ರಾಮನಗರ ಸರ್ಕಾರಿ ಶಾಲೆಯಲ್ಲಿ ಕಳ್ಳರ ಹಾವಳಿ: ಆತಂಕದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು

ರಾಮನಗರದ ಸರ್ಕಾರಿ ಬಾಲಕರ ಪ್ರೌಢಶಾಲೆಗೆ ಪದೇ ಪದೇ ಕಳ್ಳರು ನುಗ್ಗುತ್ತಿದ್ದು, ಕಳ್ಳರ ಹಾವಳಿಯಿಂದಾಗಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭೀತಿಗೊಳಗಾಗಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಮನಗರದ ಸರ್ಕಾರಿ ಬಾಲಕರ ಪ್ರೌಢಶಾಲೆಗೆ ಪದೇ ಪದೇ ಕಳ್ಳರು ನುಗ್ಗುತ್ತಿದ್ದು, ಕಳ್ಳರ ಹಾವಳಿಯಿಂದಾಗಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭೀತಿಗೊಳಗಾಗಿದ್ದಾರೆ.

ರಾಮನಗರದ ಹಾಜಿನಗರ ವಾರ್ಡ್‌ನಲ್ಲಿರುವ ಶಾಲೆಗೆ ಕಳ್ಳರು ಪದೇ ಪದೇ ನುಗ್ಗುತ್ತಿದ್ದು, ಶಾಲೆಯ ಕೊಠಡಿಗಳ ಬೀಗ ಒಡೆದು ಆಹಾರ ಧಾನ್ಯಗಳು, ಸಿಸಿಟಿವಿ ಕ್ಯಾಮೆರಾಗಳು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ಯುತ್ತಿದ್ದಾರೆ.

ಕೆಲ ದಿನಗಳ ಹಿಂದೆ ದುಷ್ಕರ್ಮಿಗಳು ಶಾಲೆಯ ದಾಖಲೆಗಳ ಕೊಠಡಿಯನ್ನೂ ಪ್ರವೇಶಿಸಲು ಪ್ರಯತ್ನ ಮಾಡಿದ್ದು, ಕಬ್ಬಿಣದ ಬಾಗಿಲುಗಳಿದ್ದ ಕಾರಣ ಒಡೆಯಲು ಅವರಿಗೆ ಸಾಧ್ಯವಾಗಿಲ್ಲ. ಒಂದು ವೇಳೆ ಕಳ್ಳರ ಈ ಪ್ರಯತ್ನ ಯಶಸ್ವಿಯಾಗಿದ್ದೇ ಆದರೆ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಂಕಷ್ಟಕ್ಕೆ ಸಿಲುಕಿಕೊಳ್ಳಲಿದ್ದಾರೆ. ಏಕೆಂದರೆ, ವಿದ್ಯಾರ್ಥಿಗಳ ಪ್ರಮುಖ ದಾಖಲೆಗಳು, ಅಧ್ಯಾಪಕರ ಸೇವಾ ದಾಖಲೆಗಳು ಈ ಕೊಠಡಿಯಲ್ಲಿವೆ ಎನ್ನಲಾಗಿದೆ.

ದುಷ್ಕರ್ಮಿಗಳು ಶಾಲೆಗೆ ನುಗ್ಗಿ ಬೆಲೆ ಬಾಳುವ ವಸ್ತುಗಳನ್ನು ಹೊತ್ತುಯ್ಯಿತ್ತಿರುವುದಷ್ಟೇ ಅಲ್ಲದೆ, ಕೆಲ ಕೊಠಡಿಗೆ ಬೆಂಕಿ ಹಚ್ಚಿರುವುದೂ ಕೂಡ ಕಂಡು ಬಂದಿದೆ.

ಕಟ್ಟಡವು ಈಗಾಗಲೇ ಶಿಥಿಲಾವಸ್ಥೆ ತಲುಪಿದೆ. ಶಾಲೆಗೆ ಪೂರ್ಣಾವಧಿ ಮುಖ್ಯಶಿಕ್ಷಕಿ ಕೂಡ ಇಲ್ಲ. ಈ ಕಾರಣದಿಂದ ಹಿರಿಯ ಶಿಕ್ಷಕಿ ಪ್ರೇಮಾ ಅವರನ್ನು ಶಾಲೆಯ ಪ್ರಭಾರಿ ಉಪಪ್ರಾಂಶುಪಾಲರಾಗಿ (ಗ್ರಾ.ಪಂ.) ನೇಮಕ ಮಾಡಲಾಗಿದೆ.

ಶಾಲೆಯ ಕಾಂಪೌಂಡ್ ಕುಡುಕರ ಆಶ್ರಯ ತಾಣವಾಗಿ ಮಾರ್ಪಟ್ಟಿದೆ. ಕಳ್ಳರ ಹಾವಳಿ ಕೂಡ ಹೆಚ್ಚಾಗಿದ್ದು, ಶಾಲೆಗೆ ಭದ್ರತಾ ಸಿಬ್ಬಂದಿಗಳ ನಿಯೋಜಿಸುವಂತೆ ಶಿಕ್ಷಣ ಇಲಾಖೆ ಪತ್ರ ಬರೆದಿರುವುದಾಗಿ ಪ್ರೇಮಾ ಅವರು ಹೇಳಿದ್ದಾರೆ.

ಜನವರಿ 17 ಮತ್ತು 20 ರ ನಡುವೆ ಶಾಲೆಯನ್ನು ಮುಚ್ಚಲಾಗಿತ್ತು. ಈ ವೇಳೆ ಕಳ್ಳರು ಶಾಲೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಶಾಲೆಗೆ ನುಗ್ಗಿರುವ ಕಳ್ಳರು 300 ಕೆಜಿ ಅಕ್ಕಿ, 50 ಕೆಜಿ ಗೋಧಿ ಮತ್ತು 25 ಕೆಜಿ ಹಾಲಿನ ಪುಡಿ, ಲೈಬ್ರರಿ ಪುಸ್ತಕಗಳು ಮತ್ತು ಮೂರು ಸಿಸಿಟಿವಿ ಕ್ಯಾಮೆರಾಗಳನ್ನು ಕದ್ದಿದ್ದಾರೆಂದು ಪ್ರೇಮಾ ಅವರು ಮಾಹಿತಿ ನೀಡಿದ್ದಾರೆ.

ಹಾನಿಗೊಳಗಾಗಿರುವ ಕೊಠಡಿಯಲ್ಲಿದ್ದ ದಾಖಲೆಗಳನ್ನು ಮತ್ತೊಂದು ಕೊಠಡಿಗೆ ಸ್ಥಳಾಂತರಿಸುವ ಕೆಲಸ ಮಾಡುತ್ತಿದ್ದೇವೆ. ಕೆಲವೇ ದಿನಗಳಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ವಿದ್ಯಾರ್ಥಿಗಳಿಗೆ ಸೇರಿದ ದಾಖಲೆಗಳು ಕೊಠಡಿಯಲ್ಲಿದ್ದವು. ಆಹಾರಧಾನ್ಯಗಳು ಕಳ್ಳತನವಾದ ಕಾರಣ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಲು ಸಮೀಪದ ಸರ್ಕಾರಿ ಶಾಲೆಗಳಿಂದ ಆಹಾರಧಾನ್ಯಗಳನ್ನು ಸಂಗ್ರಹಿಸಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಶಾಲೆಯಲ್ಲಿ ಏನೇ ನಡೆದರೂ ಅದಕ್ಕೆ ನಾನು ಜವಾಬ್ದಾರಳಾಗಿದ್ದೇನೆ. ಎಲ್ಲದಕ್ಕೂ ನಾನು ಉತ್ತರ ನೀಡಬೇಕು. ಕಳ್ಳರ ಹಾವಳಿ ತಲೆ ಬಿಸಿಯಾಗುವಂತೆ ಮಾಡಿದೆ ಎಂದು ಪ್ರೇಮಾ ಅವರು ಹೇಳಿದ್ದಾರೆ.

ಏತನ್ಮಧ್ಯೆ, ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದು, ಕಳ್ಳರು ಸುತ್ತಮುತ್ತಲಿನ ಸ್ಥಳೀಯರೇ ಆಗಿರಬೇಕೆಂದು ಶಂಕಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com