ರೈಲ್ವೆ ಸೇವಾ ನಿಯಮಗಳ ಪ್ರಕಾರ 2ನೇ ಪತ್ನಿಯೂ ಸಮಾನ ಪಿಂಚಣಿಗೆ ಅರ್ಹಳು: ಹೈಕೋರ್ಟ್

ಭಾರತೀಯ ರೈಲ್ವೆ ಸೇವಾ ನಿಯಮಗಳ ಪ್ರಕಾರ ಒಬ್ಬ ಅಥವಾ ಹೆಚ್ಚಿನ ಪತ್ನಿಯರು ಕುಟುಂಬ ಪಿಂಚಣಿ ಪಡೆಯಲು ಅರ್ಹರಾಗಿದ್ದು, ಸಾವನ್ನಪ್ಪಿದ ಉದ್ಯೋಗಿಯ ಪತ್ನಿಯರ ನಡುವೆ ಕುಟುಂಬ ಪಿಂಚಣಿಯು ಸಮಾನವಾಗಿ ಹಂಚಿಕೆಯಾಗಲಿದೆ ಎಂದು ಹೈಕೋರ್ಟ್ ಆದೇಶಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಭಾರತೀಯ ರೈಲ್ವೆ ಸೇವಾ ನಿಯಮಗಳ ಪ್ರಕಾರ ಒಬ್ಬ ಅಥವಾ ಹೆಚ್ಚಿನ ಪತ್ನಿಯರು ಕುಟುಂಬ ಪಿಂಚಣಿ ಪಡೆಯಲು ಅರ್ಹರಾಗಿದ್ದು, ಸಾವನ್ನಪ್ಪಿದ ಉದ್ಯೋಗಿಯ ಪತ್ನಿಯರ ನಡುವೆ ಕುಟುಂಬ ಪಿಂಚಣಿಯು ಸಮಾನವಾಗಿ ಹಂಚಿಕೆಯಾಗಲಿದೆ ಎಂದು ಹೈಕೋರ್ಟ್ ಆದೇಶಿಸಿದೆ.

ಮೊದಲನೇ ಪತ್ನಿ ಮತ್ತು ಆಕೆಯ ಪುತ್ರಿಯರಿಗೆ ಶೇ.50ರಷ್ಟು ಕುಟಂಬ ಪಿಂಚಣಿ ಮಂಜೂರು ಮಾಡುವಂತೆ ನೈರುತ್ಯ ರೈಲ್ವೆಗೆ ಆದೇಶಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಾವನ್ನಪ್ಪಿದ ರೈಲ್ವೆ ಉದ್ಯೋಗಿಯ ಎರಡನೇ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ಭಾಗಶಃ ಪುರಸ್ಕರಿಸದೆ.

ಪಿಂಚಣಿ ಪಾವತಿಸಲು ಯಾವೆಲ್ಲಾ ನಿಯಮಗಳು ಅನ್ವಯಿಸಲಿವೆಯೋ ಅವುಗಳನ್ನು ಪಿಂಚಣಿ ಪಾವತಿಸಲು ಅನ್ವಯಿಸಲಾಗುವುದು. ಉದ್ಯೋಗಿಯ ಹಕ್ಕುಗಳು ಅಥವಾ ಅವರ ಕುಟುಂಬವು ಪಿಂಚಣಿ ನಿಯಮವನ್ನು ಅವಲಂಬಿಸಿರುತ್ತದೆ. ನಿಯಮಗಳು ಇಲ್ಲದಿದ್ದರೆ ಪಿಂಚಣಿ ಇಲ್ಲ. ಒಂದೊಮ್ಮೆ ನಿಯಮಗಳು ಇದ್ದರೆ ಪಿಂಚಣೆಯನ್ನು ನಿಯಮದ ಪ್ರಕಾರ ಪಾವತಿಸಬೇಕು” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ರೈಲು ಸೇವೆಗಳ (ಪಿಂಚಣಿ) ನಿಯಮಗಳು 1993ಕ್ಕೆ 2016ರಲ್ಲಿ ತಿದ್ದುಪಡಿ ಮಾಡಿ ರೈಲು ಸೇವೆಗಳ (ಪಿಂಚಣಿ) ತಿದ್ದುಪಡಿ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಒಬ್ಬರು ಅಥವಾ ಹೆಚ್ಚು ವಿಧವೆಯರು ಕುಟುಂಬ ಪಿಂಚಣಿ ಪಡೆಯಲು ನಿಯಮದಲ್ಲಿ ಸ್ಪಷ್ಟವಾಗಿ ಹಕ್ಕು ಕಲ್ಪಿಸಲಾಗಿದೆ. ಸಾವನ್ನಪ್ಪಿದ ಉದ್ಯೋಗಿಯ ವಿಧವೆ ಪತ್ನಿಯರಿಗೆ ಪಿಂಚಣಿಯನ್ನು ಸಮಾನವಾಗಿ ಹಂಚಿಕೆ ಮಾಡಲಾಗುತ್ತದೆ. ರೈಲ್ವೆ ಉದ್ಯೋಗಿಗೆ ಒಬ್ಬರಿಗಿಂತ ಹೆಚ್ಚು ಪತ್ನಿಯರಿದ್ದಾಗ ಇದು ಅನ್ವಯಿಸುತ್ತದೆ, ಸಂವಿಧಾನದ ಉದ್ದೇಶಕ್ಕೆ ಪೂರಕವಾಗಿ ನಿಯಮಗಳಿವೆ” ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಅರ್ಜಿದಾರೆ/ಎರಡನೇ ಪತ್ನಿ ಶೇ. 50ರಷ್ಟು ಕುಟುಂಬ ಪಿಂಚಣಿಗೆ ಅರ್ಹವಾಗಿದ್ದಾರೆ. ಎಚ್ಚರಿಕೆಯ ಮಾತೇನೆಂದರೆ ನಿಯಮಗಳು ಅರ್ಜಿದಾರರಿಗೆ ಹಕ್ಕನ್ನು ನೀಡುತ್ತವೆ ಎಂಬ ಆಧಾರದ ಮೇಲೆ ಅರ್ಜಿದಾರೆ ಪಿಂಚಣೆಗೆ ಅರ್ಹರಾಗಿದ್ದಾರೆ. ನಿಯಮಗಳು ಈ ರೀತಿಯ ಪರಿಸ್ಥಿತಿ ಕಲ್ಪಿಸದಿದ್ದರೆ ಮತ್ತು ಕುಟುಂಬ ಪಿಂಚಣಿ ಒದಗಿಸದಿದ್ದರೆ, ಅರ್ಜಿದಾರರು ಕುಟುಂಬ ಪಿಂಚಣಿಗೆ ಅರ್ಹರಾಗಿರುವುದಿಲ್ಲ” ಎಂದು ಆದೇಶದಲ್ಲಿ ಹೇಳಲಾಗಿದೆ.

ವಿಚಾರಣಾಧೀನ ನ್ಯಾಯಾಲಯವು ಶೇ.50ರಷ್ಟು ಪಿಂಚಣಿಯನ್ನು ಅರ್ಜಿದಾರರಿಗೆ ಪಾವತಿಸಲು ಆದೇಶ ಮಾಡುವ ಮೂಲಕ ಪ್ರಮಾದ ಎಸಗಿದೆ. ಪಿಂಚಣಿ ಹೊರತುಪಡಿಸಿ, ಪಕ್ಷಕಾರರು ಇತರೆ ಲಾಭಗಳಿಗೆ (ಬೆನಿಫಿಟ್ಸ್‌) ವಾದಿಸುತ್ತಿರುವುದು ವಿಚಾರಣಾಧೀನ ನ್ಯಾಯಾಲಯದ ಆದೇಶಕ್ಕೆ ಒಳಪಟ್ಟಿರುತ್ತದೆ. ನೈರುತ್ಯ ರೈಲ್ವೆ ಮಂಡಳಿಯು ಶೇ. 50ರಷ್ಟು ಪಿಂಚಣಿಯನ್ನು ಅರ್ಜಿದಾರೆಗೆ ಬಿಡುಗಡೆ ಮಾಡಬೇಕು” ಎಂದು ನ್ಯಾಯಾಲಯವು ಆದೇಶಿಸಿದೆ.

ಈ ನೆಲೆಯಲ್ಲಿ ಮೊದಲ ಪತ್ನಿ ಮತ್ತು ಆಕೆಯ ಇಬ್ಬರು ಪುತ್ರಿಯರಿಗೆ ಶೇ. 50ರಷ್ಟು ಪಿಂಚಣಿ ಬಿಡುಗಡೆ ಮಾಡಲು ಆದೇಶಿಸಿರುವ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಆದೇಶದಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ. ನೈರುತ್ಯ ರೈಲ್ವೆ ಮಂಡಳಿಯು ಎರಡು ವಾರಗಳಲ್ಲಿ ಪಕ್ಷಕಾರರಿಗೆ ಪಿಂಚಣಿ ಪಾವತಿಸಬೇಕು” ಎಂದು ನ್ಯಾಯಾಲಯ ನಿರ್ದೇಶಿಸಿದೆ.

ಅರ್ಜಿದಾರೆ ಹಾಗೂ ಎರಡನೇ ಪತ್ನಿ ಪ್ರತಿನಿಧಿಸಿದ್ದ ವಕೀಲ ಮಧುಕರ್‌ ನಾಡಿಗ್‌ ಅವರು “ಇಡೀ ಪಿಂಚಣಿಗೆ ಅರ್ಜಿದಾರೆ ಅರ್ಹರಾಗಿದ್ದು, ಎರಡನೇ ಪತ್ನಿಯ ಹಕ್ಕು ಪರಿಗಣಿಸದೇ ಮೊದಲ ಪತ್ನಿ ಮತ್ತು ಅವರ ಪುತ್ರಿಯರಿಗೆ ಶೇ. 50ರಷ್ಟು ಪಿಂಚಣಿ ಪಾವತಿಸಲು ಆದೇಶಿಸಿರುವುದು ದೋಷಪೂರಿತ” ಎಂದು ವಾದಿಸಿದ್ದರು.

ಮೊದಲ ಪತ್ನಿ ಮತ್ತು ಅವರ ಪುತ್ರಿಯರನ್ನು ಪ್ರತಿನಿಧಿಸಿದ್ದ ವಕೀಲ ಮೊಹಮ್ಮದ್‌ ಮುಜಾಸಿಮ್‌ ಅವರು “ಹಿಂದೂ ವಿವಾಹ ಕಾಯಿದೆ ಪ್ರಕಾರ ಎರಡನೇ ಪತ್ನಿ/ಅರ್ಜಿದಾರೆಯು ಕಾನೂನಾತ್ಮಕ ಪತ್ನಿಯಲ್ಲ. ಹೀಗಾಗಿ, ಪಿಂಚಣಿಯನ್ನು ಕಾನೂನಾತ್ಮಕವಾಗಿ ವಿವಾಹವಾಗಿರುವ ಪತ್ನಿ ಮತ್ತು ಅವರ ಮಕ್ಕಳಿಗೆ ಪಾವತಿಸಬೇಕು. ಈ ನೆಲೆಯಲ್ಲಿ ಕೌಟುಂಬಿಕ ನ್ಯಾಯಾಲಯದ ಆದೇಶದಲ್ಲಿ ಲೋಪವಾಗಿಲ್ಲ” ಎಂದು ವಾದಿಸಿದ್ದರು.

ನೈಋತ್ಯ ರೈಲ್ವೆ ಮಂಡಳಿ ಪ್ರತಿನಿಧಿಸಿದ್ದ ವಕೀಲ ಎ ಚಂದ್ರ ಚೂಡ್‌ ಅವರು ಮೊದಲ ಪತ್ನಿ ಮತ್ತು ಅವರ ಪುತ್ರಿಯ ವಾದ ಅಲ್ಲಗಳೆದಿದ್ದು, “ನಿಯಮಗಳ ಪ್ರಕಾರ ಪಿಂಚಣಿ ಪಾವತಿಸಲಾಗುತ್ತದೆ. ನಿಯಮದ ಪ್ರಕಾರ ಇಬ್ಬರೂ ಪತ್ನಿಯರಿಗೆ ಪಿಂಚಣಿ ಪಾವತಿಸಲು ಅಧಿಕಾರವಿದೆ. ಹೀಗಾಗಿ, ಎರಡನೇ ಪತ್ನಿಯ ವಾದದಲ್ಲಿ ದೋಷ ಹುಡಕಲಾಗದು. ಆದರೆ, ಉಳಿದ ಲಾಭಗಳು ಮೇಲಿಂದ ಮೇಲೆ ರೈಲ್ವೆ ಜಾರಿ ಮಾಡಿರುವ ನಿಯಮಗಳು, ಮಾರ್ಗಸೂಚಿ ಅಥವಾ ಸುತ್ತೋಲೆ ಆಧರಿಸಿರುತ್ತದೆ” ಎಂದಿದ್ದರು.

ಏನಿದು ಪ್ರಕರಣ?

ನೈಋತ್ಯ ರೈಲ್ವೆಯ ಹಿರಿಯ ವಿಭಾಗೀಯ ಸಿಬ್ಬಂದಿ ವ್ಯವಸ್ಥಾಪಕರ ಕಚೇರಿಯಲ್ಲಿ ಸಂಚಾರ ವಿಭಾಗದಲ್ಲಿ ಪಾಯಿಂಟ್ಸ್‌ಮನ್‌ ಆಗಿ ಆರ್‌ ರಮೇಶ್‌ ಬಾಬು ಎಂಬವರು ಕೆಲಸ ಮಾಡುತ್ತಿದ್ದರು. ಮೊದಲ ಪತ್ನಿಯೊಂದಿಗಿನ ವಿವಾಹದಲ್ಲಿ ಬಾಬು ಅವರಿಗೆ ಮೂವರು ಪುತ್ರಿಯರಿದ್ದಾರೆ. 1999ರ ಡಿಸೆಂಬರ್‌ 9ರಂದು ಬಾಬು ಅವರು ಪುಷ್ಪಾ ಅವರೊಂದಿಗೆ ತಿರುಪತಿಯಲ್ಲಿ ಎರಡನೇ ವಿವಾಹ ಮಾಡಿಕೊಂಡಿದ್ದರು. ಈ ಸಂಬಂಧದಲ್ಲಿ ಅವರಿಗೆ 22 ವರ್ಷದ ಪುತ್ರಿ ಇದ್ದಾರೆ. 2021ರ ಮೇ 4ರಂದು ಬಾಬು ನಿಧನರಾಗಿದ್ದು, ಮೊದಲ ಪತ್ನಿಯು ರೈಲ್ವೆಯಿಂದ ಬಾಬು ಅವರಿಗೆ ಬರಬೇಕಾದ ಸೌಲಭ್ಯ ಮತ್ತು ಪಿಂಚಣಿ ಕೋರಿದ್ದರು. ಅಲ್ಲದೇ, ಎರಡನೇ ಪುತ್ರಿಗೆ ಅನುಕಂಪದ ಉದ್ಯೋಗ ಬಯಸಿದ್ದರು. ಈ ಮಧ್ಯೆ, ಎರಡನೇ ಪತ್ನಿಯು ತಾನು ಸೌಲಭ್ಯಕ್ಕೆ ಅರ್ಹರಾಗಿರುವುದಾಗಿ ತಿಳಿಸಿರುವುದರಿಂದ ಸೌಲಭ್ಯ/ಪಾವತಿಗಳನ್ನು ಅಂತಿಮಗೊಳಿಸಲಾಗಿಲ್ಲ. ಪಕ್ಷಕಾರರ ಸ್ಥಿತಿಗತಿಗೆ ಸಂಬಂಧಿಸಿದಂತೆ ಕೌಟುಂಬಿಕ ನ್ಯಾಯಾಲಯವು ಡಿಕ್ಲೇರೇಟರಿ ಡಿಕ್ರಿ ಮಾಡಿದ ಬಳಿಕ ಸೌಲಭ್ಯ/ಪಾವತಿ ಮಾಡಲಾಗುವುದು ಎಂದು ನೈರುತ್ಯ ರೈಲ್ವೆ ಮಂಡಳಿ ಮೊದಲ ಪತ್ನಿಗೆ ತಿಳಿಸಿತ್ತು.

ಈ ಹಿನ್ನೆಲೆಯಲ್ಲಿ ಮೊದಲ ಪತ್ನಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದು, ಕಾನೂನಾತ್ಮಕವಾಗಿ ತಾನು ಮೊದಲ ಪತ್ನಿಯಾಗಿರುವುದರಿಂದ ಸೌಲಭ್ಯ, ಅನುಕಂಪದ ಉದ್ಯೋಗ ಮತ್ತು ಬಾಕಿಗಳನ್ನು ಪಾವತಿಸಲು ನೈರುತ್ಯ ರೈಲ್ವೆ ಮಂಡಳಿಗೆ ನಿರ್ದೇಶಿಸಬೇಕು ಎಂದು ಕೋರಿದ್ದರು. ಇದಕ್ಕೆ ಪೂರಕವಾಗಿ ಎರಡನೇ ಪತ್ನಿ ಮೆಮೊ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ್ದ ಕೌಟುಂಬಿಕ ನ್ಯಾಯಾಲಯವು 2022ರ ಜುಲೈ 22ರಂದು ಮೊದಲ ಪತ್ನಿ ಹಾಗೂ ಅವರ ಮಕ್ಕಳಿಗೆ ಶೇ. 50ರಷ್ಟು ಪಿಂಚಣಿ ಪಾವತಿಸಲು ನೈರುತ್ವ ರೈಲ್ವೆ ಮಂಡಳಿಗೆ ನಿರ್ದೇಶಿಸಿತ್ತು. ಇದನ್ನು ಪ್ರಶ್ನಿಸಿ ಎರಡನೇ ಪತ್ನಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com