ರಾಜ್ಯ ವಿಧಾನಸಭಾ ಚುನಾವಣೆ: ಕೇಂದ್ರ ಚುನಾವಣಾ ಆಯೋಗದಿಂದ ಪೂರ್ವ ತಯಾರಿ, ಪರಿಶೀಲನೆ

2023ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಿದ್ದ ಪೂರ್ವತಯಾರಿ ಕಾರ್ಯಗಳನ್ನು ಭಾರತ ಚುನಾವಣಾ ಆಯೋಗದ ಉಪ ಚುನಾವಣಾ ಆಯುಕ್ತರಾದ  ಅಜಯ್ ಭಾದೂ ಹಾಗೂ ಕಾರ್ಯದರ್ಶಿ ಬಿ.ಸಿ. ಪಾತ್ರ ಅವರು ಪರಿವೀಕ್ಷಣೆ ನಡೆಸಿದರು.
ಚುನಾವಣೆ ಪೂರ್ವ ತಯಾರಿ, ಪರಿಶೀಲನಾ ಸಭೆ
ಚುನಾವಣೆ ಪೂರ್ವ ತಯಾರಿ, ಪರಿಶೀಲನಾ ಸಭೆ
Updated on

ಬೆಂಗಳೂರು: 2023ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಿದ್ದ ಪೂರ್ವತಯಾರಿ ಕಾರ್ಯಗಳನ್ನು ಭಾರತ ಚುನಾವಣಾ ಆಯೋಗದ ಉಪ ಚುನಾವಣಾ ಆಯುಕ್ತರಾದ ಅಜಯ್ ಭಾದೂ ಹಾಗೂ ಕಾರ್ಯದರ್ಶಿ ಬಿ.ಸಿ. ಪಾತ್ರ ಅವರು ಪರಿವೀಕ್ಷಣೆ ನಡೆಸಿದರು.

ಎರಡು ದಿನಗಳ ಬೇಟಿಗಾಗಿ ಜನವರಿ 2 ರಂದು ರಾಜ್ಯಕ್ಕೆ ಆಗಮಿಸಿರುವ ಅವರು ಮೊದಲ ದಿನ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಎರಡನೇ ದಿನ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಅವರ ಸಂಬಂಧಿಸಿದ ಅಧಿಕಾರಿಗಳ ತಂಡಗಳ ಜೊತೆ ವರ್ಚ್ಯುಯಲ್ ಮೂಲಕ ಸಭೆ ನಡೆಸಿ ಸಂಪೂರ್ಣ ಮಾಹಿತಿ ಪಡೆದರು.

ಸಭೆಯಲ್ಲಿ ಇದೇ ತಿಂಗಳು ಪ್ರಕಟವಾಗಲಿರುವ ಪರಿಷ್ಕೃತ ಅಂತಿಮ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಚರ್ಚಿಲಾಯಿತು. ಅದರಲ್ಲೂ ಮುಖ್ಯವಾಗಿ ಅಂತಿಮ ಮತದಾರರ ಪಟ್ಟಿ ತಯಾರಿಕೆಯಲ್ಲಿ ಮೃತ ಪಟ್ಟವರ ಹೆಸರುಗಳನ್ನು ತೆಗೆದು ಹಾಕುವುದು, ವಿಳಾಸ ಬದಲಾದವರ ಹೆಸರುಗಳ ವರ್ಗಾವಣೆ ಮತ್ತು ಹೊಸ ಯುವ ಮತದಾರರ ಹೆಸರುಗಳ ಸೇರ್ಪಡೆ ಕುರಿತಂತೆ ಅನುಸರಿಸಬೇಕಾದ ವಿಧಾನಗಳ ಕುರಿತು ಹೆಚ್ಚು ಒತ್ತು ನೀಡುವಂತೆ ಹಾಗೂ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಪಾಲಿಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ಅಂತಿಮ ಮತದಾರರ ಪಟ್ಟಿಯಲ್ಲಿ ಮುಖ್ಯವಾಗಿ ಸಾರ್ವಜನಿಕರ ಮಾಹಿತಿ ಸರಿಯಾಗಿರಬೇಕು ಜೊತೆಗೆ ಯಾವುದೇ ಕಾರಣದಿಂದ ಇರುವವರ ಹೆಸರುಗಳನ್ನು ಕೈ ಬಿಡದಂತೆ ಜಾಗೃತಿ ವಹಿಸಬೇಕು, ಜಿಲ್ಲಾ ಚುನಾವಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಜಿಲ್ಲೆಗಳಲ್ಲಿ ಖುದ್ದು ಭೇಟಿ ನೀಡಿ ಪರಿಶೀಲಿಸಬೇಕು. ಅಧಿಕಾರಿಗಳು ಸಂಗ್ರಹಿಸಿರುವ ಮಾಹಿತಿ ಬಗ್ಗೆ ನಿಗಾ ವಹಿಸಬೇಕು ಎಂದು ಹೇಳಿದರು.

ಅಂತಿಮ ಮತದಾರರ ಪಟ್ಟಿಯ ತಯಾರಿಯಲ್ಲಿ ತಮ್ಮ ಜಿಲ್ಲಾ ವ್ಯಾಪ್ತಿಗಳ ವಿಧಾನಸಭಾ ಕ್ಷೇತ್ರಗಳಲ್ಲಿ ಅತ್ಯಂತ ಕಡಿಮೆ ಸೇರ್ಪಡೆಗೊಂಡಿರುವ (Addition) ಮತ್ತು ತೆಗೆದುಹಾಕಿರುವ (Deletion) 10 ಮತಕೇಂದ್ರಗಳನ್ನು ಗುರುತಿಸಿ ಅವುಗಳಿಗೆ ಸಕಾರಾಣಗಳನ್ನು ಗುರುತಿಸಿ ಸರಿಮಾಡುವಂತೆ ಸೂಚಿಸಿದರು. ಕಳೆದ ಸಾರ್ವತ್ರಿಕ ಚುನಾವಣಾ ಸಂದರ್ಭದಲ್ಲಿ ಅತ್ಯಂತ ಕಡಿಮೆ ಮತದಾನವಾಗಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಬಾರಿ ಶೇಕಡಾವಾರು ಮತದಾನವನ್ನು ಹೆಚ್ಚಿಸಲು ಸೂಕ್ತ ಕ್ರಮಕೈಗೊಳ್ಳುವುದು ಹಾಗೂ ಮತದಾರರ ಜಾಗೃತಿಗಾಗಿ ಹೆಚ್ಚಿನ ಸ್ವೀಪ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಲಹೆ ನೀಡಿದರು.

ಇದಲ್ಲದೇ, ಚುನಾವಣಾ ಕಾರ್ಯಕ್ಕಾಗಿ ಅವಶ್ಯವಿರುವ ಮಾನವ ಸಂಪನ್ಮೂಲ ಕುರಿತು ಸಹ ಚರ್ಚಿಸಿದ ಅವರು, ತಮಗೆ ಅವಶ್ಯವಿರುವ ಸ್ಥಾನಗಳ ಕುರಿತು ಕೂಡಲೇ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ಗಮನಕ್ಕೆ ತರಲು ಸೂಚಿಸಿದರು. ಈ ಎರಡು ದಿನಗಳ ಬೇಟಿಯಲ್ಲಿ ಮೊದಲ ದಿನ ರಾಜ್ಯ ಮಟ್ಟದ ಹಾಗೂ ಎರಡನೇ ದಿನ ಜಿಲ್ಲಾಮಟ್ಟದ ಸಭೆ ನಡೆಸಿದ ನಂತರ ಅವರು ಪೂರ್ವ ತಯಾರಿ ಕಾರ್ಯಗಳ ಕುರಿತು ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತೃಪ್ತಿ ವ್ಯಕ್ತಪಡಿಸಿದ ಅವರು ಉತ್ತಮವಾದ ಚುನಾವಣೆಗಾಗಿ ಎಲ್ಲರೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಕರೆ ನೀಡಿದರು.

ಈ ಎರಡು ದಿನಗಳ ಸಭೆಯಲ್ಲಿ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ, ಅಪರ ಮುಖ್ಯ ಚುನಾವಣಾಧಿಕಾರಿಗಳಾದ ವೆಂಕಟೇಶ್ ಕುಮಾರ್, ಪಿ. ರಾಜೇಂದ್ರ ಚೋಳನ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com