ಬೆಳಗಾವಿ: ಕನ್ನಡ ಧ್ವಜ ಅಳವಡಿಸಿದ್ದಕ್ಕೆ ಯುವಕರಿಗೆ ಥಳಿತ; ಸಂಕೇಶ್ವರ ಪಟ್ಟಣದಲ್ಲಿ ಉದ್ವಿಗ್ನತೆ, ಐವರ ವಿರುದ್ಧ ಎಫ್‌ಐಆರ್

ಛತ್ರಪತಿ ಶಿವಾಜಿ ಪ್ರತಿಮೆ ಬಳಿ ಕನ್ನಡ ಧ್ವಜವನ್ನು ಹಾಕಿದ್ದಕ್ಕಾಗಿ ಯುವಕರ ಮೇಲೆ ಹಲ್ಲೆ ನಡೆಸಲಾಗಿದ್ದು, ಬೆಳಗಾವಿ ಜಿಲ್ಲೆಯ ಸಂಕೇಶ್ವರ ಪಟ್ಟಣವು ಉದ್ವಿಗ್ನಗೊಂಡಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಐವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಒಬ್ಬನನ್ನು ಬಂಧಿಸಿದ್ದಾರೆ.
ಎಫ್ಐಆರ್ (ಸಾಂಕೇತಿಕ ಚಿತ್ರ)
ಎಫ್ಐಆರ್ (ಸಾಂಕೇತಿಕ ಚಿತ್ರ)

ಬೆಳಗಾವಿ: ಛತ್ರಪತಿ ಶಿವಾಜಿ ಪ್ರತಿಮೆ ಬಳಿ ಕನ್ನಡ ಧ್ವಜವನ್ನು ಹಾಕಿದ್ದಕ್ಕಾಗಿ ಯುವಕರ ಮೇಲೆ ಹಲ್ಲೆ ನಡೆಸಲಾಗಿದ್ದು, ಬೆಳಗಾವಿ ಜಿಲ್ಲೆಯ ಸಂಕೇಶ್ವರ ಪಟ್ಟಣವು ಉದ್ವಿಗ್ನಗೊಂಡಿದೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಐವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಒಬ್ಬನನ್ನು ಬಂಧಿಸಿದ್ದಾರೆ.

ನಾಲ್ಕು ದಿನಗಳ ಹಿಂದೆ ಸಂಕೇಶ್ವರ ಪಟ್ಟಣದ ಸಮೀಪದ ಅಂಕಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶಿವಾಜಿ ಪ್ರತಿಮೆ ಬಳಿ ಕನ್ನಡ ಧ್ವಜ ಹಾಕಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗುಂಪೊಂದು, ಕೂಡಲೇ ಬಾವುಟವನ್ನು ತೆರವು ಮಾಡುವಂತೆ ಒತ್ತಾಯಿಸಿತು.

ಇದಕ್ಕೆ ನಿರಾಕರಿಸಿದಾಗ ಕನ್ನಡ ಧ್ವಜವನ್ನು ಅಳವಡಿಸಿದ ಯುವಕರ ಮೇಲೆ ಗುಂಪು ಹಲ್ಲೆ ನಡೆಸಿದೆ. ಬಳಿಕ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ನಿಟ್ಟಿನಲ್ಲಿ ಪೊಲೀಸರ ನಿರ್ಲಕ್ಷ್ಯವನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಈ ಸಂಬಂಧ ಪೊಲೀಸರು ಕೊನೆಗೂ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಮತ್ತು ಶಿವಾಜಿ ಅವರ ಪ್ರತಿಮೆಗಳನ್ನು ಒಟ್ಟಿಗೆ ಸ್ಥಾಪಿಸುವ ಪ್ರಸ್ತಾವನೆ ಇತ್ತು. ಆದಾಗ್ಯೂ, ಪ್ರಸ್ತಾವನೆಯು ವಿರೋಧವನ್ನು ಎದುರಿಸಿತು ಮತ್ತು ಪ್ರತಿಮೆಗಳನ್ನು ಪ್ರತ್ಯೇಕ ಸ್ಥಳಗಳಲ್ಲಿ ಸ್ಥಾಪಿಸಲು ಒತ್ತಾಯಿಸಲಾಯಿತು. ಈ ಬೆಳವಣಿಗೆಗಳ ನಡುವೆ ಶಿವಾಜಿ ಪ್ರತಿಮೆ ಬಳಿ ಕನ್ನಡ ಧ್ವಜ ಅಳವಡಿಸಿದ್ದು ಘಟನೆಗೆ ಕಾರಣವಾಯಿತು ಎಂದು ಮೂಲಗಳು ತಿಳಿಸಿವೆ.

ಈ ಪ್ರದೇಶದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com