ಮುಸ್ಲಿಮರ ಕಲ್ಯಾಣಕ್ಕೆ ಹಣ ಮೀಸಲು: ಸಿಎಂ ಹೇಳಿಕೆಗೆ ಬಿಜೆಪಿ ತೀವ್ರ ಆಕ್ಷೇಪ, ಸದನದಲ್ಲಿ ಕೋಲಾಹಲ

ರಾಜ್ಯ ಬಜೆಟ್‌ನಲ್ಲಿ ಅಲ್ಪಸಂಖ್ಯಾತ ಸಮುದಾಯದ ಕಲ್ಯಾಣಕ್ಕಾಗಿ 10 ಸಾವಿರ ಕೋಟಿ ಮೀಸಲಿಡುವುದಾಗಿ ಘೋಷಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಬುಧವಾರ ವಿಧಾನಸಭೆಯಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿತು.
ವಿಧಾನಸಭಾ ಕಲಾಪ
ವಿಧಾನಸಭಾ ಕಲಾಪ

ಬೆಳಗಾವಿ: ರಾಜ್ಯ ಬಜೆಟ್‌ನಲ್ಲಿ ಅಲ್ಪಸಂಖ್ಯಾತ ಸಮುದಾಯದ ಕಲ್ಯಾಣಕ್ಕಾಗಿ 10 ಸಾವಿರ ಕೋಟಿ ಮೀಸಲಿಡುವುದಾಗಿ ಘೋಷಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಬುಧವಾರ ವಿಧಾನಸಭೆಯಲ್ಲಿ ತೀವ್ರ ಕೋಲಾಹಲ ಸೃಷ್ಟಿಸಿತು.

ಇಂದು ವಿಧಾನಸಭೆಯಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ ಬಿಜೆಪಿ ಶಾಸಕ ಸುನೀಲ್ ಕುಮಾರ್ ಅವರು, ಅಧಿವೇಶನ ನಡೆಯುವಾಗ ಸಿಎಂ ಈ ರೀತಿ ಅನುದಾನ ಘೋಷಣೆ ಮಾಡುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ ಮುಖ್ಯಮಂತ್ರಿಗಳು ವಿವರಣೆ ಎಂದು ಆಗ್ರಹಿಸಿದರು.

ಇದಕ್ಕೆ ಧ್ವನಿಗೂಡಿಸಿದ ಬಿಜೆಪಿ ಸದಸ್ಯರು, ಮುಸ್ಲಿಂ ಸಮಾವೇಶದಲ್ಲಿಅಲ್ಪಸಂಖ್ಯಾತರಿಗೆ 10,000 ಕೋಟಿ ರೂ. ಘೋಷಣೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದ ಪಾವಿತ್ರ್ಯತೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಆಡಳಿತ ಪಕ್ಷದ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ತೀವ್ರ ವಾಕ್ಸಮರ ನಡೆಯಿತು.

ರೈತರಿಗೆ ಬರ ಪರಿಹಾರ ನೀಡಲು ಸಾಧ್ಯವಾಗದ ಸರ್ಕಾರ, ವಿಧಾನಸಭೆಯ ಗಮನಕ್ಕೆ ತರದೆ ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ರೂ. ಘೋಷಣೆ ಮಾಡುತ್ತಿದೆ ಎಂದ ಪ್ರತಿಪಕ್ಷ ನಾಯಕ ಆರ್ ಅಶೋಕ್ ಅವರು, ಮುಖ್ಯಮಂತ್ರಿಗಳು ತಮ್ಮ ಹೇಳಿಕೆಯನ್ನು ಹಿಂಪಡೆದು ಸದನದ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ನಾವು ಅಧಿಕಾರದಲ್ಲಿದ್ದಾಗ ಸದನ ನಡೆಯುವಾಗ ಎಲ್ಲೂ ಈ ರೀತಿಯ ಘೋಷಣೆ ಮಾಡಿಲ್ಲ. ಹತ್ತು ಸಾವಿರ ಕೋಟಿ ಬಜೆಟ್ ನಲ್ಲಿ ಅನುದಾನ ಕೊಡುತ್ತೇನೆ ಎಂದು ಸಿಎಂ ಘೋಷಣೆ ಮಾಡಿದ್ದಾರೆ. ಅಧಿವೇಶನ ನಡೆಯುವಾಗ ಈ ರೀತಿ ಮಾತನಾಡುವುದು ಸರಿಯಲ್ಲ ಎಂದರು.

ಸಿಎಂ ಪರವಾಗಿ ಮಾತನಾಡಿದ ಆಡಳಿತ ಪಕ್ಷದ ಸದಸ್ಯರು, ಸಿದ್ದರಾಮಯ್ಯನವರು ಅಲ್ಪಸಂಖ್ಯಾತರ ಇಲಾಖೆಗೆ ಪ್ರತಿ ವರ್ಷ ಬಜೆಟ್ ಹೆಚ್ಚಿಸುವ ಉದ್ದೇಶವಿದ್ದು, ಅಂತಿಮವಾಗಿ ಇಲಾಖೆ ಮೂಲಕ 10 ಸಾವಿರ ಕೋಟಿ ಖರ್ಚು ಮಾಡುವ ಉದ್ದೇಶವಿದೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಅಲ್ಪಸಂಖ್ಯಾತರಿಗೆ ಹಣ ನೀಡುವುದನ್ನು ಬಿಜೆಪಿ ವಿರೋಧಿಸುತ್ತಿದೆ ಎಂದರು.

ಇನ್ನು ಸಿಎಂ ಹೇಳಿದ್ದರಲ್ಲಿ ಏನು ತಪ್ಪಿದೆ? ಹಣಕಾಸಿನ ಯಾವುದೇ ನಿರ್ಧಾರವು ಹೇಗಿದ್ದರೂ ಅನುಮೋದನೆಗಾಗಿ ಈ ಸದನಕ್ಕೆ ಬರಲಿದೆ ಎಂದು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಸಂಸದೀಯ ವ್ಯವಹಾರಗಳ ಸಚಿವ ಹೆಚ್ ಕೆ ಪಾಟೀಲ್ ಮಾತನಾಡಿ, ಬಜೆಟ್ ಅನ್ನು 10,000 ಕೋಟಿ ರೂ.ಗೆ ಹೆಚ್ಚಿಸಲು ಪ್ರಯತ್ನಿಸುವುದಾಗಿ ಸಿಎಂ ಹೇಳಿದ್ದಾರೆ. ಇಲ್ಲಿ ನಿಯಮಗಳ ಉಲ್ಲಂಘನೆ ಏನಾಗಿದೆ? ಅವರು ಹಣ ಮಂಜೂರು ಮಾಡಿದ್ದರೆ ನೀವು ಆಕ್ಷೇಪಿಸಬಹುದು ಎಂದರು.

ಆದರೆ ಆಡಳಿತ ಪಕ್ಷದ ಉತ್ತರಕ್ಕೆ ತೃಪ್ತಿಯಾಗದ ವಿರೋಧ ಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com