ಒತ್ತುವರಿ ಕುರಿತು ದೂರು ಬಂದರೆ ತನಿಖೆ ನಡೆಸುವ ಅಧಿಕಾರ ಬಿಬಿಎಂಪಿಗೆ ಇಲ್ಲ: ಹೈಕೋರ್ಟ್‌

ಕಟ್ಟಡ ನಿರ್ಮಾಣದ ವೇಳೆ ಒತ್ತುವರಿಯ ಬಗ್ಗೆ ಯಾರಾದರೂ ದೂರು ಸಲ್ಲಿಸಿದರೆ ಅದರ ಬಗ್ಗೆ ತನಿಖೆ ನಡೆಸುವ ಅಧಿಕಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಇಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಕಟ್ಟಡ ನಿರ್ಮಾಣದ ವೇಳೆ ಒತ್ತುವರಿಯ ಬಗ್ಗೆ ಯಾರಾದರೂ ದೂರು ಸಲ್ಲಿಸಿದರೆ ಅದರ ಬಗ್ಗೆ ತನಿಖೆ ನಡೆಸುವ ಅಧಿಕಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಇಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ಆದರೆ, ಮಂಜೂರಾದ ನಕ್ಷೆಯ ಪ್ರಕಾರ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಪಾಲಿಕೆ ತನಿಖೆ ನಡೆಸಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಚೆನ್ನೈನ ಎಮರಾಲ್ಡ್‌ ಹೆವನ್‌ ಡೆವಲಪ್‌ಮೆಂಟ್‌ ಲಿಮಿಟೆಡ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿದ ಬಿಬಿಎಂಪಿ ನ್ಯಾಯಾಂಗ ಪ್ರಾಧಿಕಾರವಲ್ಲ. ಹಾಗಾಗಿ ಇಂತಹ ಪ್ರಕರಣಗಳಲ್ಲಿ ವ್ಯಾಜ್ಯದ ಬಗ್ಗೆ ವಿಚಾರಣೆ ನಡೆಸಲಾಗದು ಎಂದು ಆದೇಶಿಸಿದೆ.

“ಒತ್ತುವರಿ ಕುರಿತ ಎಲ್ಲಾ ಅಂಶಗಳು ಬಿಬಿಎಂಪಿ ವ್ಯಾಪ್ತಿಗೆ ಒಳಪಡುವುದಿಲ್ಲ. ಆದರೆ, ನಕ್ಷೆ ಮಂಜೂರಾತಿ ಅಥವಾ ನಿಯಮ ಉಲ್ಲಂಘನೆಯಂತಹ ಪ್ರಕರಣಗಳು ಬಂದಾಗ ಅದರಲ್ಲಿ ಬಿಬಿಎಂಪಿ ಸಂಪೂರ್ಣ ಅಧಿಕಾರವಿದ್ದು, ಅದು ನಿಯಮದ ಪ್ರಕಾರ ಕಟ್ಟಡಗಳನ್ನು ನಿರ್ಮಿಸಲಾಗಿದೆಯೇ ಇಲ್ಲವೇ ಎಂದು ಪರಿಶೀಲಿಸಬಹುದು" ಎಂದು ನ್ಯಾಯಾಲಯ ಹೇಳಿದೆ.

ಈ ವಿಚಾರದಲ್ಲಿ ಸಿವಿಲ್ ಕೋರ್ಟ್ ಏನಾದರೂ ಆದೇಶ ನೀಡಿದರೆ ಅದನ್ನು ಕಂಪೆನಿ ಪಾಲಿಸಬೇಕಾಗುತ್ತದೆ ಎಂದು ಪೀಠ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ಚೆನ್ನೈ ಮೂಲದ ಎಮರಾಲ್ಡ್ ಹೆವೆನ್‌ ಡೆವಲಪ್‌ಮೆಂಟ್‌ ಲಿಮಿಟೆಡ್ ಕಂಪೆನಿ ಬೆಂಗಳೂರಿನ ಬೇಗೂರು ಹೋಬಳಿಯ ಬಸಾಪುರ ಗ್ರಾಮದಲ್ಲಿ ತನ್ನ 4 ಕರೆ ಜಾಗದಲ್ಲಿ ತಳಮಹಡಿ ಹೊರತುಪಡಿಸಿ 18 ಮಹಡಿಗಳ ಕಟ್ಟಡವನ್ನು ನಿರ್ಮಾಣ ಮಾಡಿತ್ತು. ಆದರೆ, ಕವಿತಾ ಶಂಕರ್ ಎಂಬುವರು ತನ್ನ ಒಂದು ಎಕರೆ ಜಾಗವನ್ನು ಕಂಪೆನಿ ಒತ್ತುವರಿ ಮಾಡಿಕೊಂಡಿದೆ ಎಂದು ದೂರು ನೀಡಿದ್ದರು. ಅದನ್ನು ಆಧರಿಸಿ 2023ರ ಸೆಪ್ಟೆಂಬರ್‌ 14ರಂದು ಬಿಬಿಎಂಪಿಯ ನಗರ ಯೋಜನಾ ವಿಭಾಗದ ಸಹಾಯಕ ನಿರ್ದೇಶಕರು ನೋಟಿಸ್ ನೀಡಿ, ದಾಖಲೆಗಳನ್ನು ಒದಗಿಸುವಂತೆ ಸೂಚನೆ ನೀಡಿದ್ದರು.

ಆ ನೋಟಿಸ್ ಅನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದ ಕಂಪನಿಯು ಭೂಮಿಯನ್ನು 2019ರಲ್ಲಿ ಖರೀದಿಸಲಾಗಿತ್ತು. ಅನಂತರ ಬಿಬಿಎಂಪಿಯಿಂದ ನಕ್ಷೆ ಅನುಮೋದನೆ ಪಡೆದ ನಂತರ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದಲ್ಲಿ ನೋಂದಾಯಿಸಿ ಕಟ್ಟಡ ನಿರ್ಮಾಣ ಚಟುವಟಿಕೆಯನ್ನು ಆರಂಭಿಸಲಾಗಿತ್ತು ಎಂದು ಹೇಳಿತ್ತು.

ಕವಿತಾ ಹಿಂದಿನ ಭೂ ಮಾಲೀಕರ ಕಡೆಯಿಂದ ಜಿಪಿಎ ಹೊಂದಿದ್ದಾರೆ. ಕಟ್ಟಡ ನಿರ್ಮಾಣ ಆರಂಭವಾದ ಬಳಿಕ ಒತ್ತುವರಿ ಮಾಡಿಕೊಳ್ಳಲಾಗಿದೆ, ತಾವು ಜಾಗದ ಮಾಲೀಕರು ಎಂದು ದಾವೆ ಹೂಡಿದ್ದಾರೆ. ಆದರೆ, ಬಿಎಂಪಿಗೆ ಒತ್ತುವರಿಯ ಬಗ್ಗೆ ತನಿಖೆ ನಡೆಸುವ ಯಾವುದೇ ಅಧಿಕಾರವಿಲ್ಲ, ಆ ಅಧಿಕಾರ ಸಿವಿಲ್ ಕೋರ್ಟ್‌ಗೆ ಮಾತ್ರ ಇದೆ ಎಂದು ಕಂಪನಿ ವಾದಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com