ಬೆಳಗಾವಿ: 1 ತಾಸು ತಡವಾಗಿ ಶುರುವಾದ ಅಧಿವೇಶನ, ಸದಸ್ಯರ ಆಕ್ಷೇಪ

ಚಳಿಗಾಲದ ಅಧಿವೇಶನದ ಮೊದಲ ದಿನವೇ ಒಂದು ಗಂಟೆ ತಡವಾಗಿ ಕಲಾಪ ಅರಂಭಿಸಿದ್ದಕ್ಕೆ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು.
ಬೆಳಗಾವಿ ಚಳಿಗಾಲ ಅಧಿವೇಶನ.
ಬೆಳಗಾವಿ ಚಳಿಗಾಲ ಅಧಿವೇಶನ.

ಬೆಳಗಾವಿ: ಚಳಿಗಾಲದ ಅಧಿವೇಶನದ ಮೊದಲ ದಿನವೇ ಒಂದು ಗಂಟೆ ತಡವಾಗಿ ಕಲಾಪ ಅರಂಭಿಸಿದ್ದಕ್ಕೆ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆಯಿತು.

ಕಲಾಪವನ್ನು ತಡವಾಗಿ ಆರಂಭಿಸಿದ್ದಕ್ಕೆ ಸ್ಪೀಕರ್ ಯು.ಟಿ.ಖಾದರ್ ಅವರನ್ನು ಪ್ರಶ್ನಿಸಿದ ಸದಸ್ಯರು, ಸದನದ ನಿಯಮಗಳ ಬಗ್ಗೆ ಪಾಠ ಮಾಡಿದರು.

ಅಧಿವೇಶನ ಆರಂಭಗೊಳ್ಳುತ್ತಿದ್ದಂತೆ ಮಾತನಾಡಿದ ಮಾಜಿ ಸಚಿವ ಸುರೇಶ್ ಕುಮಾರ್ ಅವರು, ಮೊದಲ ದಿನವೇ ಕಲಾಪ ಒಂದು ಗಂಟೆ ವಿಳಂಬವಾದರೆ ಹೇಗೆ? ಇದರಿಂದ ರಾಜ್ಯಕ್ಕೆ ನಾವು ಯಾವ ಸಂದೇಶ ಕಳುಹಿಸುತ್ತಾ ಇದ್ದೇವೆ? ಏನೂ ಕಾರಣವಿಲ್ಲದೆ ಇಷ್ಟು ವಿಳಂಬ ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ನಾವೆಲ್ಲ ಬೆಳಿಗ್ಗೆ 11 ಕ್ಕೆ ಸರಿಯಾಗಿ ಬಂದು ಕೂತಿದ್ದೆವು. ಆದರೆ ಒಂದು ಗಂಟೆ ತಡವಾಗಿ ಆರಂಭಿಸಲಾಗಿದೆ. ಕಲಾಪದ ಆರಂಭಕ್ಕೆ ನಾವು ಕಾದು ಕೂರುವಂತಾದದ್ದು ಸರಿಯಲ್ಲ. ಇದು ಸದನಕ್ಕೆ ನೀವು ತೋರಿಸುವ ಗೌರವವೇ? ಎಂದು ಪ್ರಶ್ನಿಸಿದರು.

ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಅವರು, ‘ಸದನಕ್ಕೆ ಯಾರು ಬರುತ್ತಾರೋ ಬಿಡುತ್ತಾರೋ, ಅವರಿಗಾಗಿ ಕಾಯುತ್ತಾ ಸಮಯ ವ್ಯರ್ಥ ಮಾಡುವುದು ಸರಿಯಲ್ಲ. ನೀವಂತೂ ಬಂದು ಕುಳಿತು ಕಲಾಪವನ್ನು ಸರಿಯಾದ ಸಮಯಕ್ಕೆ ಆರಂಭಿಸಬೇಕು’ ಎಂದು ಸ್ಪೀಕರ್ ಅವರನ್ನು ಉದ್ದೇಶಿಸಿ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾರಂಭವೊಂದರಲ್ಲಿ ಭಾಗವಹಿಸಿ ಹುಬ್ಬಳ್ಳಿಯಿಂದ ರಸ್ತೆ ಮಾರ್ಗವಾಗಿ ಬರಬೇಕಿದ್ದ ಕಾರಣ, ಸದನಕ್ಕೆ ತಡವಾಗಿ ಬಂದಿದ್ದರು. ಇದೇ ಕಾರಣಕ್ಕೆ ಕಲಾಪ ಆರಂಭ ತಡವಾಯಿತು ಎಂದು ಮೂಲಗಳು ತಿಳಿಸಿವೆ.

ಸೋಮವಾರದಿಂದ ಆರಂಭವಾದ ಚಳಿಗಾಲದ ಅಧಿವೇಶನದಲ್ಲಿ ಶಾಸಕರು ಮತ್ತು ಸಚಿವರ ಗೈರು ಹಾಜರಿ ಕಂಡು ಬಂದಿತ್ತು.

ಅಧಿವೇಶನದಲ್ಲಿ 80 ಕಾಂಗ್ರೆಸ್ ಶಾಸಕರು, 45 ಬಿಜೆಪಿ ಮತ್ತು 10 ಜೆಡಿಎಸ್ ಶಾಸಕರು ಮಾತ್ರ ಹಾಜರಿರುವುದು ಕಂಡು ಬಂದಿತ್ತು.

ಸಿಎಂ ಸಿದ್ದರಾಮಯ್ಯ, ಸಚಿವರಾದ ಎಚ್‌ಕೆ ಪಾಟೀಲ್, ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ, ಜಿ.ಪರಮೇಶ್ವರ, ಪ್ರಿಯಾಂಕ್ ಖರ್ಗೆ, ಕೃಷ್ಣ ಬೈರೇಗೌಡ ಸೇರಿದಂತೆ ವಿಪಕ್ಷ ನಾಯಕ ಆರ್.ಅಶೋಕ ಮತ್ತಿತರರು ಉಪಸ್ಥಿತರಿದ್ದರು.

ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಚಿವ ಜಮೀರ್ ಅಹಮದ್ ಖಾನ್ ತೆಲಂಗಾಣದಲ್ಲಿ ಉಳಿದುಕೊಂಡಿರುವುದರಿಂದ ಅಧಿವೇಶನಕ್ಕೆ ಗೈರು ಹಾಜರಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com