ಬೆಳಗಾವಿ: ಮಹಿಳೆಯನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿರುವ ಅಮಾನವೀಯ ಘಟನೆಗೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಪೊಲೀಸರು ಮಂಗಳವಾರ ಬಂಧನಕ್ಕೊಳಪಡಿಸಿದ್ದಾರೆ.
ಆರೋಪಿಯನ್ನು ಬೆಳಗಾವಿ ತಾಲೂಕಿನ ಹೊಸ ವಂಟಮುರಿ ಗ್ರಾಮದ ನಿವಾಸಿ ಶಿವಪ್ಪ ವನ್ನೂರಿ (50) ಎಂದು ಗುರುತಿಸಲಾಗಿದೆ. ಈತನ ಬಂಧನದೊಂದಿಗೆ ಒಟ್ಟು ಬಂಧಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಪ್ರಕರವನ್ನು ಎಸಿಪಿ ಗಿರೀಶ್ ನೇತೃತ್ವದ ಪೊಲೀಸರ ತಂಡ ತನಿಖೆ ನಡೆಸುತ್ತಿದೆ.
ಸೋಮವಾರ ನಾಲ್ವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು, ಉಳಿದ ನಾಲ್ವರನ್ನು ಸ್ಥಳಕ್ಕೆ ಕರೆದೊಯ್ದು ‘ಪಂಚನಾಮ’ ನಡೆಸಿ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನಂತರ ನ್ಯಾಯಾಲಯ ಎಲ್ಲಾ ಎಂಟು ಆರೋಪಿಗಳನ್ನು ಹದಿನಾಲ್ಕು ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿತು.
ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಒಂದು ಕೆಎಸ್‌ಆರ್‌ಪಿ ಒಂದು ಡಿಎಆರ್ ಪೊಲೀಸ್ ಘಟಕ ಹಾಗೂ ಕಾಕತಿ ಪೊಲೀಸ್ ಠಾಣೆಯ ಕೆಲ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಈ ನಡುವೆ ಸಂತ್ರಸ್ತ ಮಹಿಳೆಯನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಜಿಲ್ಲಾ ಸಚಿವ ಸತೀಶ ಜಾರಕಿಹೊಳಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭೇಟಿ ಮಾಡಿದರು.
ಈ ವೇಳೆ ಸಂತ್ರಸ್ತ ಮಹಿಳೆಯೊಂದಿಗೆ ಮಾತನಾಡಿದ ಸಚಿವ ಜಾರಕಿಹೊಳಿಯವರು, ಮನೆಗೆ ಆಗಿರುವ ಹಾನಿ, ವೈದ್ಯಕೀಯ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ಭರವಸೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ ಸಿದ್ರಾಮಪ್ಪ ಅವರು, ಇದು ಸೂಕ್ಷ್ಮ ಪ್ರಕರಣವಾಗಿದ್ದು, ತನಿಖೆಗಾಗಿ ತಂಡವನ್ನು ರಚಿಸಲಾಗಿದೆ. ಮತ್ತೊಬ್ಬ ಆರೋಪಿಯನ್ನು ಮಂಗಳವಾರ ಬಂಧಿಸಲಾಗಿದೆ. ಉಳಿದ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಹೇಳಿದರು.
ರಕ್ಷಣೆ ಕೋರಿದ ಜೋಡಿ
ಇನ್ನು ಘಟನೆ ಸಂಬಂಧ ಯುವತಿಯೊಂದಿಗೆ ಪರಾರಿಯಾಗಿದ್ದ ಮಹಿಳೆಯ ಪುತ್ರ ಪೊಲೀಸರ ಮುಂದೆ ಹಾಜರಾಗಿದ್ದು, ರಕ್ಷಣೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಮಂಗಳವಾರ ಬೆಳಗಾವಿಯ ಪೊಲೀಸ್ ಕಮಿಷನರ್ ಕಚೇರಿಗೆ ಇಬ್ಬರೂ ಹಾಜರಾಗಿದ್ದರು ಎಂದು ತಿಳಿದುಬಂದಿದೆ.
ಪರಸ್ಪರ ಪ್ರೀತಿಸುತ್ತಿದ್ದ ದುಂಡಪ್ಪ ಗಡ್ಕರಿ ಹಾಗೂ ಪ್ರಿಯಾಂಕಾ ನಾಯ್ಕ ಭಾನುವಾರ ರಾತ್ರಿ ಗ್ರಾಮದಿಂದ ಪರಾರಿಯಾಗಿದ್ದರು. ಪ್ರಿಯಾಂಕಾ ಪೋಷಕರು ಯುವಕನ ಮನೆಗೆ ನುಗ್ಗಿ ಘೋರ ಕೃತ್ಯ ಎಸಗಿದ್ದರು. ಯುವಕನ ತಾಯಿಯನ್ನು ವಿವಸ್ತ್ರಗೊಳಿಸಿ, ಹಲ್ಲೆ ನಡೆಸಿದ್ದರು.
Advertisement