ಸರ್ಕಾರಿ ನೇಮಕಾತಿ ವಿಳಂಬದಿಂದ ವ್ಯವಸ್ಥೆಗೆ ನಷ್ಟ: ಹೈಕೋರ್ಟ್‌ ಅಸಮಾಧಾನ

ಸರ್ಕಾರಿ ನೇಮಕಾತಿಯಲ್ಲಿ ವಿಳಂಬದಿಂದ ವ್ಯವಸ್ಥೆಗೆ ನಷ್ಟವಾಗುವುದಲ್ಲದೇ ಉದ್ಯೋಗಾಕಾಂಕ್ಷಿಗಳಿಗೆ ವಯಸ್ಸಾಗಲಿದೆ. ಒಂದು ರೀತಿಯಲ್ಲಿ ಸರ್ಕಾರವೇ ಅರ್ಹರನ್ನು ಅನರ್ಹವಾಗಿಸುತ್ತದೆ ಎಂದು ಹೈಕೋರ್ಟ್‌ ಬೇಸರ ವ್ಯಕ್ತಪಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಸರ್ಕಾರಿ ನೇಮಕಾತಿಯಲ್ಲಿ ವಿಳಂಬದಿಂದ ವ್ಯವಸ್ಥೆಗೆ ನಷ್ಟವಾಗುವುದಲ್ಲದೇ ಉದ್ಯೋಗಾಕಾಂಕ್ಷಿಗಳಿಗೆ ವಯಸ್ಸಾಗಲಿದೆ. ಒಂದು ರೀತಿಯಲ್ಲಿ ಸರ್ಕಾರವೇ ಅರ್ಹರನ್ನು ಅನರ್ಹವಾಗಿಸುತ್ತದೆ ಎಂದು ಹೈಕೋರ್ಟ್‌ ಬೇಸರ ವ್ಯಕ್ತಪಡಿಸಿದೆ.

ಧಾರವಾಡದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗಾಗಿ ನಿರ್ಮಿಸಿರುವ ಹಾಸ್ಟೆಲ್‌ಗಳಲ್ಲಿ ಸಿಬ್ಬಂದಿ ಮತ್ತು ಮೇಲ್ವಿಚಾರಕರ ಕೊರತೆಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಅರ್ಜಿ ಕೈಗೆತ್ತಿಕೊಂಡು ಸಿಜೆ ಅವರು “ಧಾರವಾಡದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗಾಗಿ ನಿರ್ಮಿಸಿರುವ ಹಾಸ್ಟೆಲ್‌ನಲ್ಲಿ ಸಿಬ್ಬಂದಿ ಕೊರತೆ ಇದೆ ಎಂದು ಸ್ಥಳೀಯವಾಗಿ ಪ್ರಕಟವಾಗುವ ಮರಾಠಿ ಪತ್ರಿಕೆ ವರದಿ ಮಾಡಿದೆ. 2-3 ಹಾಸ್ಟೆಲ್‌ಗಳಲ್ಲಿ ಒಬ್ಬರೇ ವಾರ್ಡನ್‌, ಒಬ್ಬರೇ ಮೇಲ್ವಿಚಾರಕರು ಇದ್ದಾರೆ. ಇದರಿಂದ ಶೈಕ್ಷಣಿಕ ಗುಣಮಟ್ಟ ಕಡಿಮೆಯಾಗಲಿದ್ದು, ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತದೆ. ಇದು ಅವರ ಫಲಿತಾಂಶದಲ್ಲಿ ವ್ಯತ್ಯಾಸ ಉಂಟು ಮಾಡಬಹುದು. ಈ ಕುರಿತು ಸಂಜ್ಞೇಯ ಪರಿಗಣಿಸುವುದು ಅಗತ್ಯ ಎಂದು ನಮಗೆ ಅನ್ನಿಸಿದೆ. ಈ ಸಂಬಂಧ ರಿಜಿಸ್ಟ್ರಿಯು ಅರ್ಜಿ ಸಿದ್ಧಪಡಿಸಿದೆ” ಎಂದರು.

“200 ವಾರ್ಡನ್‌ ಹುದ್ದೆಗಳು ಮಂಜೂರಾಗಿದ್ದು, ಹಂತಹಂತವಾಗಿ ತುಂಬಲಾಗುವುದು ಎಂದು ಸರ್ಕಾರ ಹೇಳಿದೆ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದರ ಅರ್ಥ ಅವುಗಳ ನೇಮಕವಾಗಿಲ್ಲ ಎಂಬುದಾಗಿದೆ. ಬ್ಯಾಕ್‌ಲಾಗ್‌ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಈಗಾಗಲೇ ಸರ್ಕಾರಕ್ಕೆ ನಿರ್ದೇಶಿಸಲಾಗಿದೆ” ಎಂದರು.

ಆಗ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್‌ ಅವರು “ಆಸ್ಟ್ರೇಲಿಯಾ, ಅಮೆರಿಕಾದಲ್ಲಿ ನಿಯಮಿತವಾಗಿ ನೇಮಕಾತಿ ಮಾಡಬೇಕು ಎಂಬ ನಿಯಮವಿದೆ. ಇದು ನಮ್ಮ ಸಂವಿಧಾನದಲ್ಲಿ ಗೈರಾಗಿದೆ. ಏಕೆಂದರೆ, ನಮ್ಮ ಸಂವಿಧಾನ ನಿರ್ಮಾತೃಗಳು ಸರ್ಕಾರಗಳು ತಮ್ಮ ಕೆಲಸ ಮಾಡದೇ ಇರಬಹುದು ಎಂದು ಭಾವಿಸಲಿಲ್ಲ. ಎಲ್ಲರೂ ಅವರ ಕೆಲಸ ಮಾಡಲಿದ್ದಾರೆ ಎಂದು ತಿಳಿದುಕೊಂಡರು. ಹೀಗಾಗಿ, ಅದನ್ನು ಸಂವಿಧಾನದಲ್ಲಿ ಉಲ್ಲೇಖಿಸಲಾಗಿಲ್ಲ” ಎಂದರು.

“ನೀವು (ಸರ್ಕಾರ) ವರ್ಷಗಟ್ಟಲೇ ನೇಮಕಾತಿ ನಡೆಸದಿದ್ದರೆ ಇದರಿಂದ ವ್ಯವಸ್ಥೆಗೆ ಮಾತ್ರ ನಷ್ಟವಾಗುವುದಿಲ್ಲ. ಸಾಕಷ್ಟು ಉದ್ಯೋಗಕಾಂಕ್ಷಿಗಳಿಗೆ ವಯಸ್ಸಾಗಲಿದೆ. ಇದರಿಂದ ಅವರು ಹೊರಗುಳಿಯುತ್ತಾರೆ. ಒಟ್ಟಾರೆ ನೀವು ಅವರನ್ನು ಅನರ್ಹರಾಗಿಸುತ್ತೀರಿ. ಇದು ಉದ್ದೇಶ ಎಂದೆನಿಸುತ್ತದೆ. ನಮ್ಮ ಭಾವನೆಯನ್ನು ತಪ್ಪು ಎಂದು ತೋರಿಸಬೇಕು” ಎಂದರು.

ಸಿಜೆ ಅವರು “ಎಲ್ಲಾ ಇಲಾಖೆಗಳಲ್ಲೂ ನಿಯಮಿತವಾಗಿ ನೇಮಕಾತಿ ನಡೆಯಬೇಕು. ಯಾರೂ ಓದದ ಪತ್ರಿಕೆಗಳಿಗೆ ನೇಮಕಾತಿ ಜಾಹೀರಾತು ನೀಡಲಾಗುತ್ತದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಂತಿಮವಾಗಿ ಪೀಠವು “ಪ್ರಕರಣದಲ್ಲಿ ವಕೀಲ ನಿತಿನ್‌ ರಮೇಶ್‌ ಅವರನ್ನು ಅಮಿಕಸ್‌ ಕ್ಯೂರಿಯನ್ನಾಗಿ ನೇಮಕ ಮಾಡಲಾಗಿದೆ. ಸಂಬಂಧಿತ ಎಲ್ಲಾ ದಾಖಲೆಗಳನ್ನು ರಿಜಿಸ್ಟ್ರಿಯು ಅಮಿಕಸ್‌ ಅವರಿಗೆ ನೀಡಬೇಕು. ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಲಾಗಿದೆ" ಎಂದು ಆದೇಶದಲ್ಲಿ ತಿಳಿಸಿತು.

ಮುಂದುವರೆದು,"ನ್ಯಾಯಾಲಯದಲ್ಲಿ ಹಾಜರಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು ಪ್ರಕರಣವನ್ನು ಗಂಭೀರವಾಗಿ ಪರಿಶೀಲಿಸಲಾಗುವುದು. ಮುಂದಿನ ವಿಚಾರಣೆ ವೇಳೆಗೆ ಸ್ಥಿತಿಗತಿ ವರದಿ ಸಲ್ಲಿಸಲಾಗುವುದು ಎಂದಿದ್ದಾರೆ” ಎಂದು ಆದೇಶದಲ್ಲಿ ದಾಖಲಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com