ಮಾಡಾಳ್ ವಿರೂಪಾಕ್ಷಪ್ಪ, ದೇವೇಂದ್ರಪ್ಪ ವಿರುದ್ಧದ ಲಂಚ ಪ್ರಕರಣಗಳ ಮರುತನಿಖೆಗೆ ಎಎಪಿ ಆಗ್ರಹ

ಪ್ರಾಸಿಕ್ಯೂಷನ್ ಅನುಮತಿ ನೀಡುವ ವಿಚಾರದಲ್ಲಿನ ಲೋಪದಿಂದಾಗಿ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಅಭಿಯೋಜನಾ ಮಂಜೂರಾತಿ ನೀಡುವಲ್ಲಿನ ಲೋಪದಿಂದಾಗಿ ದೇವೇಂದ್ರಪ್ಪ ಅವರನ್ನು ಲಂಚ ಪ್ರಕರಣದಲ್ಲಿ ಖುಲಾಸೆಗೊಳಿಸಿ ನ್ಯಾಯಾಲಯ ಆದೇಶ ನೀಡಿರುವುದು ಬೇಸರದ ಸಂಗತಿ ಎಂದು ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಹೇಳಿದರು.
ನಗರದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ವೇಳೆ ಮಾತನಾಡಿದ ಮೋಹನ್ ದಾಸರಿ
ನಗರದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ವೇಳೆ ಮಾತನಾಡಿದ ಮೋಹನ್ ದಾಸರಿ
Updated on

ಬೆಂಗಳೂರು: ಪ್ರಾಸಿಕ್ಯೂಷನ್ ಅನುಮತಿ ನೀಡುವ ವಿಚಾರದಲ್ಲಿನ ಲೋಪದಿಂದಾಗಿ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಅಭಿಯೋಜನಾ ಮಂಜೂರಾತಿ ನೀಡುವಲ್ಲಿನ ಲೋಪದಿಂದಾಗಿ ದೇವೇಂದ್ರಪ್ಪ ಅವರನ್ನು ಲಂಚ ಪ್ರಕರಣದಲ್ಲಿ ಖುಲಾಸೆಗೊಳಿಸಿ ನ್ಯಾಯಾಲಯ ಆದೇಶ ನೀಡಿರುವುದು ಬೇಸರದ ಸಂಗತಿ ಎಂದು ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಹೇಳಿದರು.

ಪ್ರಾಸಿಕ್ಯೂಷನ್ ಅನುಮತಿ ನೀಡುವಲ್ಲಿ ಆಗುತ್ತಿರುವ ಲೋಪದಿಂದಾಗಿ ಭ್ರಷ್ಟಾಚಾರಿಗಳ ವಿರುದ್ಧದ ಪ್ರಕರಣಗಳು ನ್ಯಾಯಾಲಯದಲ್ಲಿ ವಜಾ ಆಗುತ್ತಿದ್ದು, ಲೋಕಾಯುಕ್ತ ಹಾಗೂ ರಾಜ್ಯ ಸರ್ಕಾರ ಭ್ರಷ್ಟರಿಗೆ ಕಠಿಣ ಶಿಕ್ಷೆ ಕೊಡಿಸುವಲ್ಲಿ ವಿಫಲವಾಗುತ್ತಿರುವುದನ್ನು ಖಂಡಿಸಿ ಆಮ್ ಆದ್ಮಿ ಪಕ್ಷವು ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿತು. 

ಈ ವೇಳೆ ಮಾತನಾಡಿದ ಮೋಹನ್ ದಾಸರಿ, ನೂರಾರು ಕೋಟಿ ಲೂಟಿ ಮಾಡಿರುವ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧದ ಪ್ರಕರಣವನ್ನು ಪ್ರಾಸಿಕ್ಯೂಷನ್ ಅನುಮತಿ ಪಡೆದಿಲ್ಲ ಎಂದು ರದ್ದು ಮಾಡಲಾಗಿದೆ. ದೇವೇಂದ್ರಪ್ಪ ಅವರು 20 ಲಕ್ಷ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಆದರೂ, ರಾಜಾರೋಷವಾಗಿ ಅವರೀಗ ಹೊರಗಿದ್ದಾರೆ. ಮುಖ್ಯಮಂತ್ರಿಯಾಗಿದ್ದ ಬಿಎಸ್ ಯಡಿಯೂರಪ್ಪ ಅವರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಸೇರುವಂತೆ ಮಾಡಿದ್ದು ಸಂತೋಷ್ ಹೆಗಡೆ ಅವರಿದ್ದ ಲೋಕಾಯುಕ್ತ ಸಂಸ್ಥೆ. ಆಗ ಲೋಕಾಯುಕ್ತ ಎಂದರೆ ಎಲ್ಲರಿಗೂ ಭಯವಿತ್ತು. ಆದರೆ, ಸಿದ್ದರಾಮಯ್ಯ ಅವರು ಎಸಿಬಿ ರಚಿಸಿ, ಲೋಕಾಯುಕ್ತ ಸಂಸ್ಥೆಯನ್ನು ಹಲ್ಲು ಕಿತ್ತ ಹಾವಿನಂತೆ ಮಾಡಿದರು. ಎಸಿಬಿ ರದ್ದು ಬಳಿಕವೂ ಲೋಕಾಯುಕ್ತಕ್ಕೆ ಸಂಪೂರ್ಣ ಅಧಿಕಾರ ನೀಡಿಲ್ಲ ಎಂದು ದೂರಿದರು.

ನಂತರ ಬಂದ ಬಿಜೆಪಿ ಸರ್ಕಾರ ಕೋವಿಡ್ ಅವಧಿಯಲ್ಲಿ ಹಗರಣಗಳನ್ನು ಮಾಡಿತು. 45 ರೂ. ಬೆಲೆ ಬಾಳುವ ಮಾಸ್ಕ್‌ಗೆ 450 ರೂ. ಬಿಲ್ ಮಾಡಲಾಗಿತ್ತು ಬಿಜೆಪಿ ನಾಯಕರೇ ಹೇಳಿದ್ದರೂ, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ತಲೆಕೆಡಿಸಿಕೊಳ್ಳುತ್ತಿಲ್ಲ. ರಾಜಕೀಯ ಲಾಭಕ್ಕಾಗಿ, ವಿಪಕ್ಷ ನಾಯಕರನ್ನು ಗುರಿಯಾಗಿಸಲು ಬಿಜೆಪಿಯವರು ಕೇಂದ್ರದ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಬಿಜೆಪಿ ಆಡಳಿತದಲ್ಲಿ ಆಗಿರುವ ಹಗರಣಗಳನ್ನೂ ಈಗ ಮುಚ್ಚಿಹಾಕಲಾಗುತ್ತಿದೆ ಎಂದು ದೂರಿದರು. 

ಅಡಕೆ ಮಾರಿ ಆರೂವರೆ ಕೋಟಿ ರೂ. ಹಣವನ್ನು ಮನೆಯಲ್ಲಿಟ್ಟುಕೊಂಡಿದ್ದ ಮಾಡಾಳ್ ವಿರೂಪಾಕ್ಷಪ್ಪ ಅವರು ಯಾವ ಸೀಮೆಯ ರೈತ. ಸಿದ್ದರಾಮಯ್ಯ ಅವರಿಗೆ ರಾಜ್ಯದ ಜನರ ಬಗ್ಗೆ ಯಾವುದೇ ಕಾಳಜಿ ಕಾಣಿಸುತ್ತಿಲ್ಲ. ಲೋಕಾಯುಕ್ತ ನ್ಯಾಯಾಲಯದಲ್ಲಿ ಹಲವಾರು ಪ್ರಕರಣಗಳು ಬಾಕಿ ಇವೆ. ರಾಜ್ಯದ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದರೆ, ಸಿದ್ದರಾಮಯ್ಯ ಅವರು ಲೋಕಾಯುಕ್ತದಲ್ಲಿ ಉಳಿದಿರುವ ಎಲ್ಲಾ ಪ್ರಕರಣಗಳ ಆರೋಪಪಟ್ಟಿ ಸಲ್ಲಿಸಲು ಒಪ್ಪಿಗೆ ನೀಡಲಿ ಎಂದು ಒತ್ತಾಯಿಸಿದರು.

ನಕಲಿ ಗ್ಯಾರಂಟಿಗಳ ಮೂಲಕ ರಾಜ್ಯವನ್ನು ಉದ್ಧಾರ ಮಾಡಲು ಸಾಧ್ಯವಿಲ್ಲ. ಈಗಲೂ ಕಾಲ ಮಿಂಚಿಲ್ಲ. ಇಡೀ ರಾಜ್ಯದ ಮುಂದೆ ಬೆತ್ತಲಾಗಿದ್ದ ಭ್ರಷ್ಟಾಚಾರ ಪ್ರಕರಣಗಳನ್ನು ಮರುತನಿಖೆಗೆ ಒಳಪಡಿಸಿ. ಭ್ರಷ್ಟಾಚಾರದ ವಿರುದ್ಧ ಒಂದಾದರೂ ಒಳ್ಳೆ ಕೆಲಸ ಮಾಡಿ ರಾಜಕೀಯ ನಿವೃತ್ತಿ ಪಡೆಯಿರಿ. ಮಾಡಾಳ್ ವಿರೂಪಾಕ್ಷಪ್ಪ ಮತ್ತು ದೇವೇಂದ್ರಪ್ಪ ಪ್ರಕರಣಗಳನ್ನು ಮರುತನಿಖೆಗೆ ಒಪ್ಪಿಸಿ, ಅವರನ್ನು ಜೈಲಿನಲ್ಲಿ ಕೊಳೆಯುವಂತೆ ಮಾಡಿ ಎಂದು ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com