ಬೆಂಗಳೂರು: ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆಯಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ರಾಮಕೃಷ್ಣಪ್ಪ (70) ಮತ್ತು ಅವರ ಪತ್ನಿ ಮುನಿರಾಮಕ್ಕ (65) ಅವರನ್ನು ಶನಿವಾರ ವಾಲ್ಮೀಕಿ ನಗರದ ಅವರ ನಿವಾಸದಲ್ಲಿ ಹತ್ಯೆ ಮಾಡಲಾಗಿತ್ತು. ಅವರ ಮಗ ನರಸಿಂಹ, ಸೊಸೆ ಭಾಗ್ಯ ಮತ್ತು ಇಬ್ಬರು ಮೊಮ್ಮಕ್ಕಳು ಸೇರಿ ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸರ ಪ್ರಕಾರ ಮೊಮ್ಮಕ್ಕಳಲ್ಲಿ ಒಬ್ಬ ಅಪ್ರಾಪ್ತನಾಗಿದ್ದಾನೆ.
ನರಸಿಂಹ ವ್ಯಾಪಾರದಲ್ಲಿ ನಷ್ಟ ಅನುಭವಿಸಿದ್ದ. ಅವನ ಹೆಂಡತಿ ಹೆತ್ತವರ ಆಸ್ತಿಯನ್ನು ಸ್ವಾಧೀನಪಡಿಸಿಕೊಂಡು ಅವನ ಸಾಲವನ್ನು ತೀರಿಸಲು ಆಸ್ತಿ ಮಾರಾಟ ಮಾಡಲು ಒತ್ತಾಯಿಸುತ್ತಿದ್ದಳು. ಆದರೆ ರಾಮಕೃಷ್ಣಪ್ಪ ಮತ್ತು ಮುನಿರಾಮಕ್ಕ ತಮ್ಮ ಆಸ್ತಿಯನ್ನು ತಮ್ಮ ಐದು ಮಕ್ಕಳಿಗೆ ಅಂದರೆ, ಮಗ ಮತ್ತು ನಾಲ್ಕು ಹೆಣ್ಣು ಮಕ್ಕಳಿಗೆ ಸಮಾನವಾಗಿ ಹಂಚಿಕೊಳ್ಳಬೇಕೆಂದು ಬಯಸಿದ್ದರು. ಇದರಿಂದ ಹತಾಶಳಾದ ಭಾಗ್ಯ ಮತ್ತು ಆಕೆಯ ಮಕ್ಕಳು ದಂಪತಿಯ ತಲೆಗೆ ಕಬ್ಬಿಣದ ರಾಡ್‌ಗಳಿಂದ ಹೊಡೆದು ಕೊಲೆ ಮಾಡಿದ್ದಾರೆ. ನರಸಿಂಹ ಕೊಲೆಯ ಸಂಚು ರೂಪಿಸಿದ್ದ.
ಪುತ್ರನ ಮದುವೆಯ ನಂತರ ಮನೆಯಿಂದ ಹೊರಬಂದು ರಾಮಕೃಷ್ಣಪ್ಪ ಮತ್ತು ಮುನಿರಾಮಕ್ಕ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ದಂಪತಿಯನ್ನು ಕೊಲೆ ಮಾಡಿದ ಬಳಿಕ ಆರೋಪಿಗಳು ಮನೆಗೆ ಬೀಗ ಹಾಕಿ ಪರಾರಿಯಾಗಿದ್ದರು.
ದಂಪತಿಯ ಮಗಳು ಶಕುಂತಲಾ ಅವರಿಗೆ ಕರೆ ಮಾಡಿದರೂ ಸ್ಪಂದಿಸದ ಹಿನ್ನೆಲೆಯಲ್ಲಿ ಭಾನುವಾರ ಮನೆಗೆ ಹೋದಾಗ ಜೋಡಿ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ. ಪೊಲೀಸರು ಆರಂಭದಲ್ಲಿ ನರಸಿಂಹನನ್ನು ಬಂಧಿಸಿದ್ದಾರೆ. ತಪ್ಪೊಪ್ಪಿಗೆಯ ನಂತರ ಇತರ ಮೂವರನ್ನು ಬಂಧಿಸಲಾಯಿತು. ದಂಪತಿಗೆ ಸೂಲಿಬೆಲೆಯಲ್ಲಿ ಎರಡು ಎಕರೆ ಜಮೀನು ಮತ್ತು ಕೆಲವು ನಿವೇಶನಗಳಿದ್ದವು.
Advertisement