ಮಾನವ-ಪ್ರಾಣಿ ಸಂಘರ್ಷ ಪರಿಹಾರಕ್ಕೆ ರೇಲ್ ಬ್ಯಾರಿಕೇಡ್ ಅಗತ್ಯ: ಸಚಿವ ಈಶ್ವರ ಖಂಡ್ರೆ
ಬೆಳಗಾವಿ: ಆನೆ ಸೇರಿದಂತೆ ವನ್ಯಮೃಗಗಳು ಕಾಡಿನಿಂದ ನಾಡಿಗೆ ಬರುತ್ತಿರುವುದು ಹೆಚ್ಚಾಗುತ್ತಿದ್ದು, ಕಾರ್ಯಾಚರಣೆಯ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ವನ್ಯಮೃಗಗಳೂ ಸಾವಿಗೀಡಾಗುತ್ತಿರುವುದು ಆಂತಕದ ವಿಷಯವಾಗಿದೆ. ಈ ನಿಟ್ಟಿನಲ್ಲಿ ಮಾನವ-ಪ್ರಾಣಿ ಸಂಘರ್ಷ ಪರಿಹಾರಕ್ಕೆ ರೇಲ್ ಬ್ಯಾರಿಕೇಡ್ ನಿರ್ಮಾಣ ಅಗತ್ಯವಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಮಂಗಳವಾರ ಹೇಳಿದ್ದಾರೆ.
ಮಂಗಳವಾರ ಸುವರ್ಣ ವಿಧಾನಸೌಧದಲ್ಲಿ ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯ ಉಸ್ತುವಾರಿ ಸಚಿವರಾದ ಕೆ.ಜೆ.ಜಾರ್ಜ್, ಬೋಸರಾಜು ಮತ್ತು ಕೆ.ಎನ್.ರಾಜಣ್ಣ ಹಾಗೂ ಮೂರೂ ಜಿಲ್ಲೆಗಳ ಶಾಸಕರ ಉಪಸ್ಥಿತಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾನವ-ಪ್ರಾಣಿ ಸಂಘರ್ಷದ ವಿರುದ್ಧ ಹೋರಾಡಲು ರೈಲು ಬ್ಯಾರಿಕೇಡ್‌ಗಳ ಪ್ರದೇಶವನ್ನು ವಿಸ್ತರಿಸುವ ಅಗತ್ಯವಿದೆ. ಆದರೆ ಅನುದಾನದ ಕೊರತೆಯಿಂದಾಗಿ ಇದು ಸಾಧ್ಯವಾಗುತ್ತಿಲ್ಲ. ರಾಜ್ಯ ಬಜೆಟ್‌ನಲ್ಲಿ 100 ಕೋಟಿ ರೂ.ಗಳನ್ನು ಮೀಸಲಿಟ್ಟರೂ, ಕಾಮಗಾರಿಯು ನಿಧಾನ ಗತಿಯಲ್ಲಿ ಸಾಗುತ್ತಿದೆ. ಹೀಗಾಗಿ ಆನೆಗಳ ಸಮಸ್ಯೆ ಇರುವ ಭಾಗದ ಶಾಸಕರೊಂದಿಗೆ ಮುಖ್ಯಮಂತ್ರಿ ಬಳಿಗೆ ನಿಯೋಗ ತೆರಳಿ ಹೆಚ್ಚಿನ ಅನುದಾನಕ್ಕೆ ಮನವಿ ಮಾಡೋಣ ಎಂದು ಹೇಳಿದರು.
ಕಳೆದ ಎಪ್ರಿಲ್ ನಿಂದೀಚೆಗೆ ರಾಜ್ಯದಲ್ಲಿ ಒಟ್ಟು 43 ಜನರು ಮಾನವ-ವನ್ಯಜೀವಿ ಸಂಘರ್ಷದಲ್ಲಿ ಸಾವಿಗೀಡಾಗಿದ್ದು, ಈ ಪೈಕಿ 30 ಮಂದಿ ಆನೆ ದಾಳಿಯಿಂದ ಮೃತಪಟ್ಟಿದ್ದಾರೆ. ಚಾಮರಾಜನಗರದಲ್ಲಿ 10, ಕೊಡಗು ಜಿಲ್ಲೆಯಲ್ಲಿ 7, ರಾಮನಗರ 3, ಬೆಂಗಳೂರು ಮತ್ತು ಮೈಸೂರು, ಹಾಸನ ವೃತ್ತದಲ್ಲಿ ತಲಾ 2, ಶಿವಮೊಗ್ಗದಲ್ಲಿ ಒಬ್ಬರು ಆನೆ ದಾಳಿಯಿಂದ ಸಾವಿಗೀಡಾಗಿದ್ದಾರೆ ಎಂದು ಇದೇ ವೇಳೆ ಸಚಿವರು ವಿವರಿಸಿದರು.
ಉಳಿದಂತೆ ಕಾಡುಹಂದಿ ದಾಳಿಗೆ ಇಬ್ಬರು, ಮೊಸಳೆಗೆ ಒಬ್ಬರು ಬಲಿಯಾಗಿದ್ದಾರೆ. ಕರಡಿ ದಾಳಿಯಿಂದ ಇಬ್ಬರು ಸಾವಿಗೀಡಾಗಿದ್ದರೆ, ಚಿರತೆ ದಾಳಿಯಿಂದ 3 ಸಾವು ಸಂಭವಿಸಿದೆ. ಹುಲಿ ದಾಳಿಯಿಂದ 4 ಸಾವು ಸಂಭವಿಸಿದ್ದರೆ, ಕೋತಿ ಕಚ್ಚಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಇದೇ ವೇಳೆ ಸಚಿವರಿಗೆ ಕೆಜೆ.ಜಾರ್ಜ್ ಅವರು ಸಲಹೆಗಳನ್ನೂ ನೀಡಿದರು. ಆನೆಗಳ ಸ್ಥಳಾಂತರ ಕಷ್ಟಸಾಧ್ಯವಾದ ಕೆಲಸ. ರಾಜ್ಯದಲ್ಲಿ ಆನೆಗಳ ಸಂಖ್ಯೆ ಹೆಚ್ಚಾಗಿದೆ. ಕಾಡೊಳಗೆ ಆಹಾರ ಸಿಗುತ್ತಿಲ್ಲ ಎಂಬ ದೂರಿದೆ. ನೀರಿನ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಪುಂಡಾನೆ ಹಿಡಿಯಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ