ಮೂರು ತಿಂಗಳಲ್ಲಿ ಎಲ್ಲಾ ಅಡೆತಡೆಗಳ ನಿವಾರಿಸಿ ಹೆದ್ದಾರಿ ನಿರ್ಮಾಣಕ್ಕೆ ಅನುವು: ಸಚಿವ ಸತೀಶ್ ಜಾರಕಿಹೊಳಿ

ಮುಂದಿನ ಮೂರು ತಿಂಗಳೊಳಗೆ ರಾಜ್ಯದ ಹೆದ್ದಾರಿ ಕಾಮಗಾರಿಗೆ ಇರುವ ಎಲ್ಲಾ ಅಡೆತಡೆಗಳ ದೂರಾಗಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಸೋಮವಾರ ಭರವಸೆ ನೀಡಿದ್ದಾರೆ.
ಸತೀಶ್ ಜಾರಕಿಹೊಳಿ
ಸತೀಶ್ ಜಾರಕಿಹೊಳಿ

ಬೆಂಗಳೂರು: ಮುಂದಿನ ಮೂರು ತಿಂಗಳೊಳಗೆ ರಾಜ್ಯದ ಹೆದ್ದಾರಿ ಕಾಮಗಾರಿಗೆ ಇರುವ ಎಲ್ಲಾ ಅಡೆತಡೆಗಳ ದೂರಾಗಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಸೋಮವಾರ ಭರವಸೆ ನೀಡಿದ್ದಾರೆ.

ನಗರದ ಕಾಂಗ್ರೆಸ್‌ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 10 ಸಾವಿರ ಕೋಟಿ ವೆಚ್ಚದ 15 ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ವಿವಿಧ ಕಾರಣದಿಂದ ವಿಳಂಬವಾಗಿವೆ. ಇದುವರೆಗೆ ಎರಡು ಸಾವಿರ ಕೋಟಿ ವೆಚ್ಚಮಾಡಲಾಗಿದೆ. ಅರಣ್ಯ ಇಲಾಖೆ ಒಪ್ಪಿಗೆ ಸೇರಿದಂತೆ ಅನೇಕ ಕಾರಣಗಳಿಂದ ಅನೇಕ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಕಾಮಗಾರಿಗೆ ತೊಡಕಾಗಿದ್ದು, ಕಳೆದ 12 ವರ್ಷಗಳಿಂದ ಸಣ್ಣ ಪುಟ್ಟ ತೊಂದರೆಯಿಂದ ಕೆಲವು ಹೆದ್ದಾರಿಗಳ ನಿರ್ಮಾಣ ಸ್ಥಗಿತವಾಗಿವೆ. ಕೇಂದ್ರ ಸಚಿವರು ಈ ಬಗ್ಗೆ ರಾಜ್ಯ ಸರ್ಕಾರ ಮುತುರ್ವಜಿ ವಹಿಸಬೇಕೆಂದು ತಿಳಿಸಿದ್ದು, ಮೂರು ತಿಂಗಳ ಕಾಲಾವಕಾಶ ತೆಗೆದುಕೊಂಡಿದ್ದು, ಈ ಕುರಿತು ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಸಭೆ ನಡೆಸಿ, ಶೀಘ್ರವೇ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕೆ ಅಡೆತಡೆಯಾದ ವಿಷಯಗಳ ಬಗ್ಗೆ ಚರ್ಚಿಸಲು ಸಂಬಂಧಿಸಿದ ಜಿಲ್ಲಾಧಿಕಾರಿಗಳು, ಅರಣ್ಯ ಇಲಾಖೆ ಸೇರಿದಂತೆ ಬೇರೆ ಬೇರೆ ಇಲಾಖೆ ಅಧಿಕಾರಗಳೊಂದಿಗೆ ನಾನು ಸಭೆ ನಡೆಸಿದ್ದು, ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದನೆ ನೀಡಿದ್ದಾರೆ. ಇನ್ನು ವಿಜಯಪುರ-ಹುಬ್ಬಳ್ಳಿ ಹೆದ್ದಾರಿ ನಿರ್ಮಾಣ ಶೇ.99% ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಶೇ. 1% ರಷ್ಟು ಕಾಮಗಾರಿ ಉಳಿದಿದ್ದು, ಇಂತಹ ಅನೇಕ ಹೆದ್ದಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಚೋರ್ಲಾ ಘಾಟ್‌ ಮೂಲಕ ಬೆಳಗಾವಿ ಮತ್ತು ಗೋವಾಗೆ ಸಂಪರ್ಕಿಸುವ ರಸ್ತೆಯನ್ನು ಕರ್ನಾಟಕದ ಗಡಿವರೆಗೆ ಅಭಿವೃದ್ಧಿ ಪಡಿಸಲು ಸೂಮಾರು 58 ಕೋಟಿ ರೂ. ಮಂಜೂರಾಗಿದ್ದು, ಒಂದು ವಾರದೊಳಗೆ ಟೆಂಡರ್‌ ಕರೆದು 2024 ಎಪ್ರಿಲ್‌ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ಸಚಿವ ಶಿವಾನಂದ್​ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವ ಸತೀಶ್‌ ಜಾರಕಿಹೊಳಿ, ರೈತರು ಯಾವುದೇ ಕಾರಣಕ್ಕೂ ಬರಗಾಲ ಬರಲಿ ಅಂತ ಅಪೇಕ್ಷಿಸಲ್ಲ. ಬರಗಾಲ ಬಂದರೆ ರೈತರಿಗೆ ಮಾತ್ರ ತೊಂದರೆ ಆಗಲ್ಲ. ಬರಗಾಲ ಬಂದರೆ ಎಲ್ಲರಿಗೂ ತೊಂದರೆ ಆಗುತ್ತದೆ. ಎಲ್ಲೋ ಏನೋ ಮಿಸ್ಟೇಕ್​ ಆಗಿ ಶಿವಾನಂದ್​ ಪಾಟೀಲ್ ಹೇಳಿರುತ್ತಾರೆ ಎಂದು ಪ್ರತಿಕ್ರಿಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com