ಬೆಳೆ ನಷ್ಟ ಪರಿಹಾರವನ್ನು ಮೂರು ಪಟ್ಟು ಹೆಚ್ಚಿಸಬೇಕು: ಸರ್ಕಾರಕ್ಕೆ ಆರ್.ಅಶೋಕ್ ಆಗ್ರಹ

ಬರದಿಂದ ತತ್ತರಿಸಿರುವ ರೈತರಿಗೆ ಮುಂಗಾರು ಮಳೆ ಕೈಕೊಟ್ಟು ಬೆಳೆ ನಷ್ಟವಾಗಿದೆ. ಹೀಗಾಗಿ ಸರ್ಕಾರ ಬೆಳೆ ನಷ್ಟ ಪರಿಹಾರವನ್ನು ಮೂರು ಪಟ್ಟು ಹೆಚ್ಚಿಸಬೇಕು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಮಂಗಳವಾರ ಒತ್ತಾಯಿಸಿದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ್
ವಿರೋಧ ಪಕ್ಷದ ನಾಯಕ ಆರ್.ಅಶೋಕ್
Updated on

ಬೆಳಗಾವಿ: ಬರದಿಂದ ತತ್ತರಿಸಿರುವ ರೈತರಿಗೆ ಮುಂಗಾರು ಮಳೆ ಕೈಕೊಟ್ಟು ಬೆಳೆ ನಷ್ಟವಾಗಿದೆ. ಹೀಗಾಗಿ ಸರ್ಕಾರ ಬೆಳೆ ನಷ್ಟ ಪರಿಹಾರವನ್ನು ಮೂರು ಪಟ್ಟು ಹೆಚ್ಚಿಸಬೇಕು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಮಂಗಳವಾರ ಒತ್ತಾಯಿಸಿದರು.

ಪ್ರತಿಪಕ್ಷ ನಾಯಕರಾದ ಬಳಿಕ ಅಧಿವೇಶನದಲ್ಲಿ ಮಾಡಿದ ಮೊದಲ ಭಾಷಣದಲ್ಲಿ ಆರ್. ಅಶೋಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಆವರಿಸಿರುವ ಬರ ಕುರಿತು ಅಲ್ಪಾವಧಿ ಚರ್ಚೆಯಲ್ಲಿ ಪಾಲ್ಗೊಂಡ ಅವರು, ಬರ ಪರಿಹಾರಕ್ಕಾಗಿ ಈವರೆಗೆ ಸರ್ಕಾರ ಏನೂ ಮಾಡಿಲ್ಲ. ಅಧಿವೇಶನದಲ್ಲಿ ಪ್ರತಿಪಕ್ಷ ಪ್ರಶ್ನೆ ಮಾಡುತ್ತದೆ ಎಂಬ ಕಾರಣಕ್ಕೆ ರೈತರಿಗೆ 2 ಸಾವಿರ ರೂ. ಪರಿಹಾರ ವಿತರಿಸುವುದಾಗಿ ಘೋಷಣೆ ಮಾಡಲಾಗಿದೆ. ಆದರೆ ಅದು ಘೋಷಣೆಯಾಗಷ್ಟೇ ಉಳಿದಿದೆ. ಈವರೆಗೆ ಒಂದು ಪೈಸೆಯೂ ಡಿಬಿಟಿ ಮೂಲಕ ಸಂದಾಯವಾಗಿಲ್ಲ. ಅಧಿಕಾರಿಗಳನ್ನು ವಿಚಾರಿಸಿದರೆ ಒಂದು ಎಕರೆ, ಎರಡು ಎಕರೆ ಇರುವವರಿಗೆ 500-600 ರೂ. ನೀಡಲಾಗುತ್ತದೆ ಎಂದು ಹೇಳುತ್ತಾರೆ. ಹೀಗಾದರೆ ರೈತರನ್ನು ನೀವು ಯಾವ ದೃಷ್ಟಿಯಲ್ಲಿ ಕಾಣುತ್ತೀರಾ ಎಂದು ಚಾಟಿ ಬೀಸಿದರು.

ಸರ್ಕಾರ ಬಳಿ ಹಣ ಇಲ್ಲ ಅಂತೇನೂ ಇಲ್ಲ. ತೆಲಂಗಾಣದಲ್ಲಿ ಇಲ್ಲಿನ ಯೋಜನೆಗಳ ಜಾಹೀರಾತು ನೀಡಿದ್ದೀರಿ. ಅದಕ್ಕಾಗಿ 7-8 ಕೋಟಿ ರೂ. ಖರ್ಚಾಗಿರಬಹುದು. ತೆಲಂಗಾಣದಲ್ಲೇನು 2 ಸಾವಿರ ರೂ. ಕೊಡುತ್ತಿಲ್ಲ ಎಂದರು. ಅಲ್ಲಿ ನಮ್ಮ ಬಸ್ ಫ್ರೀ ಕೂಡ ಇಲ್ಲ. ಅಲ್ಲಿ ಜಾಹೀರಾತು ಕೊಟ್ಟಿದ್ದು ಕರ್ನಾಟಕದ ತೆರಿಗೆ ಹಣ. ಬರ ಬಂದಿರುವ ಸಂದರ್ಭದಲ್ಲಿ ಒಂದೊಂದು ಪೈಸೆಯೂ ಮುಖ್ಯವಾಗುತ್ತದೆ. ಅಂದು ಕಾಕಾ ಪಾಟೀಲಂಗೂ ಫ್ರೀ, ಮಹದೇವಪ್ಪಂಗೂ ಫ್ರೀ ಎಂದಿರಿ. ಫ್ರೀಯಾಗೇ ಕೊಡಿ. ನಮ್ಮದೇನು ಆಕ್ಷೇಪಣೆ ಇಲ್ಲ. ಆದರೆ ರೈತರು ಸಂಕಷ್ಟದಲ್ಲಿ ಇರುವಾಗ ಅವರಿಗೆ ಏಕೆ ನೆರವು ನೀಡಿಲ್ಲ ಎಂಬುದು ನಮ್ಮ ಪ್ರಶ್ನೆ ಎಂದು ಪ್ರಶ್ನಿಸಿದರು.

ಪ್ರತಿಪಕ್ಷ ನಾಯಕರಾಗುತ್ತಿದ್ದಂತೆ ಬರ ಅಧ್ಯಯನ ಪ್ರವಾಸ ನಡೆಸಿದ್ದ ಆರ್.ಅಶೋಕ ತಾವು ಕಂಡ ಒಂದೊಂದೇ ಘಟನೆಯನ್ನು ಎಳೆಎಳೆಯಾಗಿ ವಿವರಿಸುತ್ತಾ ಗಮನ ಸೆಳೆದರು. ದಾಖಲೆಗಳನ್ನೂ ಸಹ ಹಾಜರುಪಡಿಸಿ ಸರ್ಕಾರದ ಬಾಯಿ ಕಟ್ಟಿಹಾಕಿದರು. ಆದರೆ, ಪ್ರತಿಪಕ್ಷ ನಾಯಕನ ಮಾತನ್ನು ಬೆಂಬಲಿಸಲು ಸದನದಲ್ಲಿ ಹಾಜರಿರಬೇಕಿದ್ದ ಬಿಜೆಪಿ ಶಾಸಕರು ದೊಡ್ಡ ಸಂಖ್ಯೆಯಲ್ಲಿ ಸದನದಿಂದ ಹೊರಗಿದ್ದರು. 20-22 ಶಾಸಕರಷ್ಟೇ ಅಶೋಕ್ ಭಾಷಣದ ವೇಳೆ ಜತೆಗಿದ್ದು ಬೆಂಬಲವಾಗಿ ನಿಂತರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com