ಶಿವಮೊಗ್ಗ: ತೀರ್ಥಹಳ್ಳಿಯಲ್ಲಿ ಕೆಎಫ್​ಡಿ ಪ್ರಕರಣ ಪತ್ತೆ, ಮಹಿಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ

ತೀರ್ಥಹಳ್ಳಿ ತಾಲೂಕಿನ ಅತ್ತಿಸರ ಗ್ರಾಮದಲ್ಲಿ ಕಳೆದ ಗುರುವಾರ ಕೆಎಫ್​ಡಿ (ಕ್ಯಾಸನೂರು ಫಾರೆಸ್ಟ್​ ಡಿಸೀಸ್) ​ಮೊದಲ ಪ್ರಕರಣ ಪತ್ತೆಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಅತ್ತಿಸರ ಗ್ರಾಮದಲ್ಲಿ ಕಳೆದ ಗುರುವಾರ ಕೆಎಫ್​ಡಿ (ಕ್ಯಾಸನೂರು ಫಾರೆಸ್ಟ್​ ಡಿಸೀಸ್) ​ಮೊದಲ ಪ್ರಕರಣ ಪತ್ತೆಯಾಗಿದೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ರಾಜೇಶ್ ಸುರಗಿಹಳ್ಳಿ ಅವರು ಇದನ್ನು ದೃಢಪಡಿಸಿದ್ದಾರೆ. 53 ವರ್ಷದ ಮಹಿಳೆಯಲ್ಲಿ ಕೆಎಫ್​ಡಿ ಪತ್ತೆಯಾಗಿದೆ ಎಂದು ಹೇಳಿದ್ದಾರೆ.

ಡಿಸೆಂಬರ್ 10 ರಂದು ಮಹಿಳೆಗೆ ಜ್ವರ ಕಾಣಿಸಿಕೊಂಡಿದ್ದು, ಕೆಲ ದಿನಗಳು ಕಳೆದರೂ ಜ್ವರ ಕಡಿಮೆಯಾಗಿರಲಿಲ್ಲ. ಈ ವೇಳೆ ವೈದ್ಯರು ಪರೀಕ್ಷೆ ನಡೆಸಿದ್ದು, ವರದಿಯಲ್ಲಿ ಕೆಎಫ್'ಡಿ ಪಾಸಿಟಿವ್ ಬಂದಿದೆ. ಇದೀಗ ಮಹಿಳೆಯನ್ನು ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, 5 ದಿನಗಳ ಕಾಲ ನಿಗಾದಲ್ಲಿ ಇರಿಸಲಾಗಿದೆ ಎಂದು ತಿಳಿಸಿದ್ದಾರೆ,

ಕೆಎಫ್​ಡಿ (ಕ್ಯಾಸನೂರು ಫಾರೆಸ್ಟ್ ಡಿಸೀಸ್) ಮೊದಲ ಬಾರಿಗೆ ಕಾಣಿಸಿಕೊಂಡಿದ್ದು ಸೊರಬ ತಾಲೂಕು ಕ್ಯಾಸನೂರು ಗ್ರಾಮದಲ್ಲಿ. ಅದು 1960ರ ಅಸುಪಾಸು. ಹಾಗಾಗಿ ಇದಕ್ಕೆ ಕೆಎಫ್​ಡಿ ಕಾಯಿಲೆ ಎಂದು ಕರೆಯುತ್ತಾರೆ. ನಂತರ ಈ ರೋಗ ಜಿಲ್ಲೆಯ ಮುಖ್ಯವಾಗಿ ಕಾಡು ಪ್ರದೇಶದಲ್ಲಿ ಕಂಡು ಬರಲು ಪ್ರಾರಂಭಿಸಿತು. ಕಾಡಿನಲ್ಲಿ ಇರುವ ಸಣ್ಣ ಗಾತ್ರದ ಉಣ್ಣೆಗಳು ಮನುಷ್ಯನಿಗೆ ಕಚ್ಚಿದರೆ, ಕೆಎಫ್​ಡಿ ರೋಗ ಮನುಷ್ಯನಿಗೆ ಬರುತ್ತದೆ. ಉಣ್ಣೆಯ ವಾಹಕವಾಗಿ ಪ್ರಾಣಿಗಳು ಕೆಲಸ ಮಾಡುತ್ತಿವೆ.

ಉಣ್ಣೆಗಳು ಪ್ರಮುಖವಾಗಿ ಕಾಡಿನಲ್ಲಿನ ಮಂಗಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಎಲ್ಲಿ ಮಂಗಗಳು ಸಾಯುತ್ತವೆಯೋ ಅಲ್ಲಿ ಈ ಉಣ್ಣೆಗಳು ಬೇರೆ ಪ್ರಾಣಿಗಳ ದೇಹವನ್ನು ಆಶ್ರಿಯಿಸುತ್ತವೆ. ಇದಕ್ಮೆ ಇದನ್ನು ಮಂಗನ ಕಾಯಿಲೆ ಎಂದು ಕರೆಯುತ್ತಾರೆ.

ಕಾಡಂಚಿನ ಗ್ರಾಮಗಳ ಪ್ರಾಣಿಗಳು ಕಾಡಿಗೆ ಹೋದಾಗ ಈ ಉಣ್ಣೆಗಳು ಎಮ್ಮೆ, ಹಸು, ಕುರಿ, ಮೇಕೆಗಳ ಮೂಲಕ ಗ್ರಾಮಕ್ಕೆ ಬರುತ್ತವೆ. ಹಸು, ಮೇಕೆ, ಕುರಿಗಳು ಮನುಷ್ಯನ ಸಂಪರ್ಕಕ್ಕೆ ಬಂದು ಉಣ್ಣೆಗಳು ಮನುಷ್ಯನಿಗೆ ಕಚ್ಚಿದಾಗ ಮನುಷ್ಯನಲ್ಲಿ ಜ್ವರ ಕಾಣಿಸಿಕೊಳ್ಳುತ್ತದೆ. ಈ ಜ್ವರ ಬಂದವರ ರಕ್ತ ಪರೀಕ್ಷೆ ನಡೆಸಿದಾಗ ಅವರಲ್ಲಿ ಕೆಎಫ್​ಡಿ ಪಾಸಿಟಿವ್, ಇಲ್ಲ ನೆಗೆಟಿವ್​ ಪತ್ತೆಯಾಗುತ್ತದೆ.

ನಿರಂತರ ನಾಲ್ಕೈದು ದಿನ ಜ್ವರ ಹೋಗದೆ ಇದ್ದರೆ, ಅವರು ತಕ್ಷಣ ರಕ್ತ ಪರೀಕ್ಷೆ ಮಾಡಿಸಬೇಕಿದೆ. ಈ ರೋಗವು, ಶಿವಮೊಗ್ಗ ಜಿಲ್ಲೆ ಅಲ್ಲದೆ, ಚಿಕ್ಕಮಗಳೂರು, ಉಡುಪಿ, ಚಾಮರಾಜನಗರದಲ್ಲೂ ಕಂಡು ಬಂದಿದೆ. ಸದ್ಯ ಈ ರೋಗಕ್ಕೆ ನಿರ್ದಿಷ್ಟ ಚುಚ್ಚುಮದ್ದು ಇಲ್ಲ. ಇದಕ್ಕೆ ಮುಂಜಾಗ್ರತಾ ಕ್ರಮವೇ ಮದ್ದು.

 ಕಳೆದ ವರ್ಷ ಈ ರೋಗಕ್ಕೆ ವರ್ಷಕ್ಕೆ ಮೂರರಂತೆ ಬೂಸ್ಟರ್ ಡೋಸ್ ನೀಡಲಾಗಿತ್ತು. ಈಗ ಬೂಸ್ಟರ್ ಡೋಸ್ ತಯಾರಿಕೆ ನಿಲ್ಲಿಸಲಾಗಿದೆ. ಕಾಡಂಚಿನ ಗ್ರಾಮದವರಿಗೆ ಆರೋಗ್ಯ ಇಲಾಖೆಯಿಂದ ಕಾಡಿಗೆ ಹೋಗುವವರಿಗೆ ಡಿಎಂಪಿ ಆಯಿಲ್ ನೀಡುತ್ತಾರೆ. ಇದನ್ನು ಕೈ ಕಾಲುಗಳಿಗೆ ಹಚ್ಚಿಕೊಂಡು ಕಾಡಿಗೆ ಹೋಗುವಂತೆ ಹಾಗೂ ಮನೆಗೆ ಬಂದ ನಂತರ ಕೈ ಕಾಲು ತೊಳೆದುಕೊಳ್ಳುವಂತೆ ಸೂಚಿಸಲಾಗಿದೆ. ಈ ಆಯಿಲ್​ಗೆ ಉಣ್ಣೆಗಳು ಅಂಟಿಕೊಳ್ಳುವುದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com