ಬಿಜೆಪಿ ಮಾಜಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ವಿರುದ್ಧದ ಲಂಚ ಪ್ರಕರಣದ ಮರು ತನಿಖೆಗೆ ಎಎಪಿ ಆಗ್ರಹ

ಬಿಜೆಪಿ ಮಾಜಿ ಶಾಸಕ ಕೆ. ಮಾಡಾಳ್ ವಿರೂಪಾಕ್ಷಪ್ಪ ಅವರ ವಿರುದ್ಧದ ಲಂಚ ಪ್ರಕರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಲೋಕಾಯುಕ್ತಕ್ಕೆ ಒಪ್ಪಿಸಿ, ಮರುತನಿಖೆಗೆ ಒಳಪಡಿಸಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಘಟಕ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ

ಬೆಂಗಳೂರು: ಬಿಜೆಪಿ ಮಾಜಿ ಶಾಸಕ ಕೆ. ಮಾಡಾಳ್ ವಿರೂಪಾಕ್ಷಪ್ಪ ಅವರ ವಿರುದ್ಧದ ಲಂಚ ಪ್ರಕರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಲೋಕಾಯುಕ್ತಕ್ಕೆ ಒಪ್ಪಿಸಿ, ಮರುತನಿಖೆಗೆ ಒಳಪಡಿಸಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಘಟಕ ಒತ್ತಾಯಿಸಿದೆ.

ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆಗೆ (ಕೆಎಸ್‌ಡಿಎಲ್) ರಾಸಾಯನಿಕ ತೈಲ ಪೂರೈಸುವ ಗುತ್ತಿಗೆಯ ಕಾರ್ಯಾದೇಶ ನೀಡಲು ಲಂಚಕ್ಕೆ ಬೇಡಿಕೆಯಿಟ್ಟ ಆರೋಪದಡಿ ಚನ್ನಗಿರಿ ಕ್ಷೇತ್ರದ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ಗುರುವಾರ (ಡಿ. 21) ರದ್ದುಪಡಿಸಿದೆ.

ನಗರದ ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ಮಾತನಾಡಿದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ, ಮಾಡಾಳ್ ವಿರೂಪಾಕ್ಷಪ್ಪ ಅವರು ಶಾಸಕರಾಗಿದ್ದಾಗ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ (ಕೆಎಸ್‌ಡಿಎಲ್) ಅಧ್ಯಕ್ಷರಾಗಿದ್ದಾಗ ಅವರ ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದು ಇಡೀ ದೇಶದ ಗಮನ ಸೆಳೆದಿತ್ತು. ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ನಡೆದ ಈ ಘಟನೆ ಆನಂತರ ರಾಜ್ಯದಲ್ಲಿ ಬಿಜೆಪಿ ಹೀನಾಯವಾಗಿ ಸೋಲಲು ಪ್ರಮುಖ ಕಾರಣವಾಯಿತು ಎಂದು ಹೇಳಿದರು. 

'ಸುಗಂಧ ದ್ರವ್ಯಕ್ಕೆ ಸಂಬಂಧಪಟ್ಟ ಕಚ್ಛಾ ವಸ್ತುಗಳನ್ನು ಮಾರಾಟ ಮಾಡಲು ಗುತ್ತಿಗೆ ನೀಡುವ ವಿಚಾರದಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಲಂಚ ಕೇಳಿದ್ದಾಗಿ ಶ್ರೇಯಸ್ ಕಶ್ಯಪ್ ಎನ್ನುವವರು ಲೋಕಾಯುಕ್ತರಿಗೆ ದೂರು ನೀಡಿದ್ದರು. ಮಾಡಾಳ್ ಅವರ ಪುತ್ರ ಕೆಎಎಸ್ ಅಧಿಕಾರಿ ಪ್ರಶಾಂತ್ ಮಾಡಾಳ್ ಅವರು ತಂದೆಯ ಪರವಾಗಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು. 40 ಲಕ್ಷ ರೂಪಾಯಿ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಪ್ರಶಾಂತ್ ಮಾಡಾಳ್ ಅವರನ್ನು ಬಂಧಿಸಲಾಗಿತ್ತು' ಎಂದರು. 

ಆ ನಂತರ ಮಾಡಾಳ್ ವಿರೂಪಾಕ್ಷಪ್ಪನವರ ಮನೆ ಮೇಲೆ ನಡೆದ ಲೋಕಾಯುಕ್ತ ದಾಳಿಯಲ್ಲಿಯೂ 8 ಕೋಟಿ ರೂ. ಹಣ ಪತ್ತೆಯಾಯಿತು. ಆದರೆ, ಅಡಿಕೆ ಮಾರಿದ ಹಣ ಎಂದು ಅವರು ಹೇಳಿದ್ದರು. ಇಷ್ಟೆಲ್ಲ ದೊಡ್ಡ ಹಗರಣ ಆದ ಬಳಿಕ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಅವರ ಮಗನಿಗೆ ತಕ್ಕ ಶಿಕ್ಷೆ ಆಗಲಿದೆ ಎಂದು ನಾವು ಕೂಡ ನಿರೀಕ್ಷಿಸಿದ್ದೆವು. ಆದರೆ, ಈ ಪ್ರಕರಣದಲ್ಲಿ ಸ್ಪೀಕರ್ ಪ್ರಾಸಿಕ್ಯೂಷನ್ ಅನುಮತಿ ಪಡೆದಿರಲಿಲ್ಲ ಎಂದು ಕಾರಣ ನೀಡಿ ಮೂರು ದಿನಗಳ ಹಿಂದೆ ಹೈಕೋರ್ಟ್ ಪ್ರಕರಣವನ್ನು ವಜಾ ಮಾಡಿದೆ ಎಂದು ಹೇಳಿದರು.

‘ಪ್ರಾಸಿಕ್ಯೂಷನ್ ಅನುಮತಿ ಪಡೆದು ಪ್ರಕರಣದ ತನಿಖೆ ನಡೆಸಬೇಕು ಎಂಬ ಕನಿಷ್ಠ ಪ್ರಜ್ಞೆಯು ಬಿಜೆಪಿ ಸರ್ಕಾರಕ್ಕೆ ಇರಲಿಲ್ಲವೇ?. ಪ್ರಾಸಿಕ್ಯೂಷನ್ ಅನುಮತಿಯಿಲ್ಲದೆ ಲೋಕಾಯುಕ್ತರು ಎಫ್‌ಐಆರ್ ದಾಖಲಿಸಿದ್ದು ಏಕೆ? ಇಷ್ಟು ದೊಡ್ಡ ಪ್ರಕರಣವನ್ನು ವಜಾಗೊಳಿಸಿರುವುದು ಕೆಟ್ಟ ವ್ಯವಸ್ಥೆಗೆ ಹಿಡಿದಿರುವ ಕನ್ನಡಿಯಾಗಿದೆ' ಎಂದು ಅವರು ದೂರಿದರು.

ಈಗ ಕಾಂಗ್ರೆಸ್ ಅಧಿಕಾರದಲ್ಲಿದೆ, ಬಿಜೆಪಿ ವಿಪಕ್ಷವಾಗಿದೆ. ಎರಡೂ ಪಕ್ಷಗಳು ಹೊಂದಾಣಿಕೆ ರಾಜಕಾರಣ ಮಾಡುತ್ತಿವೆ ಎಂದು ಮಾಧ್ಯಮಗಳೇ ವರದಿ ಮಾಡಿವೆ. ಈ ಪ್ರಕರಣ ಗಮನಿಸಿದರೆ ಅದು ನಿಜ ಅನಿಸುತ್ತದೆ. ಚುನಾವಣೆಗೆ ಮೊದಲು ಕಾಂಗ್ರೆಸ್ ಆಮ್ ಆದ್ಮಿ ಪಕ್ಷದ ಜೊತೆ ಹೋರಾಟ ಮಾಡಿತ್ತು, ಆದರೆ ಇಂದು ಪ್ರಕರಣದ ತನಿಖೆಗೆ ಅನುಮತಿ ನೀಡದೆ ಹೊಂದಾಣಿಕೆ ರಾಜಕಾರಣ ಮಾಡ್ತಿದ್ದಾರೆ. ಕೂಡಲೇ ಸ್ಪೀಕರ್ ಯು.ಟಿ. ಖಾದರ್ ಅವರು ಪ್ರಾಸಿಕ್ಯೂಷನ್ ಅನುಮತಿ ನೀಡಿ ಈ ಪ್ರಕರಣವನ್ನು ಮರು ತನಿಖೆಗೆ ಆದೇಶ ನೀಡಬೇಕು ಎಂದು ಜಗದೀಶ್ ವಿ. ಸದಂ ಒತ್ತಾಯಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com