ಸಂಸತ್‌ ಭದ್ರತಾ ವೈಫಲ್ಯ: ದೇಶಪ್ರೇಮಿನಾ, ದೇಶದ್ರೋಹಿನಾ ಎಂಬುದನ್ನು ಜನ ತೀರ್ಮಾನ ಮಾಡುತ್ತಾರೆ; ಕೊನೆಗೂ ಮೌನ ಮುರಿದ ಪ್ರತಾಪ್ ಸಿಂಹ

ಸಂಸತ್ ಭದ್ರತಾ ಲೋಪ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ಕೊನೆಗೂ ಮೌನ ಮುರಿದಿದ್ದು, ನಾನು ದೇಶಪ್ರೇಮಿನಾ, ದೇಶದ್ರೋಹಿನಾ ಎಂಬುದನ್ನು ಜನ ತೀರ್ಮಾನ ಮಾಡುತ್ತಾರೆಂದು ಭಾನುವಾರ ಹೇಳಿದ್ದಾರೆ.
ಸಂಸದ ಪ್ರತಾಪ್ ಸಿಂಹ
ಸಂಸದ ಪ್ರತಾಪ್ ಸಿಂಹ

ಮೈಸೂರು: ಸಂಸತ್ ಭದ್ರತಾ ಲೋಪ ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ಕೊನೆಗೂ ಮೌನ ಮುರಿದಿದ್ದು, ನಾನು ದೇಶಪ್ರೇಮಿನಾ, ದೇಶದ್ರೋಹಿನಾ ಎಂಬುದನ್ನು ಜನ ತೀರ್ಮಾನ ಮಾಡುತ್ತಾರೆಂದು ಭಾನುವಾರ ಹೇಳಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಇಂದು ಬೆಳಗ್ಗೆ ಮಾತನಾಡಿರುವ ಅವರು, ದೇಶದ್ರೋಹಿನಾ, ದೇಶಪ್ರೇಮಿನಾ ಎಂಬುದನ್ನು ಬೆಟ್ಟದ ಚಾಮುಂಡಿ ತಾಯಿ, ಕೊಡಗಿನ ಕಾವೇರಿ ತಾಯಿ. ನನ್ನ ಓದುಗರು, ಮೈಸೂರು ಕೊಡಗಿನ ಜನ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತೀರ್ಮಾನ ಮಾಡುತ್ತಾರೆಂದು ಹೇಳಿದರು.

”2024ರ ಏಪ್ರಿಲ್‌ನಲ್ಲಿ ನಡೆಯುವಂತಹ ಲೋಕಸಭಾ ಚುನಾವಣೆಯಲ್ಲಿ ಜನರು ನನ್ನ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ. ನಾನು ಏನು ಎಂಬುದನ್ನು ಅಂತಿಮವಾಗಿ ತೀರ್ಮಾನ ಕೊಡಬೇಕಾದವರು ನನ್ನ ಕ್ಷೇತ್ರದ ಜನ. ಅದರಾಚೆಗೆ ನಾನು ಏನೂ ಹೇಳುವುದಿಲ್ಲ” ಎಂದು ತಿಳಿಸಿದರು.

ಸಿದ್ದರಾಮಯ್ಯ ಐಷಾರಾಮಿ ಖಾಸಗಿ ವಿಮಾನದಲ್ಲಿ ಪ್ರಯಾಣಿಸಿದ್ದರ ಕುರಿತ ಪ್ರಶ್ನೆಗೆ ಉತ್ತರಿಸಿ, ತಮ್ಮನ್ನು ಸಮರ್ಥಿಸಿಕೊಳ್ಳಲು ಸಿಎಂ ಈ ವಿಚಾರದಲ್ಲಿ ಪ್ರಧಾನಿಯನ್ನು ಎಳೆದು ತಂದಿದ್ದಾರೆ. ಪ್ರಧಾನಿಯವರು ಸರ್ಕಾರದ ವಿಮಾನದಲ್ಲೇ ಓಡಾಡುತ್ತಾರೆ. ಖಾಸಗಿ ಜೆಟ್‌ನಲ್ಲಿ ತಮ್ಮ ಪಟಾಲಂ, ಛೇಲಾ, ದುಡ್ಡು ಕೊಡುವವರ ಜೊತೆ ಪ್ರಧಾನಿ ಓಡಾಡುವುದಿಲ್ಲ ಎಂದು ತಿರುಗೇಟು ನೀಡಿದರು.

ದೇಶಕ್ಕೆ ಒಬ್ಬರೇ ಪ್ರಧಾನಿ ಇರುವುದು. ದೇಶದಲ್ಲಿ 29 ಜನ ಮುಖ್ಯಮಂತ್ರಿಗಳಿದ್ದಾರೆ. ನೀವು ಸುಖಾ ಸುಮ್ಮನೆ ಪ್ರಧಾನಿಗೆ ನಿಮ್ಮನ್ನು ನೀವು ಹೋಲಿಕೆ ಮಾಡಿಕೊಳ್ಳಬೇಡಿ. ಈ ರೀತಿ ಹೋಲಿಕೆ ಮಾಡಿಕೊಳ್ಳುವುದನ್ನು ಮೊದಲು ಬಿಡಿ ಎಂದು ಕಿಡಿಕಾರಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com