
ರಾಯಚೂರು: ರಾಯಚೂರು ಜಿಲ್ಲೆಯಲ್ಲಿ ಶುಕ್ರವಾರ ಒಂಬತ್ತು ವರ್ಷದ ಬಾಲಕನ ಮೇಲೆ ಮೊಸಳೆ ದಾಳಿ ನಡೆಸಿದ್ದು, ಸ್ಥಳೀಯರ ತ್ವರಿತ ಪ್ರತಿಕ್ರಿಯೆಯಿಂದ ಆತನನ್ನು ಅಪಾಯದಿಂದ ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಪವನ್ ಎಂದು ಗುರುತಿಸಲಾದ ಬಾಲಕ ಕೊರ್ಟಗುಂಡ ಗ್ರಾಮದ ಬಳಿ ನದಿಯಲ್ಲಿ ಆಟವಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಸ್ಥಳೀಯವಾಗಿ ನಡೆಯುವ ಧಾರ್ಮಿಕ ಜಾತ್ರೆಯೊಂದರಲ್ಲಿ ಪಾಲ್ಗೊಳ್ಳಲು ಪವನ್ ತನ್ನ ಅಜ್ಜಿಯ ಮನೆಗೆ ಬಂದಿದ್ದನು. ಕುಟುಂಬ ಸದಸ್ಯರೊಂದಿಗೆ ನದಿಗೆ ತೆರಳಿದ್ದನು. ಅವರು ನದಿಯ ದಡದಲ್ಲಿ ಬಟ್ಟೆ ಒಗೆಯುತ್ತಿದ್ದಾಗ ಆಟವಾಡಲು ನದಿಗೆ ತೆರಳಿದ್ದ ವೇಳೆ ಮೊಸಳೆ ದಾಳಿ ನಡೆಸಿದೆ.
ಆದಾಗ್ಯೂ, ಮೊಸಳೆ ಹುಡುಗನ ಬಳಿಗೆ ಬರುತ್ತಿರುವುದನ್ನು ಕಂಡ ಸ್ಥಳೀಯರು ಸ್ಥಳಕ್ಕೆ ಧಾವಿಸಿ, ಜೋರಾಗಿ ಕೂಗಿದ್ದಾರೆ ಮತ್ತು ಮೊಸಳೆಯನ್ನು ಓಡಿಸಲು ವಸ್ತುಗಳನ್ನು ನದಿಗೆ ಎಸೆದಿದ್ದಾರೆ. ಘಟನೆಯಲ್ಲಿ ಪವನ್ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯರು ಆತನ ಪ್ರಾಣ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸದ್ಯ ಬಾಲಕನನ್ನು ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ರಿಮ್ಸ್) ದಾಖಲಿಸಲಾಗಿದ್ದು, ಆತ ಅಪಾಯದಿಂದ ಪಾರಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
Advertisement