ದೇಶ, ಹಿಂದು ಧರ್ಮ ಉಳಿಯಬೇಕೆಂದರೆ ಬಿಜೆಪಿ ಆಗತ್ಯವಿದೆ: ಪ್ರಮೋದ್ ಮುತಾಲಿಕ್‌

ದೇಶ, ಹಿಂದು ಧರ್ಮ ಉಳಿಯಬೇಕೆಂದರೆ ಬಿಜೆಪಿಯ ಅಗತ್ಯವಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಭಾನುವಾರ ಹೇಳಿದ್ದಾರೆ.
ಪ್ರಮೋದ್ ಮುತಾಲಿಕ್
ಪ್ರಮೋದ್ ಮುತಾಲಿಕ್
Updated on

ಬೆಳಗಾವಿ: ದೇಶ, ಹಿಂದು ಧರ್ಮ ಉಳಿಯಬೇಕೆಂದರೆ ಬಿಜೆಪಿಯ ಅಗತ್ಯವಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಭಾನುವಾರ ಹೇಳಿದ್ದಾರೆ.

ಬೆಳಗಾವಿಯ ಧರ್ಮವೀರ ಸಂಭಾಜಿ ಮೈದಾನದಲ್ಲಿ ಶ್ರೀರಾಮ ಸೇನೆ ಮತ್ತು ಹಿಂದು ರಾಷ್ಟ್ರ ಸೇನಾ ಸಂಯುಕ್ತಾಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ವಿರಾಟ್ ಹಿಂದು ಸಮಾವೇಶದಲ್ಲಿ ಮುತಾಲಿಕ್ ಅವರು ಮಾತನಾಡಿದರು.

ದೇಶ, ಹಿಂದು ಧರ್ಮ ಉಳಿಯಬೇಕೆಂದರೆ ಬಿಜೆಪಿಯ ಅಗತ್ಯವಿದೆ. ಒಂದು ಪಕ್ಷಕ್ಕಾಗಿ ಅಲ್ಲ, ರಾಮ ಮಂದಿರ, ಶ್ರೀಕೃಷ್ಣ ಮಂದಿರ ಪೂರ್ಣವಾಗಲು ಹಾಗೂ ಹಿಂದು ಧರ್ಮಕ್ಕೋಸ್ಕರ ಬಿಜೆಪಿ ಬೇಕು ಎಂದು ಹೇಳಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಿಂದು ಹೆಣ್ಣುಮಕ್ಕಳನ್ನು ಹರಾಜು ಹಾಕುತ್ತಾರೆ. ಮತಾಂತರ ನಿಷೇಧ ಕಾಯ್ದೆ ರದ್ದು ಮಾಡುತ್ತಾರೆ. ಹಿಂದು ವಿರೋಧಿ ವಿಚಾರಧಾರೆ ನೆಹರು ಅವರಿಂದ ಪ್ರಾರಂಭವಾಗಿ, ರಾಹುಲ್ ಗಾಂಧಿವರೆಗೆ ಬಂದಿದೆ. ಹೀಗಾಗಿ ಪ್ರಧಾನಿ ಮೋದಿಯವರನ್ನು ನಾವು ಬೆಂಬಲಿಸಬೇಕಾಗಿದೆ. ಕರ್ನಾಟಕದಲ್ಲಿ ಬೇರೆ ಬೇರೆ ಗೊಂದಲಗಳು ಇವೆ. ಆದರೆ, ಗೋಹತ್ಯೆ ಸಂಪೂರ್ಣ ನಿಷೇಧವಾಗಲು, ರಾಮ, ಕೃಷ್ಣ ಮಂದಿರ ನಿರ್ಮಾಣವಾಗಲು ಮೋದಿ ಬೇಕು, ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಹೇಳಿದರು.

ಈ ದೇಶ ಹಾಳು ಮಾಡಿ ಭಯೋತ್ಪಾದನೆ, ಭ್ರಷ್ಟಾಚಾರಕ್ಕೆ ಸಹಕರಿಸಿದ್ದು ಕಾಂಗ್ರೆಸ್. ಮುಸ್ಲಿಮರಿಗೋಸ್ಕರ ಜೊಲ್ಲು ಸುರಿಸುವವರು ಕಾಂಗ್ರೆಸ್‌ನಲ್ಲಿದ್ದಾರೆ. ಬಾಬ್ರಿ ಮಸೀದಿ ಮಾದರಿಯಲ್ಲಿ ಕಾಂಗ್ರೆಸ್ ಅನ್ನು ಸಮಾಧಿ ಮಾಡಬೇಕಿದೆ. ಅದಕ್ಕೆ ಹಿಂದು ಸಮಾಜ ಒಗ್ಗಟ್ಟಾಗಬೇಕಿದೆ. ಗೋಹತ್ಯೆ ನಿಷೇಧ ಮಾಡಿದ್ದು ರಾಜ್ಯ ಬಿಜೆಪಿ. ಮತಾಂತರ ನಿಷೇಧ ಕಾಯ್ದೆ ತಂದಿದ್ದು ಬಿಜೆಪಿ, ಕರ್ನಾಟಕ ಬಿಜೆಪಿಯವರು ಸ್ವಲ್ಪ ಗೊಂದಲ ಮಾಡುತ್ತಿದ್ದಾರೆ. ಎಲ್ಲೋ ದಾರಿ ತಪ್ಪಿದವರನ್ನು‌ ನಾವು ಸರಿ ಮಾಡೋಣ ಎಂದು ತಿಳಿಸಿದರು.

ಆರ್‌ಎಸ್ಎಸ್ ವಿಚಾರಧಾರೆ ಇವತ್ತು ನಮ್ಮನ್ನು ಇಲ್ಲಿವರೆಗೆ ತಂದಿದೆ. ಆದರೆ, ನಮ್ಮ ಶ್ರೇಷ್ಠ ಸಂಸ್ಕೃತಿ, ಧರ್ಮ, ಸಂಪ್ರದಾಯ ನಷ್ಟ ಮಾಡಲು ಮೂರು ದುಷ್ಟಶಕ್ತಿಗಳು ಯತ್ನಿಸುತ್ತಿವೆ. ಒಂದು ಇಸ್ಲಾಂ, ಎರಡನೇಯದು ಕ್ರಿಶ್ಚಿಯನ್ನರು, ಮೂರನೇಯದು ಕಮ್ಯುನಿಸ್ಟರು. ಹಿಂದುಗಳನ್ನು ವಿರೋಧ ಮಾಡುವ ನಾಸ್ತಿಕರು, ಬುದ್ಧಿಜೀವಿಗಳು ದೇಶದ ಸಾಕಷ್ಟು ಭೂಭಾಗ ನುಂಗಿ ನೀರು ಕುಡಿದಿದ್ದಾರೆ. ಇವರಿಂದ ದೇಶ ಉಳಿಸಬೇಕಾಗಿದೆ. ಇಲ್ಲಿ ಯಾವುದೇ ಜಾತಿ, ಮತ, ಪಕ್ಷ ಇಲ್ಲ. ನಾವೆಲ್ಲ ಒಂದಾಗಿ ಹಿಂದು ರಾಷ್ಟ್ರ ನಿರ್ಮಾಣ ಮಾಡಬೇಕಿದೆ, ಅದಕ್ಕಾಗಿಯೇ ಈ ವಿರಾಟ್‌ ಹಿಂದು ಸಮಾವೇಶ ಎಂದರು.

ಮಸೀದಿ ನಿರ್ಮಾಣಕ್ಕೆ ಮುತಾಲಿಕ್ ವಿರೋಧ
ಬೆಳಗಾವಿಯ ಸಾರಥಿ ನಗರದಲ್ಲಿ ಮಸೀದಿ ನಿರ್ಮಾಣದ ಬಗ್ಗೆ ಪ್ರತಿಕ್ರಿಯಿಸಿ, ಸಾರಥಿ ನಗರದಲ್ಲಿ ಮನೆಯಲ್ಲಿ ಅನಧಿಕೃತವಾಗಿ ಮಸೀದಿ ಮಾಡಿದ್ದಾರೆ. ಆದರೆ, ಪಾಲಿಕೆ ಕಮಿಷನರ್ ಕಾಂಗ್ರೆಸ್‌ ಬಾಲ ಬಡಿಯುತ್ತಿದ್ದಾರೆ. ಒಂದು ವಾರದಲ್ಲಿ ಮಸೀದಿ ನೆಲಸಮ ಮಾಡದಿದ್ದರೆ ನಾವೇ ಕೆಡವುತ್ತೇವೆ. ಕೆಡವುದಿದ್ದರೆ ಕೆಡವು, ಇಲ್ಲವಾದರೆ ದೀರ್ಘ ರಜೆ ತೆಗೆದುಕೊಂಡು ಹೋಗು ಎಂದ ಅವರು, ಎಂಎಲ್‌ಎಗಳೇ ನಿಮಗೆ ಸಾಧ್ಯವಿಲ್ಲವೆಂದರೆ ಹೇಳಿ ನಾನು ಬರುತ್ತೇನೆ ಎಂದು ಹೇಳಿದರು.

ಹಿಂದು ಸಂಘಟನೆಗಳನ್ನು ಬಲಗೊಳಿಸಿ
ಇಂದು ನಾವು ಜಾಗೃತರಾಗಬೇಕಿದೆ. ಅದು ಆರ್‌ಎಸ್ಎಸ್, ಬಜರಂಗದಳ, ಶ್ರೀರಾಮಸೇನೆ ಇರಬಹುದು. ಯಾವುದೇ ಹಿಂದು ಸಂಘಟನೆ ಇದ್ದರೂ ತನು ಮನ ಧನದಿಂದ ಬಲಗೊಳಿಸಬೇಕು. ದೇವಸ್ಥಾನ, ಮಠಾಧಿಪತಿಗಳಿಗೆ ದುಡ್ಡು ಹಾಕೋದು ನಿಲ್ಲಿಸಿ ಹಿಂದುಪರ ಕಾರ್ಯಕರ್ತರಿಗೆ ಸಹಾಯ ಮಾಡಬೇಕು. ದೇಶಿ ವಸ್ತು ಬಹಿಷ್ಕರಿಸಿ ಸ್ವದೇಶಿ ವಸ್ತು ಖರೀದಿಸಿ ಎಂದು ಕರೆ ನೀಡಿದರು.

ಛತ್ರಪತಿ ಶಿವಾಜಿ ಮಹಾರಾಜ್ ಕೀ ಜೈ, ಸಂಗೊಳ್ಳಿ ರಾಯಣ್ಣ ಕೀ ಜೈ ಎನ್ನಬೇಕು, ಶಸ್ತ್ರಪೂಜೆ ಆಗಬೇಕು ಮನೆಯಲ್ಲಿ ಶಸ್ತ್ರ ಇಡಬೇಕು. ದೇಶದ ಉಳಿವಿಗಾಗಿ, ನಮ್ಮ ಹೆಣ್ಣು ಮಕ್ಕಳು, ತಂದೆ-ತಾಯಿ ಉಳಿಯಲು ಶಸ್ತ್ರ ಪೂಜೆ ಆಗಬೇಕು. ಆಯುಧ ಪೂಜೆ ಎಂದರೆ ವಾಹನಗಳ ಪೂಜೆ ಅಲ್ಲ. ತಲವಾರು, ಮಚ್ಚು, ಚಾಕು, ಕುಡಗೋಲನ್ನು ಇಟ್ಟು ಪೂಜೆ ಮಾಡಿ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com