ಬೆಂಗಳೂರು: 12 ಕಿ.ಮೀ ಉದ್ದದ ರಸ್ತೆಗೆ ಪುನೀತ್ ರಾಜ್ ಕುಮಾರ್ ಹೆಸರು, ಫೆ.7 ಕ್ಕೆ ನಾಮಫಲಕ ಉದ್ಘಾಟನೆ
ಬೆಂಗಳೂರು: ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಒಂದು ಹೊರ ಬಿದ್ದಿದೆ. ನಾಯಂಡಹಳ್ಳಿ ಜಂಕ್ಷನ್ ನಿಂದ ಬನ್ನೇರುಘಟ್ಟ ರಸ್ತೆಯ ವೆಗಾ ಸಿಟಿ ಮಾಲ್ ವರೆಗಿನ ಹೊರವರ್ತುಲ ರಸ್ತೆಗೆ' ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಹೆಸರು ಇಡಲು ರಾಜ್ಯ ಸರ್ಕಾರ ಗೆಜೆಟ್ ಹೊರಡಿಸಿದ್ದು, ರಸ್ತೆಯ ನಾಮಕರಣ ಕಾರ್ಯಕ್ರಮ ಫೆ.7 ರಂದು ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಕಂದಾಯ ಸಚಿವ ಆರ್. ಅಶೋಕ, ಪದ್ಮನಾಭನಗರ ಅಟಲ್ ಬಿಹಾರಿ ವಾಜಪೇಯಿ ಮೈದಾನದಲ್ಲಿ ಅಂದು ಸಂಜೆ 6ಕ್ಕೆ ಕಾರ್ಯಕ್ರಮ ನಡೆಯಲಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಸ್ತೆಯ ನಾಮಫಲಕ ಉದ್ಘಾಟಿಸಲಿದ್ದಾರೆ ಎಂದರು.
ಬಿಬಿಎಂಪಿ ಆಯೋಜಿಸಲಿರುವ ಕಾರ್ಯಕ್ರಮದಲ್ಲಿ ನಟರಾದ ಡಾ.ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಹಾಗೂ ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಉಪಸ್ಥಿತರಿರಲಿದ್ದಾರೆ.
ರಸ್ತೆ ನಾಮಕರಣ ಕಾರ್ಯಕ್ರಮದಲ್ಲಿ ಮಾರ್ಚ್ ನಲ್ಲಿ ನಡೆಯಲಿರುವ 14ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಲಾಂಛನವನ್ನೂ ಮುಖ್ಯಮಂತ್ರಿ ಅನಾವರಣ ಮಾಡಲಿದ್ದಾರೆ ಎಂದು ಆರ್. ಅಶೋಕ್ ತಿಳಿಸಿದರು.

