ಚಿಕ್ಕಬಳ್ಳಾಪುರ: ವಿದ್ಯಾರ್ಥಿಯೊಂದಿಗೆ ಮುಖ್ಯ ಶಿಕ್ಷಕಿಯ ರೊಮ್ಯಾಂಟಿಕ್ ಫೋಟೊ ಶೂಟ್ ವೈರಲ್; ಕ್ರಮಕ್ಕೆ ಪೋಷಕರು ಆಗ್ರಹ

ಪ್ರವಾಸದ ವೇಳೆ ಮುಖ್ಯ ಶಿಕ್ಷಕಿಯೊಬ್ಬರು ವಿದ್ಯಾರ್ಥಿಯೊಂದಿಗೆ ರೊಮ್ಯಾಂಟಿಕ್ ಫೋಟೊ ಶೂಟ್ ಮಾಡಿಸಿಕೊಂಡಿರುವ ವಿಡಿಯೋ ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಶಿಕ್ಷಕಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೋಷಕರು ಒತ್ತಾಯಿಸಿದ್ದಾರೆ.
ಮುಖ್ಯ ಶಿಕ್ಷಕಿ ಮತ್ತು ವಿದ್ಯಾರ್ಥಿಯ ರೊಮ್ಯಾಂಟಿಕ್ ಫೋಟೊ ಶೂಟ್
ಮುಖ್ಯ ಶಿಕ್ಷಕಿ ಮತ್ತು ವಿದ್ಯಾರ್ಥಿಯ ರೊಮ್ಯಾಂಟಿಕ್ ಫೋಟೊ ಶೂಟ್

ಚಿಕ್ಕಬಳ್ಳಾಪುರ: ಪ್ರವಾಸದ ವೇಳೆ ಮುಖ್ಯ ಶಿಕ್ಷಕಿಯೊಬ್ಬರು ವಿದ್ಯಾರ್ಥಿಯೊಂದಿಗೆ ರೊಮ್ಯಾಂಟಿಕ್ ಫೋಟೊ ಶೂಟ್ ಮಾಡಿಸಿಕೊಂಡಿರುವ ವಿಡಿಯೋ ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಶಿಕ್ಷಕಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೋಷಕರು ಒತ್ತಾಯಿಸಿದ್ದಾರೆ.

ಫೋಟೊಗಳಲ್ಲಿ, ವಿದ್ಯಾರ್ಥಿ ಮತ್ತು ಮುಖ್ಯ ಶಿಕ್ಷಕಿ ಆಕ್ಷೇಪಾರ್ಹ ರೀತಿಯಲ್ಲಿ ವಿವಿಧ ಪೋಸ್ ನೀಡಿರುವುದು ಕಂಡುಬಂದಿದೆ. ವಿದ್ಯಾರ್ಥಿಯು ಶಿಕ್ಷಕಿಯ ಕೆನ್ನೆಗೆ ಮುತ್ತಿಡುವುದು ಮತ್ತು ಹಿಂಬದಿಯಿಂದ ಸೆರಗನ್ನ ಎಳೆದು ಹಿಡಿದಿರುವುದು, ಶಿಕ್ಷಕಿಯನ್ನು ಎತ್ತಿಕೊಂಡಿರುವುದು ಸೇರಿದಂತೆ ವಿವಿಧ ಭಂಗಿಗಳಲ್ಲಿ ಪೋಸ್ ನೀಡಲಾಗಿದೆ.

ಮುಖ್ಯಶಿಕ್ಷಕಿ ಕೂಡ ವಿದ್ಯಾರ್ಥಿಯನ್ನು ತಬ್ಬಿಕೊಂಡು ರೊಮ್ಯಾಂಟಿಕ್ ಆಗಿ ವರ್ತಿಸುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

ಫೋಟೊ ಶೂಟ್‌ನ ವೀಡಿಯೊ ವೈರಲ್ ಆದ ನಂತರ, ಜನರು ಮತ್ತು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಮತ್ತು ಇಂತಹ ಅನುಚಿತ ವರ್ತನೆಯಲ್ಲಿ ತೊಡಗಿದ್ದಕ್ಕಾಗಿ ಶಿಕ್ಷಕಿಯನ್ನು ದೂಷಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಗ್ರಾಮವೊಂದರ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಪ್ರವಾಸಕ್ಕೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ.

ಮುಖ್ಯ ಶಿಕ್ಷಕಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೋಷಕರು ಒತ್ತಾಯಿಸಿದ್ದು, ಶಾಲೆಗೆ ತೆರಳಿ ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಆಕೆಯ ವರ್ತನೆಗೆ ಸಂಬಂಧಿಸಿದಂತೆ ಪೋಷಕರು ಬ್ಲಾಕ್ ಶಿಕ್ಷಣಾಧಿಕಾರಿ (ಬಿಇಒ)ಗೆ ದೂರು ಸಲ್ಲಿಸಿದ್ದು, ತನಿಖೆಗೆ ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com