ಜನವರಿ ಅಂತ್ಯದೊಳಗೆ ಬಿಜೆಪಿ ಮತ್ತು ಜೆಡಿಎಸ್ ಸೀಟು ಹಂಚಿಕೆ ಅಂತಿಮ: ಹೆಚ್.ಡಿ.ಕುಮಾರಸ್ವಾಮಿ

ಜೆಡಿಎಸ್ ಮತ್ತು ಬಿಜೆಪಿ ನಡುವೆ ಸೀಟು ಹಂಚಿಕೆ ವಿಚಾರದಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಜನವರಿ ಅಂತ್ಯದ ವೇಳೆಗೆ ಸೀಟು ಹಚಂಚಿಗೆ ಅಂತಿಮಗೊಳ್ಳಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌ಡಿ ಕುಮಾರಸ್ವಾಮಿ ಅವರು ಗುರುವಾರ ಹೇಳಿದರು.
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ, ಮಾಜಿ ಸಚಿವ ಹೆಚ್ ಡಿ ರೇವಣ್ಣ, ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ.
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ, ಮಾಜಿ ಸಚಿವ ಹೆಚ್ ಡಿ ರೇವಣ್ಣ, ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ.
Updated on

ಬೆಂಗಳೂರು: ಜೆಡಿಎಸ್ ಮತ್ತು ಬಿಜೆಪಿ ನಡುವೆ ಸೀಟು ಹಂಚಿಕೆ ವಿಚಾರದಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಜನವರಿ ಅಂತ್ಯದ ವೇಳೆಗೆ ಸೀಟು ಹಚಂಚಿಗೆ ಅಂತಿಮಗೊಳ್ಳಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌ಡಿ ಕುಮಾರಸ್ವಾಮಿ ಅವರು ಗುರುವಾರ ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಪ್ರಧಾನಮಂತ್ರಿಗಳನ್ನು ಭೇಟಿಯಾದ ಸಂದರ್ಭದಲ್ಲಿ ರಾಜ್ಯದ ರಾಜಕೀಯ ಬೆಳವಣಿಗೆಗಳು, ಕಾಡುಗೊಲ್ಲ ಸಮುದಾಯಕ್ಕೆ ಮೀಸಲಾತಿ, ರಾಜ್ಯದ ನೀರಾವರಿ ಯೋಜನೆಗಳು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಯಿತು ಎಂದು ಹೇಳಿದರು.

ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ನಡುವೆ ಕ್ಷೇತ್ರಗಳ ಹಂಚಿಕೆಗೆ ಸಂಬಂಧಿಸಿದಂತೆ ಯಾವುದೇ ಗೊಂದಲವಿಲ್ಲ. ಯಾರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬುದನ್ನು ನಾವು ಕುಳಿತು ನಿರ್ಧರಿಸುತ್ತೇವೆ ಜನವರಿ ಅಂತ್ಯದ ವೇಳೆಗೆ ಅಂತಿಮಗೊಳಿಸಲಾಗುವುದು ಎಂದು ತಿಳಿಸಿದರು.

ನಾವು ಒಂದು ಸ್ಥಾನ ಗಳಿಸಬಹುದು ಅಥವಾ ಕಳೆದುಕೊಳ್ಳಬಹುದು. ಇದರಿಂದ ಸಮಸ್ಯೆ ಆಗುವುದಿಲ್ಲ. ನಮಗೆ ಬೇಕಾಗಿರುವುದು ಪರಸ್ಪರ ನಂಬಿಕೆ, ನಾವು ಗೆಲ್ಲಬಹುದಾದ ಕ್ಷೇತ್ರಗಳ ಕುರಿತು ನಮ್ಮ ಬಳಿ ವರದಿ ಇದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಮೂರನೇ ಅವಧಿಗೆ ಆಯ್ಕೆಯಾಗುವುದನ್ನು ಖಚಿತಪಡಿಸಿಕೊಳ್ಳಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಕೇಂದ್ರ ಸಚಿವರಾಗುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ರಾಜ್ಯ ರಾಜಕಾರಣದಲ್ಲಿಯೇ ಇರುತ್ತೇನೆ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ರಾಜ್ಯ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎಂದು ಉತ್ತರಿಸಿದರು.

ಲೋಕಸಭೆ ಚುನಾವಣೆಯ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಸ್ಥಿರತೆಯ ಬಗ್ಗೆ ಕುರಿತ ಪ್ರಶ್ನೆಗೆ ಉತ್ತರಿಸಿ, ಕರ್ನಾಟಕದ ರಾಜಕೀಯದಲ್ಲಿ ಶಿಂಧೆಯೂ ಇದ್ದಾರೆ, ಅಜಿತ್ ಪವಾರ್ ಸಹ ಇದ್ದಾರೆ. ಯಾರು ಮೊದಲು ಮುಂದೆ ಬರುತ್ತಾರೋ ಕಾದು ನೋಡಬೇಕು. ಸದ್ಯದ ಪರಿಸ್ಥಿತಿಯಲ್ಲಿ ಏನು ಬೇಕಾದರೂ ಆಗಬಹುದು’ ಎಂದರು.

ಲೋಕಸಭಾ ಕಲಾಪದ ಸಂದರ್ಭದಲ್ಲಿ ಸದನಕ್ಕೆ ನುಗ್ಗಿದ ಪ್ರಕರಣವನ್ನೇ ದೊಡ್ಡದು ಮಾಡಿ ಕಾಂಗ್ರೆಸ್‌ ಪಕ್ಷ ಸಂಸತ್‌ ಕಲಾಪವನ್ನು ಹಾಳು ಮಾಡುತ್ತಿರುವುದು ಸರಿಯಲ್ಲ. ಈ ವಿಚಾರದಲ್ಲಿ ವಿಪಕ್ಷಗಳ ನಡೆ ಸರಿ ಇಲ್ಲ. ಖರ್ಗೆ, ಸಿದ್ದರಾಮಯ್ಯ ಅವರಿಗೆ ನಾನು ಕೇಳಬಯಸುತ್ತೇನೆ, ಸಂಸತ್‌ ಘಟನೆಯನ್ನೇ ಭದ್ರತಾ ವೈಫಲ್ಯ ಅನ್ನುವುದಾದರೆ ವಿಧಾನಸಭೆಯ ಅಧಿವೇಶನದ ವೇಳೆ ಒಬ್ಬ ವ್ಯಕ್ತಿ ಸದನದ ಒಳಕ್ಕೆ ಬಂದು ಒಂದೂವರೆ ಗಂಟೆ ಕಲಾಪದಲ್ಲಿ ಭಾಗಿಯಾಗಿದ್ದ. ಅದನ್ನು ಏನೆಂದು ಕರೆಯಬೇಕು ಎಂದು ಅವರು ಪ್ರಶ್ನಿಸಿದರು.

ಈ ವೈಫಲ್ಯದ ಬಗ್ಗೆ ಯಾಕೆ ಚರ್ಚೆ ಮಾಡುತ್ತಿಲ್ಲ ಕಾಂಗ್ರೆಸ್ಸಿಗರು? ಎಂದ ಕೇಳಿದ ಅವರು, ‘ಇದೇ ವಿಧಾನಸಭೆಯ ಕಳೆದ ಕಲಾಪದಲ್ಲಿ ಸಭಾಧ್ಯಕ್ಷರ ಮೇಲೆ ಪೇಪರ್ ಎಸೆದರು ಎಂದು ವಿಪಕ್ಷಗಳ ಶಾಸಕರನ್ನು ಸದನದಿಂದ ಹೊರ ಹಾಕಿದ್ದರು. ಅದನ್ನು ಏನೆಂದು ಕರೆಯುತ್ತಾರೆ? ಅದು ಯಾವ ರಾಜಕೀಯ? ಒಬ್ಬ ದಲಿತ ಉಪಾಧ್ಯಕ್ಷರು ಅಂಥ ಹೇಳಿ ಶಾಸಕರನ್ನು ಸದನದಿಂದ ಹೊರ ಹಾಕಿದ್ದರು ಕರ್ನಾಟಕದಲ್ಲಿ. ಇದರ ಬಗ್ಗೆ ಯಾಕೆ ಪ್ರಶ್ನೆ ಮಾಡುತ್ತಿಲ್ಲ ಖರ್ಗೆಯವರೇ’ ಎಂದರು.

ಪುತ್ರ ನಿಖಿಲ್ ಕುಮಾರಸ್ವಾಮಿ ಕುರಿತು ಮಾತನಾಡಿ, ನಿಖಿಲ್ ಕುಮಾರಸ್ವಾಮಿ ಅವರು ಎಲ್ಲಾ 28 ಲೋಕಸಭಾ ಕ್ಷೇತ್ರಗಳಲ್ಲಿಯೂ ಪ್ರಚಾರ ಮಾಡುತ್ತಾರೆ. ಯಾವುದೇ ಕಾರಣಕ್ಕೂ ಅವರು ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ಆದರೆ, ಜನರು ಚುನಾವಣೆಗೆ ನಿಲ್ಲಿ ಎಂದು ಹೇಳುತ್ತಿದ್ದಾರೆ. ಮಂಡ್ಯ ಕ್ಷೇತ್ರದಿಂದಲೇ ಕಣಕ್ಕೆ ಇಳಿಯಲಿ ಎಂದು ಬಯಸುತ್ತಿದ್ದಾರೆ. ಎರಡು ಬಾರಿ ಅವರು ಸೋತಿದ್ದಾರೆ. ಹೀಗಾಗಿ ಜನರ ಅನುಕಂಪವೂ ಇದೆ. ಆದರೆ, ಅವರಿಗೆ ಸ್ಪರ್ಧೆ ಮಾಡುವ ಉದ್ದೇಶವಿಲ್ಲ’ ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com