ಬೆಂಗಳೂರಿನಲ್ಲಿ 21 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ, ನೈಜೀರಿಯಾ ಪ್ರಜೆ ಬಂಧನ
ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆ ಸಮಯದಲ್ಲಿ ಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದ 21 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಮತ್ತು ನೈಜೀರಿಯಾ ಪ್ರಜೆಯನ್ನು ಬಂಧಿಸಲಾಗಿದೆ ಎಂದು ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ನೈಜೀರಿಯಾ ಪ್ರಜೆಯಿಂದ ಸುಮಾರು 16 ಕೋಟಿ ರೂ. ಮೌಲ್ಯದ 16 ಕೆಜಿ ಎಂಡಿಎಂಎ ಪೌಡರ್ ಮತ್ತು ಹರಳುಗಳು ಹಾಗೂ 5 ಕೋಟಿ ರೂಪಾಯಿ ಮೌಲ್ಯದ 500 ಗ್ರಾಂ ಕೊಕೇನ್ ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಯನ್ನು ಲಿಯೊನಾರ್ಡ್ ಒಕ್ವುಡಿಲಿ(44) ಎಂದು ಗುರುತಿಸಲಾಗಿದ್ದು, ನೈಜೀರಿಯಾದ ಈ ವ್ಯಕ್ತಿ ವ್ಯಾಪಾರಿ ವೀಸಾದ ಮೇಲೆ ಭಾರತಕ್ಕೆ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಲಿಯೊನಾರ್ಡ್ ಕಳೆದ ಒಂದು ವರ್ಷದಿಂದ ಇಲ್ಲಿನ ರಾಮಮೂರ್ತಿ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಆರೋಪಿಯು ಸೋಪ್ ಬಾಕ್ಸ್, ಚಾಕೊಲೇಟ್ ಬಾಕ್ಸ್, ಬೆಡ್ ಶೀಟ್ ಅಥವಾ ಕವರ್ ಗಳಲ್ಲಿ ಮಾದಕ ದ್ರವ್ಯಗಳನ್ನು ಮಾರಾಟ ಮಾಡುತ್ತಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಡ್ರಗ್ಸ್ ಅನ್ನು ಎಲ್ಲಿಂದ ತರುತ್ತಿದ್ದ ಎಂಬ ಬಗ್ಗೆ ವಿಸ್ತೃತ ತನಿಖೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ತಿಳಿಸಿದ್ದಾರೆ.
ಡಿಸೆಂಬರ್ 31ರ ರಾತ್ರಿ ಹೊಸ ವರ್ಷಾಚರಣೆ ವೇಳೆ ವಿವಿಧೆಡೆ ಪಾರ್ಟಿಗಳಿಗೆ ಅಥವಾ ಬಹುಶಃ ರೇವ್ ಪಾರ್ಟಿಗಳಿಗೆ ಸರಬರಾಜು ಮಾಡಲು ಈ ಡ್ರಗ್ಸ್ ಸಂಗ್ರಹಿಸಿಟ್ಟಿರುವುದು ಬೆಳಕಿಗೆ ಬಂದಿದೆ ಎಂದು ಆಯುಕ್ತರು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ