ಕೋರ್ಟ್ ಮೆಟ್ಟಿಲೇರಿದ ಅಧಿಕಾರಿ ರೋಹಿಣಿ ಸಿಂಧೂರಿ: 1 ಕೋಟಿ ರೂ. ಮಾನನಷ್ಟ ಮೊಕದ್ದಮೆ, ರೂಪಾಗೆ ಲೀಗಲ್ ನೊಟೀಸ್ ಜಾರಿ

ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದ ಇಬ್ಬರು ಮಹಿಳಾ ಅಧಿಕಾರಿಗಳಾದ ಡಿ ರೂಪಾ ಮತ್ತು ರೋಹಿಣಿ ಸಿಂಧೂರಿಯವರಿಗೆ ಸಂಬಂಧಿಸಿದ ಸುದ್ದಿಗಳು ಸಾಕಷ್ಟು ಹೊರಬಿದ್ದಿದೆ. ರಾಜಕೀಯ ಪಡಸಾಲೆಯಲ್ಲಿಯೂ ಸದ್ಯ ಬಹುಚರ್ಚಿತ ವಿಷಯ.
ಡಿ ರೂಪಾ, ರೋಹಿಣಿ ಸಿಂಧೂರಿ(ಸಂಗ್ರಹ ಚಿತ್ರ)
ಡಿ ರೂಪಾ, ರೋಹಿಣಿ ಸಿಂಧೂರಿ(ಸಂಗ್ರಹ ಚಿತ್ರ)
Updated on

ಬೆಂಗಳೂರು: ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದ ಇಬ್ಬರು ಮಹಿಳಾ ಅಧಿಕಾರಿಗಳಾದ ಡಿ ರೂಪಾ ಮತ್ತು ರೋಹಿಣಿ ಸಿಂಧೂರಿಯವರಿಗೆ ಸಂಬಂಧಿಸಿದ ಸುದ್ದಿಗಳು ಸಾಕಷ್ಟು ಹೊರಬಿದ್ದಿದೆ. ರಾಜಕೀಯ ಪಡಸಾಲೆಯಲ್ಲಿಯೂ ಸದ್ಯ ಬಹುಚರ್ಚಿತ ವಿಷಯ.

ವೃತ್ತಿಪರ ಮಟ್ಟದಿಂದ ವೈಯಕ್ತಿಕ ಮಟ್ಟಕ್ಕೆ ಇವರಿಬ್ಬರ ಆರೋಪ-ಪ್ರತ್ಯಾರೋಪ ಸಾಗಿ ಇಬ್ಬರಿಗೂ ಸರ್ಕಾರ ಹುದ್ದೆಯನ್ನು ತೋರಿಸದೆ ವರ್ಗಾವಣೆ ಮಾಡಿದೆ. ಇವರಿಬ್ಬರ ಕಿತ್ತಾಟದಲ್ಲಿ ರೂಪಾ ಅವರ ಪತಿ ಮುನೀಶ್ ಮೌದ್ಗಿಲ್ ಅವರನ್ನೂ ಸರ್ಕಾರ ಬೇರೆ ಇಲಾಖೆಗೆ ವರ್ಗಾಯಿಸಿದೆ.

ಇದೀಗ ರೋಹಿಣಿ ಸಿಂಧೂರಿ ಐಪಿಎಸ್ ಅಧಿಕಾರಿ ರೂಪಾ ವಿರುದ್ಧ ಕಾನೂನು ಸಮರಕ್ಕೆ ಕೋರ್ಟ್ ಮೆಟ್ಟಿಲೇರಿದ್ದಾರೆ. ಎರಡು ದಿನಗಳ ಹಿಂದೆ ಬೆಂಗಳೂರಿನ ಬಾಗಲಗುಂಟೆಯ ಪೊಲೀಸ್ ಠಾಣೆಯಲ್ಲಿ ಸಿಂಧೂರಿ ಪತಿ ಸುಧೀರ್ ರೆಡ್ಡಿ ರೂಪಾ ವಿರುದ್ಧ ದೂರು ನೀಡಿದ್ದರು. ಆದರೆ ಆಗ ಎಫ್ಐಆರ್ ದಾಖಲಾಗಿರಲಿಲ್ಲ.

ಇದೀಗ ನಿನ್ನೆ ರೋಹಿಣಿ ಸಿಂಧೂರಿಯವರು ಕೋರ್ಟ್ ಮೆಟ್ಟಿಲೇರಿದ್ದು ಅವರ ಪರ ವಕೀಲರು ರೂಪಾ ಅವರಿಗೆ ಲೀಗಲ್ ನೊಟೀಸ್ ಕಳುಹಿಸಿದ್ದಾರೆ. ಅಲ್ಲದೆ ನೊಟೀಸ್ ನಲ್ಲಿ ರೋಹಿಣಿ ಸಿಂಧೂರಿಯವರ ಮಾನಹಾನಿ ಮಾಡುವ ಫೋಟೋಗಳು, ಪೋಸ್ಟ್ ಗಳನ್ನು ಸೋಷಿಯಲ್ ಮೀಡಿಯಾಗಳಿಂದ ತೆಗೆಯುವಂತೆ ರೂಪಾ ಅವರಿಗೆ ಸೂಚಿಸಿದ್ದು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕೆಂದು ನೊಟೀಸ್ ನಲ್ಲಿ ಆಗ್ರಹಿಸಿದ್ದಾರೆ.

ಅಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ವೈಯಕ್ತಿಕ ಖಾಸಗಿ ಫೋಟೋಗಳು ಮತ್ತು ವಿಚಾರಗಳನ್ನು ಪೋಸ್ಟ್ ಮಾಡುವ ಮೂಲಕ ಮಾನಹಾನಿಯಾಗಿದ್ದು ತಮಗೆ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕೆಂದು  ಒತ್ತಾಯಿಸಿದ್ದಾರೆ.

ತಡೆಯಾಜ್ಞೆ ನೀಡುವಂತೆ ಮನವಿ, ಇಂದು ತೀರ್ಪು: ರೋಹಿಣಿ ಸಿಂಧೂರಿ ಅವರು ಐಜಿಪಿ ಶ್ರೇಣಿಯ ಅಧಿಕಾರಿ ರೂಪಾ ವಿರುದ್ಧ ಕಾನೂನು ಕ್ರಮಗಳನ್ನು ಕೈಗೆತ್ತಿಕೊಂಡಿದ್ದು, ನಿನ್ನೆ ಬೆಂಗಳೂರು ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ರೂಪಾ ವಿರುದ್ಧ ತಡೆಯಾಜ್ಞೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು. ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ ಮಧ್ಯಂತರ ಆದೇಶವನ್ನು ಇಂದಿಗೆ ಕಾಯ್ದಿರಿಸಿದೆ. 

ಮಾನಹಾನಿಕರ ಹೇಳಿಕೆಗಳು ಮತ್ತು ಆಪಾದನೆಗಳನ್ನು ಮಾಡಿದ್ದಕ್ಕಾಗಿ ಲಿಖಿತವಾಗಿ ಬೇಷರತ್ ಕ್ಷಮೆಯಾಚಿಸುವಂತೆ ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿನ ಹಿಂದಿನ ಪೋಸ್ಟ್‌ಗಳನ್ನು ಅಳಿಸುವಾಗ ತನ್ನ ಫೇಸ್‌ಬುಕ್ ಪುಟದಲ್ಲಿ ಹಾಗೂ ಮಾಧ್ಯಮಗಳ ಮುಂದೆ ಕ್ಷಮೆಯನ್ನು ಕೇಳಿ ಪೋಸ್ಟ್ ಮಾಡುವಂತೆ ರೋಹಿಣಿ ಸಿಂಧೂರಿ ಅವರು ರೂಪಾ ವಿರುದ್ಧ ಕಾನೂನು ನೋಟಿಸ್ ನೀಡಿದ್ದಾರೆ.

ಪ್ರತಿಷ್ಠೆ ಮತ್ತು ಮಾನಸಿಕ ಸಂಕಟಕ್ಕೆ ಕಾರಣರಾದ ಐಎಎಸ್ ಅಧಿಕಾರಿ ರೂಪಾ ಅವರಿಂದ 1 ಕೋಟಿ ರೂಪಾಯಿ ಮಾನನಷ್ಟ ಪರಿಹಾರ ಕೇಳಿರುವ ರೋಹಿಣಿ ಸಿಂಧೂರಿಯವರು ರೂಪಾ ಕ್ಷಮೆಯಾಚಿಸಲು ಮತ್ತು ನಷ್ಟವನ್ನು ಪಾವತಿಸಲು ವಿಫಲವಾದರೆ ಐಪಿಸಿಯ ಸೆಕ್ಷನ್ 500 (ಮಾನನಷ್ಟ ಶಿಕ್ಷೆ) ಅಡಿಯಲ್ಲಿ ಸೂಕ್ತ ಕ್ರಿಮಿನಲ್ ಮೊಕದ್ದಮೆಗಳನ್ನು ಪ್ರಾರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com