ರಾಜಧಾನಿಯಲ್ಲಿಂದು ಮಹಾಶಿವರಾತ್ರಿ: ಗವಿ ಗಂಗಾಧರೇಶ್ವರ ದೇಗುಲದಲ್ಲಿ ವಿಶೇಷ ಪೂಜೆ, ಜನತೆಗೆ ಶುಭಾಶಯ ಕೋರಿದ ಸಿಎಂ

ರಾಜ್ಯದಾದ್ಯಂತ ಮಹಾಶಿವರಾತ್ರಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಎಲ್ಲೆಲ್ಲೂ ಮಹಾ ಶಿವನಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ಗವಿ ಗಂಗಾಧರೇಶ್ವರ ಸ್ವಾಮಿ ದೇವಸ್ಥಾನ ಸೇರಿ ನಗರದ ಪ್ರಮುಖ ಶಿವ-ನಂದಿ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯುತ್ತಿವೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ರಾಜ್ಯದಾದ್ಯಂತ ಮಹಾಶಿವರಾತ್ರಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಎಲ್ಲೆಲ್ಲೂ ಮಹಾ ಶಿವನಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ಗವಿ ಗಂಗಾಧರೇಶ್ವರ ಸ್ವಾಮಿ ದೇವಸ್ಥಾನ ಸೇರಿ ನಗರದ ಪ್ರಮುಖ ಶಿವ-ನಂದಿ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯುತ್ತಿವೆ. ಈ ನಡುವೆ ಜಾಗರಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ಶಿವನ ಸನ್ನಿಧಿಗಳಲ್ಲಿ ದಿನವಿಡೀ ವಿಶೇಷ ಪೂಜಾ ಕೈಂಕರ್ಯ, ಅಭಿಷೇಕ, ರುದ್ರಾಭಿಷೇಕ, ಬಿಲ್ವಪತ್ರೆ ಅರ್ಪಣೆ, ಮಹಾಮಂಗಳಾರತಿ, ಶಿವ ಸಹಸ್ರನಾಮಪಠಣ, ಸಂಕೀರ್ತನೆ, ಪೂರಾಣ ಪಠಣ, ವೇದಾಂತ ಉಪನ್ಯಾಸ, ಸಂಗೀತೋತ್ಸವ ಮತ್ತು ಅಹೋರಾತ್ರಿ ಶಿವನಾಮೆ ಜಪಗಳು ನಡೆಯಲಿವೆ. ರಾತ್ರಿ ಜಾಗರಣೆಗಾಗಿ ಸಂಘ ಸಂಸ್ಥೆಗಳು ಕೀರ್ತನೆ, ಭಜನೆ, ಪೌರಾಣಿಕ ನಾಟಕ ಸೇರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿವೆ.

ಮಹಾಶಿವರಾತ್ರಿ ನಿಮಿತ್ತ ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಗೊಳಪಡುವ ಶಿವ ದೇವಾಲಯಗಳಲ್ಲಿ ಭಕ್ತರಿಗೆ ಗಂಗಾಜಲ ವಿತರಣೆಯಾಗಲಿದೆ. ಇದಕ್ಕಾಗಿ ಹರಿದ್ವಾರದಿಂದ ಸಾವಿರಾರು ಲೀಟರ್ ಪವಿತ್ರ ಗಂಗಾ ಜಲವನ್ನು ತರಿಸಲಾಗಿದ್ದು, ಆನಂದ ಗುರೂಜಿ ಹಾಗೂ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ನೇತೃತ್ವದಲ್ಲಿ ರಾಜ್ಯದ ಮೂರು ಸಾವಿರಕ್ಕೂ ಅಧಿಕ ಪುರಾತನ ಶಿವನ ದೇವಾಲಯಗಳಲ್ಲಿ ಪವಿತ್ರ ಗಂಗಾಜಲ ವಿತರಿಸಲಾಗುತ್ತದೆ.

ಜನತೆಗೆ ಸಿಎಂ ಬೊಮ್ಮಾಯಿ ಶುಭಾಶಯ
ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ರಾಜ್ಯದ ಜನತೆಗೆ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು. ಮಹಾಶಿವನ ಕೃಪಾಶೀರ್ವಾದ ಸದಾ ಈ ನಾಡಿನ ಜನತೆಯ ಮೇಲಿದ್ದು, ನಾಡಿನಲ್ಲಿ ಸದಾ ಸುಖ, ಶಾಂತಿ, ನೆಮ್ಮದಿ ಹಾಗೂ ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸುತ್ತೇನೆಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com