ವಸತಿ ರಹಿತರಿಗೆ ಸೂರು: ಆಶ್ರಯ ಯೋಜನೆ ಜಾರಿಗೊಳಿಸಲಾಗದು- ಹೈಕೋರ್ಟ್‌

ವಸತಿ ರಹಿತರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ರೂಪಿಸಿದ್ದ ಮಹತ್ವಾಕಾಂಕ್ಷಿ ಯೋಜನೆಯಾದ ಆಶ್ರಯ ಯೋಜನೆಯನ್ನು ಜಾರಿಗೊಳಿಸಲಾಗದು ಎಂದು ಹೈಕೋರ್ಟ್‌ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ವಸತಿ ರಹಿತರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ರೂಪಿಸಿದ್ದ ಮಹತ್ವಾಕಾಂಕ್ಷಿ ಯೋಜನೆಯಾದ ಆಶ್ರಯ ಯೋಜನೆಯನ್ನು ಜಾರಿಗೊಳಿಸಲಾಗದು ಎಂದು ಹೈಕೋರ್ಟ್‌ ಹೇಳಿದೆ.

ಆಶ್ರಯ ಈ ಯೋಜನೆಯಡಿ ಹಂಚಿಕೆಯಾದ ನಿವೇಶನಗಳಿಗೆ ಹಕ್ಕು ಪತ್ರ ವಿತರಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಮೈಸೂರಿನ ಶ್ರೀರಾಮಪುರ ಪಟ್ಟಣ ಪಂಚಾಯಿತಿ ನಿವಾಸಿ ಬಿ ರೂಪಾ ಸೇರಿದಂತೆ 40 ನಿವಾಸಿಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಪಿ ಬಿ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಆಶ್ರಯ ಯೋಜನೆ ಕುರಿತಂತೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಉಲ್ಲೇಖಿಸಿ, ಈ ಆದೇಶವನ್ನು ಹೊರಡಿಸಿದೆ.

ಸಂವಿಧಾನದ 162ನೇ ವಿಧಿಯ ಅಡಿಯಲ್ಲಿ ಲಭ್ಯವಾದ ಕಾರ್ಯಕಾರಿ ಅಧಿಕಾರ ಬಳಕೆ ರಾಜ್ಯ ಸರ್ಕಾರವು ಆಶ್ರಯ ಯೋಜನೆ ರೂಪಿಸಿದೆ. ಸರ್ಕಾರವು ತನ್ನ ಅಧಿಕಾರ ವ್ಯಾಪ್ತಿ ಮೀರಿ ಆಶ್ರಯ ಯೋಜನೆ ರೂಪಿಸಿದೆ. ಇದರಿಂದ ಯೋಜನೆಯನ್ನು ಜಾರಿ ಮಾಡಲಾಗದು ಮತ್ತು ಯೋಜನೆಯನ್ನು ರದ್ದುಪಡಿಸಲಾಗಿದೆ ಎಂಬುದಾಗಿ ಡಾ. ಬಿ ಆರ್ ಅಂಬೇಡ್ಕರ್ ದಲಿತ ಮತ್ತು ಹಿಂದುಳಿದ ಅಲ್ಪಸಂಖ್ಯಾತರ ಗ್ರಾಮಾಭಿವೃದ್ಧಿ ಸಂಘ ಮತ್ತು ಕರ್ನಾಟಕ ಸರ್ಕಾರ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಘೋಷಣೆ ಮಾಡಿದೆ. ಈ ಕಾನೂನಿನ ಘೋಷಣೆಯು ಗಂಗಾಜಲದಂತೆ ಸ್ಪಷ್ಟವಾಗಿರುವ ಕಾರಣ, ಆಶ್ರಯ ಯೋಜನೆಯಡಿ ಮೇಲ್ಮನವಿದಾರರಿಗೆ ಯಾವುದೇ ಪರಿಹಾರ ಕಲ್ಪಿಸಲಾಗುವುದಿಲ್ಲ ಎಂದು ವಿಭಾಗೀಯ ಪೀಠ ತನ್ನ ಆದೇಶಲ್ಲಿ ತಿಳಿಸಿದೆ.

ಮೇಲ್ಮನವಿಗೆ ಸಂಬಂಧಿಸಿದ ದಾಖಲೆಗಳ ಮತ್ತು ಏಕ ಸದಸ್ಯ ಪೀಠದ ಆದೇಶವನ್ನು ಪರಿಶೀಲಿಸಿದ ವಿಭಾಗೀಯ ಪೀಠವು ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿತು. ಏಕ ಸದಸ್ಯ ಪೀಠದ ಆದೇಶವು ಸೂಕ್ತವಾಗಿದೆ. ಮತ್ತೊಂದೆಡೆ ಆಶ್ರಯ ಯೋಜನೆ ಜಾರಿ ಮಾಡಲಾಗದು ಎಂಬುದಾಗಿ ಸುಪ್ರೀಂ ಕೋರ್ಟ್‌ ಹೇಳಿದೆ. ಹಾಗಾಗಿ, ಮೇಲ್ಮನವಿದಾರರಿಗೆ ಯಾವುದೇ ಪರಿಹಾರ ಕಲ್ಪಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಮೇಲ್ಮನವಿಯನ್ನು ವಜಾಗೊಳಿಸಿದೆ.

ಮೇಲ್ಮನವಿದಾರರ ಪರ ವಕೀಲರು, ಆಶ್ರಯ ಯೋಜನೆಯಡಿ ನಿವೇಶನಗಳನ್ನು ಮಂಜೂರು ಮಾಡಿರುವುದರಿಂದ ಸಹಜವಾಗಿ ಹಕ್ಕುಪತ್ರವನ್ನು ಹಂಚಿಕೆ ಮಾಡಬೇಕಿದೆ ಎಂದು ವಾದ ಮಂಡಿಸಿದ್ದರು.

ಏನಿದು ಪ್ರಕರಣ?
ಮೈಸೂರು ಕಸಬಾ ಹೋಬಳಿಯ ಶ್ರೀರಾಮಪುರದ ಪಟ್ಟಣ ಪಂಚಾಯತಿ ನಿವಾಸಿಗಳಾದ ಮೇಲ್ಮನವಿದಾರಾದ ಪ್ರೇಮಾ ಮತ್ತು ಮೈಸೂರಿನ ಇತರ 39 ನಿವಾಸಿಗಳು 2011ರಲ್ಲಿ ಆಶ್ರಯ ಯೋಜನೆಯಡಿ ತಮಗೆ ಮಂಜೂರಾದ ನಿವೇಶನಗಳಿಗೆ ಸಂಬಂಧಿಸಿದಂತೆ ಹಕ್ಕು ಪತ್ರಗಳನ್ನು ನೀಡುವಂತೆ ತಾಲ್ಲೂಕು ಪಂಚಾಯಿತಿಗೆ ಮನವಿ ಮಾಡಿದ್ದರು.

ಆ ಮನವಿಯನ್ನು ತಿರಸ್ಕರಿಸಿ 2019ರ ಫೆಬ್ರವರಿ 21ರಂದು ತಾಲ್ಲೂಕು ಪಂಚಾಯಿತಿ ಪತ್ರ ವ್ಯವಹಾರ ನಡೆಸಿತ್ತು. ಅದನ್ನು ರದ್ದುಪಡಿಸಲು ಮತ್ತು ಹಕ್ಕು ಪತ್ರ ಹಂಚಿಕೆ ಮಾಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ 2019ರಲ್ಲಿ ರೂಪಾ ಮತ್ತಿತರ ಫಲಾನುಭವಿಗಳು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ವಜಾಗೊಳಿಸಿ 2023ರ ಫೆಬ್ರುವರಿ 21ರಂದು ಏಕಸದಸ್ಯ ಪೀಠದ ಆದೇಶಿಸಿತ್ತು.

ಶ್ರೀರಾಮಪುರ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿಸಿ ರಾಜ್ಯ ನಗರಾಭಿವೃದ್ಧಿ ಇಲಾಖೆ 2021ರ ಮಾರ್ಚ್‌ 26ರಂದು ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆ ಹೊರಬೀಳುವ ವೇಳೆಗೆ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿರಲಿಲ್ಲ. ಇದರಿಂದ ಆಶ್ರಯ ನಿವೇಶನಗಳ ಹಂಚಿಕೆ ಪ್ರಕ್ರಿಯೆಯನ್ನು ಗ್ರಾಮ ಪಂಚಾಯಿತಿ ಮುಂದುರಿಸಿಲ್ಲ.

ಪರಿಣಾಮ ಶ್ರೀರಾಮಪುರ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಫಲಾನುಭವಿಗಳ ಆಯ್ಕೆ ಮತ್ತು ಆಶ್ರಯ ನಿವೇಶನ ಹಂಚಿಕೆ ಪ್ರಕ್ರಿಯೆಯನ್ನು ಹೊಸದಾಗಿ ಕೈಗೊಳ್ಳಬೇಕಿತ್ತು. ಆದರೆ, ಶ್ರೀರಾಮಪುರ ಗ್ರಾಮ ಪಂಚಾಯಿತಿ ಸದ್ಯ ಅಸ್ವಿತ್ವದಲ್ಲಿ ಇಲ್ಲದ ಕಾರಣ ಆಶ್ರಯ ಯೋಜನೆ ನಿವೇಶನಗಳ ಹಂಚಿಕೆಗೆ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಮುಂದುವರಿಸುವ ಪರಿಸ್ಥಿತಿಯಲ್ಲಿ ಸರ್ಕಾರ ಇಲ್ಲ ಎಂದು ಸರ್ಕಾರಿ ವಕೀಲರು ತಿಳಿಸಿದ್ದಾರೆ. ಇದರಿಂದ ಅರ್ಜಿಯನ್ನು ವಜಾಗೊಳಿಸಲಾಗುತ್ತಿದೆ ಎಂದು ಏಕ ಸದಸ್ಯ ಪೀಠ ತನ್ನ ಆದೇಶದಲ್ಲಿ ತಿಳಿಸಿತ್ತು. ಈ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com