ಶಿವಮೊಗ್ಗದಲ್ಲಿ ಪ್ರಧಾನಿ ಮೋದಿ: ರೂ.450 ಕೋಟಿ ವೆಚ್ಚದ ನೂತನ ವಿಮಾನ ನಿಲ್ದಾಣ ಉದ್ಘಾಟನೆ, ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
ಶಿವಮೊಗ್ಗ: ಶಿವಮೊಗ್ಗಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಭೇಟಿ ನೀಡಿದ್ದು, ಸೋಗಾನೆಯಲ್ಲಿ ರೂ.450 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ವಿಮಾನ ನಿಲ್ದಾಣವನ್ನು ಉದ್ಘಾಟನೆ ಮಾಡಿದ್ದಾರೆ.
ನವದದೆಹಲಿಯಿಂದ ಸೇನಾ ವಿಮಾನದಲ್ಲಿ ಬಂದ ಮೋದಿಯವರು ಶಿವಮೊಗ್ಗ ನೂತನ ವಿಮಾನ ನಿಲ್ದಾಣಕ್ಕೆ ನೇರವಾಗಿ ಬಂದಿಳಿದರು.
ಈ ವೇಳೆ ಪ್ರಧಾನಿ ಮೋದಿಗೆ ಸಿಎಂ ಬಸವರಾಜ ಬೊಮ್ಮಾಯಿ, ಸಚಿವರಾದ ನಾರಾಯಣಗೌಡ, ಭೈರತಿ ಬಸವರಾಜ್, ಶಾಸಕ ಸಿ.ಟಿ.ರವಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸೇರಿ ಹಲವರು ಸ್ವಾಗತ ಕೋರಿದರು.
ಬಳಿಕ ವಿಮಾನ ನಿಲ್ದಾಣವನ್ನು ಮೋದಿಯವರು ಉದ್ಘಾಟನೆ ಮಾಡಿ, ಸಮಾರಂಭ ವೇದಿಕೆಯಲ್ಲಿ ಮೋದಿಯವರಿಗೆ ಶಾಲು ಹೊದಿಸಿ ಈಶ್ವರಪ್ಪ ಅವರು ಸನ್ಮಾನಿಸಿದರು. ಬಳಿಕ ಮೋದಿಯವರಿಗೆ ವಿಶೇಷ ಪೇಟ ತೊಡಿಸಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ. ಶಿವಮೊಗ್ಗ ಏರ್‌ಪೋರ್ಟ್ ಕಲಾಕೃತಿಯನ್ನು ಕಾಣಿಕೆ ನೀಡಿದರು.
ಬಳಿಕ ಯಡಿಯೂರಪ್ಪ ಅವರಿಗೆ ಪ್ರಧಾನಿ ಮೋದಿ ಸನ್ಮಾನ ಮಾಡಿದರು. ಹಸಿರು ಶಾಲು ಹೊದಿಸಿ, ಅಡಕೆ ಹಾರ ಹಾಕಿ, ಪೇಟ ತೊಡಿಸಿ, ನೇಗಿಲು ನೀಡಿ ಸನ್ಮಾನಿಸಿದರು.
ಸ್ಮಾರ್ಟ್ ಸಿಟಿ ಕಾಮಗಾರಿಗಳ ಉದ್ಘಾಟನೆ
ವಿಮಾನ ನಿಲ್ದಾಣ ಉದ್ಘಾಟನೆ ಬಳಿಕ ಪ್ರಧಾನಿ ಮೋದಿಯವರು ಶಿವಮೊಗ್ಗದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಸ್ಮಾರ್ಟ್ಸಿಟಿ ಕಾಮಗಾರಿ, ಶಿಮುಲ್ ಹಾಲು ಪ್ಯಾಕಿಂಗ್ ಘಟಕ, ಮಾಮ್ ಕೋಸ್ ಆಡಳಿತ ಭವನ, ಶಿಮೊಗ್ಗ-ಶಿಕಾರಿಪುರ, ರಾಣೆಬೆನ್ನೂರು ಹೊಸ ರೈಲು ಮಾರ್ಗಕ್ಕೆ ಶಿಲಾನ್ಯಾಸ ಹಾಗೂ ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋಗೆ ಶಿಲಾನ್ಯಾಸ ಮಾಡಿದರು.
ಏರ್‌ಪೋರ್ಟ್ ಕುರಿತ ಕಿರುಚಿತ್ರ ಪ್ರದರ್ಶನ
ಕರ್ನಾಟಕದಲ್ಲಿ ಹೆಚ್ಚಾಗುತ್ತಿರುವ ವಿಮಾನಯಾನ ಪ್ರಯಾಣಿಕರು, ಕೇಂದ್ರ ಸರ್ಕಾರ ವಿಮಾನಯಾನಕ್ಕೆ ನೀಡಿದ ಉತ್ತೇಜನ, ಹೊಸ ವಿಮಾನ ನಿಲ್ದಾಣ ಸ್ಥಾಪನೆ, ಪ್ರವಾಸೋದ್ಯಮ ಕುರಿತು ವೇದಿಕೆಯಲ್ಲಿ ಕಿರುಚಿತ್ರ ಪ್ರದರ್ಶನವಾಯಿತು.
ಕಿರುಚಿತ್ರದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣದ ಸೌಲಭ್ಯಗಳು, ಅದರ ವಿಶೇಷತೆಗಳು, ಆರಂಭದಿಂದ ಹಿಡಿದು ಉದ್ಘಾಟನೆಯವರೆಗಿನ ಮಾಹಿತಿಯನ್ನು ನೀಡಲಾಯಿತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ