿ ನಾಲ್ವರು ಕಾರ್ಮಿಕರು ಸಜೀವ ದಹನವಾಗಿರುವ ಘಟನೆ ಸಂಬಂಧ ಶೀಘ್ರದಲ್ಲೇ ತನಿಖೆಗೆ ಆದೇಶಿಸಲಾಗುವುದು ಎಂದು ಜಿಲ್ಲಾ ಸಚಿವ ಶಿವಾನಂದ ಪಾಟೀಲ್ ಅವರು ಬುಧವಾರ ಹೇಳಿದರು.
ದುರ್ಘಟನೆ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಗೋದಾಮಿನಲ್ಲಿ ಹೆಚ್ಚಿನ ಪ್ರಮಾಣದ ಪಟಾಕಿಗಳನ್ನು ಸಂಗ್ರಹಿಸಲಾಗಿದೆ ಎಂಬ ಮಾಹಿತಿ ಇದೆ. ಅಲ್ಲದೆ, ಸುರಕ್ಷತಾ ಕ್ರಮಗಳನ್ನು ಪಾಲಿಸಿಲ್ಲ. ಜನವಸತಿ ಪ್ರದೇಶಗಳಲ್ಲಿ ಪಟಾಕಿ ಅಂಗಡಿ ಮತ್ತು ಗೋದಾಮುಗಳ ಕಾರ್ಯಾಚರಣೆಗೆ ಹೇಗೆ ಅನುಮತಿಸಲಾಯಿತು? ಈ ಬಗ್ಗೆ ತನಿಖೆಗೆ ಆದೇಶಿಸಲಾಗುವುದು ಎಂದು ಹೇಳಿದರು.
ಇದೊಂದು ದುರದೃಷ್ಟಕರ ಘಟನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸಲಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಾನೂನು ಜಾರಿಗೆ ತರಲಾಗುವುದು ಎಂದು ತಿಳಿಸಿದರು.
Advertisement