ಕಾರ್ತಿಕ ಮಾಸ ಕೊನೆ ಸೋಮವಾರ: ಬಸವನಗುಡಿ ಕಡಲೆಕಾಯಿ ಪರಿಷೆ ಇಂದು ಆರಂಭ

ಇಂದು ಕಾರ್ತಿಕ ಮಾಸದ ಕೊನೆಯ ಸೋಮವಾರ. ಕಡೆ ಸೋಮವಾರ ಬೆಂಗಳೂರಿನ ಪ್ರಸಿದ್ಧ ಬಸವನಗುಡಿಯ ಬುಲ್ ಟೆಂಪಲ್ ರಸ್ತೆಯಲ್ಲಿರುವ ದೊಡ್ಡ ಗಣಪತಿ ದೇವಸ್ಥಾನದಲ್ಲಿ ವಾರ್ಷಿಕ ಕಡಲೆಕಾಯಿ ಪರಿಷೆ ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಆಚರಣೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಇಂದು ಕಾರ್ತಿಕ ಮಾಸದ ಕೊನೆಯ ಸೋಮವಾರ. ಕಡೆ ಸೋಮವಾರ ಬೆಂಗಳೂರಿನ ಪ್ರಸಿದ್ಧ ಬಸವನಗುಡಿಯ ಬುಲ್ ಟೆಂಪಲ್ ರಸ್ತೆಯಲ್ಲಿರುವ ದೊಡ್ಡ ಗಣಪತಿ ದೇವಸ್ಥಾನದಲ್ಲಿ ವಾರ್ಷಿಕ ಕಡಲೆಕಾಯಿ ಪರಿಷೆ ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಆಚರಣೆ.

ಅದೇ ರೀತಿ ಇಂದು ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ ಆರಂಭವಾಗುತ್ತಿದ್ದು, ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಅವರು ಇಂದು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ. ವಾರ್ಷಿಕ ಮೇಳದ ಸಿದ್ಧತೆಯನ್ನು ನಿನ್ನೆ ಪರಿಶೀಲಿಸಿದ ಅವರು, ಉತ್ಸವವನ್ನು ಪರಿಸರ ಸ್ನೇಹಿಯಾಗಿ ಮಾಡಲು ಕಡಲೆಕಾಯಿ ಖರೀದಿಸುವವರು ತಮ್ಮ ಕೈ ಚೀಲಗಳನ್ನು ಮನೆಯಿಂದ ತರುವಂತೆ, ಸಾಧ್ಯವಾದಷ್ಟು ಪ್ಲಾಸ್ಟಿಕ್ ಚೀಲಗಳನ್ನು ಬಳಸದಂತೆ ಕರೆ ನೀಡಿದರು. 

600ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 7 ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆಯಲ್ಲಿದ್ದೇವೆ. ಬುಲ್ ಟೆಂಪಲ್ ಸುತ್ತಲಿನ ರಸ್ತೆಗಳನ್ನು ವಾಹನ ಸಂಚಾರಕ್ಕಾಗಿ ಮುಚ್ಚಿ ಪರ್ಯಾಯ ಮಾರ್ಗಗಳನ್ನು ನೀಡಲಾಗಿದೆ ಎಂದು ರಾಮಲಿಂಗಾ ರೆಡ್ಡಿ ಹೇಳಿದರು.

ಇದಲ್ಲದೆ, ಈ ವರ್ಷ ಪರಿಸರ ಸ್ನೇಹಿ ಕಡಲೆಕಾಯಿ ಪರಿಷೆಯನ್ನು ನಡೆಸುವ ಉದ್ದೇಶವಿದೆ ಎಂದು ಹೇಳಿದರು. ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದ್ದು, ಭಕ್ತರು, ಪರಿಷೆಗೆ ಆಗಮಿಸುವವರು ತಮ್ಮ ಚೀಲಗಳನ್ನು ಕಡ್ಡಾಯವಾಗಿ ತೆಗೆದುಕೊಂಡು ಬನ್ನಿ ಎಂದರು.

ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದ ವಿವಿಧ ಭಾಗಗಳಿಂದ ಸುಮಾರು 200 ನೆಲಗಡಲೆ ಬೆಳೆಯುವ ರೈತರು ಮತ್ತು ವರ್ತಕರು ಈಗಾಗಲೇ ಆಗಮಿಸಿದ್ದು, ದೇವಸ್ಥಾನದ ಸುತ್ತ ಮುತ್ತ ಕಡಲೆಕಾಯಿ ರಾಶಿ ಹಾಕಿಕೊಂಡು ವ್ಯಾಪಾರದಲ್ಲಿ ತೊಡಗಿದ್ದಾರೆ. 

ಮೇಳದ ವಿಶೇಷತೆಯೇನು?: ಮೇಳದಲ್ಲಿ ಹದಿನೈದಕ್ಕೂ ಹೆಚ್ಚು ಶೇಂಗಾ ತಳಿಗಳು ಲಭ್ಯವಿರುತ್ತವೆ. ಭಾನುವಾರ ಸಹಸ್ರಾರು ಜನರು ಜಾತ್ರೆಗೆ ಭೇಟಿ ನೀಡಿದ್ದು, ರಸ್ತೆಯಲ್ಲಿ ಮಾರಾಟವಾಗುವ ವಿವಿಧ ಬಗೆಯ ತಿನಿಸುಗಳನ್ನು ಸವಿಯುತ್ತಾ, ಶಾಪಿಂಗ್ ಮಾಡಿ ನಾನಾ ಆಟಗಳಲ್ಲಿ ಭಾಗಿಯಾಗಿ ವಿನೋದ ಪಡೆಯುವುದು ಕಂಡುಬಂತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com