ಡಿ.12ಕ್ಕೆ ಬೆಳಗಾವಿಯಲ್ಲಿ ಸುವರ್ಣ ಸಂಭ್ರಮ, ಸಾಂಸ್ಕೃತಿಕ ವೈಭವ ಕಾರ್ಯಕ್ರಮ!

ರಾಜ್ಯಕ್ಕೆ ‘ಕರ್ನಾಟಕ’ ಎಂದು ಮರುನಾಮಕರಣಗೊಂಡು 50 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ವಿಧಾನಮಂಡಲದ ವತಿಯಿಂದ ಡಿ.12ರಂದು ಸಂಜೆ 6 ಗಂಟೆಗೆ ಸುವರ್ಣ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಬಳಿ ‘ಸುವರ್ಣ ಸಂಭ್ರಮ’ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ಅವರು ಶುಕ್ರವಾರ ಹೇಳಿದರು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಳಗಾವಿ: ರಾಜ್ಯಕ್ಕೆ ‘ಕರ್ನಾಟಕ’ ಎಂದು ಮರುನಾಮಕರಣಗೊಂಡು 50 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ವಿಧಾನಮಂಡಲದ ವತಿಯಿಂದ ಡಿ.12ರಂದು ಸಂಜೆ 6 ಗಂಟೆಗೆ ಸುವರ್ಣ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಬಳಿ ‘ಸುವರ್ಣ ಸಂಭ್ರಮ’ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ಅವರು ಶುಕ್ರವಾರ ಹೇಳಿದರು.

ಸುವರ್ಣ ವಿಧಾನಸೌಧದಲ್ಲಿ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆಳ್ವಾಸ್ ನುಡಿಸಿರಿ ವಿರಾಸತ್ ಅವರ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಭಾ ಕಾರ್ಯಕ್ರಮ ಒಂದು ಗಂಟೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಎರಡೂವರೆ ಗಂಟೆಗಳ ಕಾಲ ನಡೆಯಲಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿ, ಸಚಿವ ಸಂಪುಟದ ಸದಸ್ಯರು ಸೇರಿದಂತೆ ಉಭಯ ಸದನಗಳ ಸದಸ್ಯರು ಭಾಗವಹಿಸಲಿದ್ದಾರೆ. ಈ ವೇಳೆ ವಿಧಾನಸಭೆಯ ಮಾಜಿ ಸ್ಪೀಕರ್ ಗಳು ಹಾಗೂ ವಿಧಾನಪರಿಷತ್ತಿನ ಮಾಜಿ ಸಭಾಪತಿಗಳನ್ನು ಸನ್ಮಾನಿಸಲಾಗುವುದು. ಸಾರ್ವಜನಿಕರಿಗೂ ಮುಕ್ತ ಅವಕಾಶವಿದ್ದು, ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಕಾರ್ಯಕ್ರಮವನ್ನು ಕರ್ನಾಟಕದ ಜನತೆಗೆ ಅರ್ಪಿಸಲಾಗುವುದು ಎಂದು ತಿಳಿಸಿದರು.

ಮಹಾರಾಷ್ಟ್ರ ಹಾಗೂ ಹಿಮಾಚಲ ಪ್ರದೇಶದಲ್ಲಿಯೂ ಎರಡು ವಿಧಾನಸೌಧಗಳಿವೆ. ಇಲ್ಲಿನ ಸುವರ್ಣ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್‍ದೀಪ ಅಲಂಕಾರ ಮಾಡಲಾಗಿದೆ. ಭವಿಷ್ಯದಲ್ಲಿಯೂ ಇದು ಉಪಯುಕ್ತವಾಗುವ ನಿಟ್ಟಿನಲ್ಲಿ ಬಳಸಿಕೊಳ್ಳಲಾಗುವುದು. ಸುವರ್ಣ ವಿಧಾನಸೌಧವು ‘ಉತ್ತರ ಕರ್ನಾಟಕದ ಸ್ವಾಭಿಮಾನದ ಸಂಕೇತ’ ಎಂದು ಹೇಳಿದರು.

ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಸುಮಾರು 150 ಜನ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸುವರ್ಣ ವಿಧಾನಸೌಧವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಉಭಯ ಸದನಗಳ ಜಂಟಿ ಅಧಿವೇಶನವನ್ನು ಇಲ್ಲಿ ಆಯೋಜಿಸಿ ರಾಜ್ಯಪಾಲರನ್ನು ಕರೆಸಿ ಭಾಷಣ ಮಾಡಿಸುವಂತೆ ಸರಕಾರಕ್ಕೆ ಸಲಹೆ ನೀಡಿದ್ದೇವೆ ಎಂದರು.

ಇಲ್ಲಿ 20 ಎಕರೆ ಜಾಗ ಇದೆ. ಶಾಸಕರ ಭವನ ಹಾಗೂ ಅಧಿಕಾರಿಗಳ ವಸತಿ ಕಟ್ಟಡ ನಿರ್ಮಿಸಲು ಸಲಹೆ ನೀಡಿದ್ದೇವೆ. ಈಗ ವಾರ್ಷಿಕ 5 ಕೋಟಿ ರೂ.ಗಳನ್ನು ವಸತಿ ಸೌಲಭ್ಯಕ್ಕಾಗಿ ವ್ಯಯಿಸಲಾಗುತ್ತಿದೆ. ಮಹಾರಾಷ್ಟ್ರ ಹಾಗೂ ಹಿಮಾಚಲ ಪ್ರದೇಶಕ್ಕೆ ನಾವು ಹೋಗಿ ಅಲ್ಲಿನ ವ್ಯವಸ್ಥೆ ನೋಡಿಕೊಂಡು ಬಂದು, ಇಲ್ಲಿ ಇನ್ನೂ ಉತ್ತಮ ವ್ಯವಸ್ಥೆ ಕಲ್ಪಿಸಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.

ಸಕ್ಕರೆ ನಿರ್ದೇಶನಾಲಯ, ಕೃಷ್ಣ ಭಾಗ್ಯ ಜಲ ನಿಗಮ ಸೇರಿದಂತೆ ಅನೇಕ ಕಚೇರಿಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರ ಮಾಡಬೇಕು ಎಂದು ಸರಕಾರ ಹೇಳಿದೆ. ಆದರೆ, ಕೆಲವು ಐಎಎಸ್ ಅಧಿಕಾರಿಗಳು ಬೇರೆ ದಾರಿ ಹುಡುಕುತ್ತಿದ್ದಾರೆ ಎಂದು ಇದೇ ವೇಳೆ ಬೇಸರ ವ್ಯಕ್ತಪಡಿಸಿದರು.

ಚಳಿಗಾಲದ ಅಧಿವೇಶನದಲ್ಲಿ ಎಲ್ಲ ಶಾಸಕರು, ಸಚಿವರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ನಿಗದಿಯಂತೆ ಕಾರ್ಯ ಕಲಾಪಗಳನ್ನು ನಡೆಸಲಾಗುತ್ತಿದೆ. ಅಧಿವೇಶನ ವಿಸ್ತರಣೆ ಮಾಡುವ ಯಾವುದೇ ಪ್ರಸ್ತಾವ ಇಲ್ಲ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com