ಸಾತ್ವಿಕ ಆಹಾರದ ಬಗ್ಗೆ ಚಿಂತನೆಗಳಿಲ್ಲ ಆದರೆ, ಮುಂದಿನ ವರ್ಷದಿಂದ ಹೆಚ್ಚು ಮೊಟ್ಟೆ ನೀಡಲು ನಿರ್ಧಾರ: ಸಚಿವ ಬಿಸಿ ನಾಗೇಶ್

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ನೈತಿಕ ಶಿಕ್ಷಣ ಜಾರಿಗೆ ತರಲು ಸರ್ಕಾರ ಬದ್ಧವಾಗಿದೆ. ಆದರೆ, ಸಾತ್ವಿಕ ಆಹಾರ ವಿತರಣೆಯ ಬಗ್ಗೆ ಯಾವುದೇ ಚಿಂತನೆಗಳು ನಡೆದಿಲ್ಲ. ಮುಂದಿನ ವರ್ಷದಿಂದ ಹೆಚ್ಚು ದಿನ ಮೊಟ್ಟೆ ನೀಡಲು ಉತ್ಸುಕರಾಗಿದ್ದೇವೆಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಅವರು ಸೋಮವಾರ ಹೇಳಿದರು.
ಸಚಿವ ಬಿಸಿ ನಾಗೇಶ್.
ಸಚಿವ ಬಿಸಿ ನಾಗೇಶ್.
Updated on

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ನೈತಿಕ ಶಿಕ್ಷಣ ಜಾರಿಗೆ ತರಲು ಸರ್ಕಾರ ಬದ್ಧವಾಗಿದೆ. ಆದರೆ, ಸಾತ್ವಿಕ ಆಹಾರ ವಿತರಣೆಯ ಬಗ್ಗೆ ಯಾವುದೇ ಚಿಂತನೆಗಳು ನಡೆದಿಲ್ಲ. ಮುಂದಿನ ವರ್ಷದಿಂದ ಹೆಚ್ಚು ದಿನ ಮೊಟ್ಟೆ ನೀಡಲು ಉತ್ಸುಕರಾಗಿದ್ದೇವೆಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಅವರು ಸೋಮವಾರ ಹೇಳಿದರು.

ಜೆಡಿಎಸ್'ನ ಕೆ.ಎ.ತಿಪ್ಪೇಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಆಯ್ದ ಜಿಲ್ಲೆಗಳಲ್ಲಿ ಮಕ್ಕಳಲ್ಲಿನ ಅಪೌಷ್ಟಿಕತೆಯನ್ನು ಪರಿಶೀಲಿಸುವಲ್ಲಿ ಸಕಾರಾತ್ಮಕ ಫಲಿತಾಂಶಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಮುಂದಿನ ವರ್ಷದಲ್ಲಿ ಹೆಚ್ಚಿನ ದಿನ ಮೊಟ್ಟೆ ವಿತರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

2007ರಿಂದಲೇ 1-8ನೇ ತರಗತಿ ಮಕ್ಕಳಿಗೆ ಮೊಟ್ಟೆ ನೀಡಬೇಕೆಂಬ ಚರ್ಚೆ ನಡೆಯುತ್ತಿದೆ. ಆದರೆ, ನಮ್ಮ ಸರ್ಕಾರ ಯಾವುದೇ ವಿರೋಧ ಬಂದರೂ ಲೆಕ್ಕಿಸದೇ ಅಪೌಷ್ಠಿಕತೆ ಕಂಡುಬಂದ ಜಿಲ್ಲೆಗಳಲ್ಲಿ ಮೊಟ್ಟೆ ನೀಡಿತ್ತಾ ಬಂದಿದೆ. ರಾಜ್ಯದಲ್ಲಿ 1-15ನೇ ವಯಸ್ಸಿನ ಶಾಲಾ ಮಕ್ಕಳಲ್ಲಿ ಅಪೌಷ್ಠಿಕತೆ, ರಕ್ತಹೀನತೆ, ಬಹು ಪೋಷಕಾಂಶಗಳ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ 2021-22ನೇ ಸಾಲಿನಿಂದ ಮೊಟ್ಟೆ ಅಥವಾ ಮೊಟ್ಟೆ ಸೇವಿಸದ ಮಕ್ಕಳಿಗೆ ಬಾಳೆಹಣ್ಣು-ಚಿಕ್ಕಿ ನೀಡಲಾಗುತ್ತಿದೆ ಎಂದರು.

ಪ್ರಾರಂಭದಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಮೊಟ್ಟೆ, ಬಾಳೆಹಣ್ಣು, ಚಿಕ್ಕಿ ನೀಡಲು ಆರಂಭಿಸಲಾಯಿತು. ಕಳೆದ ವರ್ಷದಿಂದ ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಲಾಗಿದೆ. ಮಕ್ಕಳಿಗೆ ಬಲವಂತವಾಗಿ ಮೊಟ್ಟೆ ನೀಡಿಲ್ಲ ಎಂದು ತಿಳಿಸಿದರು.

ಕೆಲವರು ಸಾತ್ವಿಕ ಆಹಾರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಮತ್ತು ಅದು ಅವರ ಅಭಿಪ್ರಾಯವಾಗಿದೆ. ಆದರೆ, ಈ ಬಗ್ಗೆ ಸರ್ಕಾರ ಚಿಂತನೆ ನಡೆಸಿಲ್ಲ. ಇನ್ನು ಶಾಲಾ ಹಂತದಲ್ಲಿ ನೈತಿಕ ಶಿಕ್ಷಣ ನೀಡಬೇಕೆಂಬ ಸಲಹೆಗಳೂ ಬಂದಿವೆ. ಮುಂದಿನ ವರ್ಷದಿಂದ ನೈತಿಕ ಶಿಕ್ಷಣವನ್ನು ಜಾರಿಗೆ ತರಲು ಪ್ರಯತ್ನಿಸಲಾಗುತ್ತದೆ ಎಂದರು.

ನೈತಿಕ ಶಿಕ್ಷಣ ಮತ್ತು ಸಾತ್ವಿಕ ಆಹಾರವನ್ನು ಒಂದೇ ದೃಷ್ಟಿಕೋನದಿಂದ ನೋಡುವುದು ಸರಿಯಲ್ಲ ಎಂದು ತಿಳಿಸಿದರು.

ಇದಕ್ಕೆ ದನಿಗೂಡಿಸಿದ ಪರಿಷತ್ ಸಭಾಪತಿ ಅವರು‌, ಶಾಲೆಗಳಲ್ಲಿ ನೈತಿಕ ಶಿಕ್ಷಣ ಬೋಧಿಸುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.

ಇದಕ್ಕೂ ಮುನ್ನ, ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ರಾಜ್ಯದಲ್ಲಿ ಶೇಕಡ 3.6 ಮಕ್ಕಳಿಗೆ ಮಾತ್ರ ಪೌಷ್ಟಿಕ ಆಹಾರ ಸಿಗುತ್ತಿದೆ. ಉಳಿದವರಿಗೆ ಸಿಗುತ್ತಿಲ್ಲ ಎಂದು ಇತ್ತೀಚಿನ ಅಧ್ಯಯನ ವರದಿ ಒಂದು ಹೇಳಿದೆ. ರಾಜ್ಯದ ಶಾಲೆಗಳಲ್ಲಿ ಮೊಟ್ಟೆ ನೀಡಬೇಕು ಎಂಬ ಚರ್ಚೆ ನಡೆದಾಗ, 48 ಲಕ್ಷ ಮಕ್ಕಳ ಪೈಕಿ 37 ಲಕ್ಷ ಮಕ್ಕಳು ಮೊಟ್ಟೆ ಬೇಕು ಎಂದರೆ, 10 ಲಕ್ಷ ಮಕ್ಕಳು ಬೇಡ ಎಂದಿದ್ದಾರೆ ಎಂಬ ಅಂಶದ ಕಡೆಗೆ ಗಮನಸೆಳೆದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com