ಕಲುಷಿತ ನೀರು ಸೇವನೆ ಪ್ರಕರಣ: ಮೃತರ ಸಂಖ್ಯೆ 3ಕ್ಕೆ ಏರಿಕೆ, 66 ಮಂದಿ ಅಸ್ವಸ್ಥ, ಸರ್ಕಾರದಿಂದ ಪರಿಹಾರ ಭರವಸೆ

ಯಾದಗಿರಿಯ ಗುರುಮಠಕಲ್ ತಾಲ್ಲೂಕಿನ ಅನಪುರ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಅಸ್ವಸ್ಥರಾಗಿದ್ದ ನರಸಮ್ಮ ಯಲ್ಲಪ್ಪ (75) ಎಂಬುವರು ಮೃತರಾಗಿದ್ದು, ಆ ಮೂಲಕ ಪ್ರಕರಣದಲ್ಲಿ ಸಾವಿಗೀಡಾದವರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.
ಕುಲುಷಿತ ನೀರು ಸೇವನೆ ಪ್ರಕರಣ
ಕುಲುಷಿತ ನೀರು ಸೇವನೆ ಪ್ರಕರಣ
Updated on

ಯಾದಗಿರಿ: ಯಾದಗಿರಿಯ ಗುರುಮಠಕಲ್ ತಾಲ್ಲೂಕಿನ ಅನಪುರ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಅಸ್ವಸ್ಥರಾಗಿದ್ದ ನರಸಮ್ಮ ಯಲ್ಲಪ್ಪ (75) ಎಂಬುವರು ಮೃತರಾಗಿದ್ದು, ಆ ಮೂಲಕ ಪ್ರಕರಣದಲ್ಲಿ ಸಾವಿಗೀಡಾದವರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.

ಬುಧವಾರ ರಾತ್ರಿ ಯಾದಗಿರಿ ಜಿಲ್ಲಾ ಆಸ್ಪತ್ರೆಯಲ್ಲಿ ನರಸಮ್ಮ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಇದರೊಂದಿಗೆ ಮೃತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಮೂರು ದಿನಗಳಲ್ಲಿ ಗ್ರಾಮದ ಒಟ್ಟು 66 ಮಂದಿ ವಾಂತಿ ಭೇದಿಯಿಂದ ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥ ಗ್ರಾಮಸ್ಥರಿಗೆ ಗ್ರಾಮದ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ನಂತರ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಸ್ನೇಹಲ್‌ ಆರ್‌. ಅವರು, 'ಜಿಲ್ಲಾ ಆಸ್ಪತ್ರೆ, ತೆಲಂಗಾಣದ ನಾರಾಯಣಪೇಟ ಮತ್ತು ರಾಯಚೂರಿನ ರಿಮ್ಸ್‌ ಆಸ್ಪತ್ರೆಯಲ್ಲಿ ಅಸ್ವಸ್ಥರಿಗೆ ಚಿಕಿತ್ಸೆ ಮುಂದು ವರೆದಿದೆ. ಈ ಎಲ್ಲದ್ದಕ್ಕೂ ಕಲುಷಿತ ನೀರು ಅಥವಾ ಕಳಪೆ ಆಹಾರ ಕಾರಣವೇ ಎಂಬುದು ಸ್ಪಷ್ಟವಾಗುತ್ತಿಲ್ಲ. ಎಲ್ಲ ಜಲಮೂಲಗಳ ಪರಿಶೀಲನೆ ನಡೆಸಿದ್ದೇವೆ’ ಎಂದು ತಿಳಿಸಿದರು.

‘ಅನಪುರಕ್ಕೆ ಪೂರೈಕೆಯಾಗುವನೀರು ಕುಡಿಯಲು ಯೋಗ್ಯವಲ್ಲ ಎಂದು ಯಾದಗಿರಿಯ ಪ್ರಯೋಗಾಲಯವು ವರದಿ ನೀಡಿದೆ. ನೀರಿನಲ್ಲಿ ಯಾವ ಬ್ಯಾಕ್ಟೀರಿಯ ಇದೆ ಎಂಬುದನ್ನು ತಿಳಿಯಲು, ನೀರನ್ನು ರಾಯಚೂರು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ಯಾದಗಿರಿ ತಾಲ್ಲೂಕು ವೈದ್ಯಾಧಿಕಾರಿ ಡಾ.ಹಣಮಂತ ರೆಡ್ಡಿರವರು ಮಾಹಿತಿ ನೀಡಿದರು.

ಸರ್ಕಾರದಿಂದ ಪರಿಹಾರ ಭರವಸೆ: ಆರಗ ಜ್ಞಾನೇಂದ್ರ
ಗುರುಮಠಕಲ್‌ ತಾಲ್ಲೂಕಿನ ಅನಪುರದಲ್ಲಿ ಕಲುಷಿತ ನೀರು ಕುಡಿದು ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು. 'ವಿಧಾನಸಭೆಯಲ್ಲಿ ಶೂನ್ಯವೇಳೆಯಲ್ಲಿ ಜೆಡಿಎಸ್‌ನ ನಾಗನಗೌಡ ಕಂದಕೂರು ಅವರ ಪ್ರಶ್ನೆಗೆ ಉತ್ತರಿಸಿ, ಎಷ್ಟು ಪರಿಹಾರ ನೀಡಬೇಕು ಎಂಬುದನ್ನು ಮುಖ್ಯಮಂತ್ರಿಯವರ ಜತೆ ಚರ್ಚಿಸಲಾಗುವುದು. ಈ ಪ್ರಕರಣದಲ್ಲಿ ಮೂವರು ಮೃತಪಟ್ಟಿದ್ದಾರೆ. 58 ಮಂದಿ ಅಸ್ವಸ್ಥಗೊಂಡಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಪರಿಸ್ಥಿತಿ ಗಂಭೀರವಾಗಿ ಇರುವವರಿಗೆ ಹೆಚ್ಚಿನ ಚಿಕಿತ್ಸೆ ಕೊಡಿಸಲು ವ್ಯವಸ್ಥೆ ಮಾಡಲಾಗುವುದು’ ಎಂದೂ ಜ್ಞಾನೇಂದ್ರ ಭರವಸೆ ನೀಡಿದರು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com