'ಸಿದ್ದು ನಿಜ ಕನಸುಗಳು' ಪುಸ್ತಕ ಬಿಡುಗಡೆ: ಪುರಭವನದಲ್ಲಿ ಭಾರೀ ಹೈಡ್ರಾಮಾ

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕುರಿತಾದ 'ಸಿದ್ದು ನಿಜ ಕನಸುಗಳು' ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆದ ಪುರಭವನದಲ್ಲಿ ಸೋಮವಾರ ಹೈಡ್ರಾಮಾವೇ ನಡೆಯಿತು.
ಸೋಮವಾರ ಬೆಂಗಳೂರಿನ ಟೌನ್ ಹಾಲ್‌ನಲ್ಲಿ ಸಿದ್ದರಾಮಯ್ಯ ಕುರಿತ ಬಿಜೆಪಿ ಪುಸ್ತಕ ಬಿಡುಗಡೆ ವಿರೋಧಿಸಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತನನ್ನು ಪೊಲೀಸರು ಬಂಧನಕ್ಕೊಳಪಡಿಸಿದರು.
ಸೋಮವಾರ ಬೆಂಗಳೂರಿನ ಟೌನ್ ಹಾಲ್‌ನಲ್ಲಿ ಸಿದ್ದರಾಮಯ್ಯ ಕುರಿತ ಬಿಜೆಪಿ ಪುಸ್ತಕ ಬಿಡುಗಡೆ ವಿರೋಧಿಸಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತನನ್ನು ಪೊಲೀಸರು ಬಂಧನಕ್ಕೊಳಪಡಿಸಿದರು.
Updated on

ಬೆಂಗಳೂರು: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕುರಿತಾದ 'ಸಿದ್ದು ನಿಜ ಕನಸುಗಳು' ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆದ ಪುರಭವನದಲ್ಲಿ ಸೋಮವಾರ ಹೈಡ್ರಾಮಾವೇ ನಡೆಯಿತು.

ಪುಸ್ತಕ ಬಿಡುಗಡೆ ವಿಚಾರ ಚರ್ಚೆ ಆಗುತ್ತಿದ್ದಂತೆ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರು, ನ್ಯಾಯಾಲಯದ ಮೊರೆ ಹೋಗಿ ಪುಸ್ತಕ ಬಿಡುಗಡೆಗೆ ತಡೆ ನೀಡುವಂತೆ ಮನವಿ ಮಾಡಿದ್ದರು.

ಈ ಮನವಿಯನ್ನು ಪುರಸ್ಕರಿಸಿದ ನಗರದ ಸಿಟಿ ಸಿವಿಲ್‌ ಕೋರ್ಟ್‌ ಪುಸ್ತಕ ಬಿಡುಗಡೆಗೆ ತಡೆ ನೀಡಿತು. ಪುಸ್ತಕ ಬಿಡುಗಡೆ, ಮಾರಾಟ ಅಲ್ಲದೇ ಮಾಧ್ಯಮ ಪ್ರಸಾರಕ್ಕೆ ಕೋರ್ಟ್‌ ತಡೆಯಾಜ್ಞೆ ನೀಡಿ ಮುಂದಿನ ವಿಚಾರಣೆಯನ್ನು ಫೆ.9ಕ್ಕೆ ಮುಂದೂಡಿತು.

ನ್ಯಾಯಾಲಯ ತಡೆ ನೀಡಿದ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಆಯೋಜಿಸಬೇಕಾ? ಬೇಡವೇ ಎಂಬುದರ ಬಗ್ಗೆ ಆಯೋಜಕರ ನಡುವೆ ಗೊಂದಲ ಎದುರಾಗಿತ್ತು.

ಈ ನಡುವೆ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಿದ್ದ ಪುರಭವನದ ಎದುರು ಭಾರೀ ಸಂಖ್ಯೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು, ಸಿದ್ದರಾಮಯ್ಯ ಅಭಿಮಾನಿಗಳು ಸೇರಿ, ಪ್ರತಿಭಟನೆ ಆರಂಭಿಸಿದರು. ಕೆಲವರು ಪುರಭವನದ ಒಳಗಡೆ ನುಗ್ಗಿದ್ದರು. ಹೀಗಾಗಿ ಒಳಗಡೆ ಭಾರೀ ಹೈಡ್ರಾಮಾವೇ ನಡೆಯಿತು. ಪ್ರತಿಭಟನಾನಿರತರಾಗಿದ್ದ ಕೆಲ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.

ನಂತರ ಆಯೋಜಕರು ಇಂದಿನ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ರದ್ದು ಮಾಡುತ್ತೇವೆ ಎಂದು ವೇದಿಕೆ ಮೇಲೆ ಪ್ರಕಟಿಸಿದರು.

ಕಾರ್ಯಕ್ರಮಕ್ಕೆ ಸಚಿವ ಅಶ್ವತ್ಥ್ ನಾರಾಯಣ್ ಅವರು ಆಗಮಿಸಬೇಕಿತ್ತು. ಆದರೆ, ಕಾರಣಾಂತರಗಳಿಂದ ಅವರು ಆಗಮಿಸಿರಲಿಲ್ಲ. ಆದರೆ, ಆದರೆ ಮುಖ್ಯ ಅತಿಥಿಯಾಗಿ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಚಲವಾದಿ ನಾರಾಯಣಸ್ವಾಮಿ, ಲೇಖಕರಾದ ರೋಹಿತ್ ಚಕ್ರತೀರ್ಥ, ಸಂತೋಷ್ ತಮ್ಮಯ್ಯ, ವೃಶಾಂಕ್ ಭಟ್ ಮತ್ತು ರಾಕೇಶ್ ಶೆಟ್ಟಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಈ ನಡುವೆ ಪುಸ್ತಕವನ್ನು ಸಮರ್ಥಿಸಿಕೊಂಡ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಅವರು, ಬಿಜೆಪಿಯವರು ಧರ್ಮ ಮತ್ತು ಜಾತಿಗಳ ಆಧಾರದ ಮೇಲೆ ಜನರನ್ನು ಒಡೆಯಲು ಯತ್ನ ನಡೆಸುತ್ತಿದ್ದಾರೆಂದು ಸಿದ್ದರಾಮಯ್ಯ ಅವರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹಿಂದೂ ಮತ್ತು ಹಿಂದುತ್ವ ಒಂದೇ ಎಂಬುದನ್ನು ಅವರು ಅರಿತುಕೊಳ್ಳಬೇಕು ಎಂದು ಹೇಳಿದರು.

ಈ ನಡುವೆ ತಮ್ಮ ಕುರಿತಾದ ಪುಸ್ತಕ ಕುರಿತು ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ಅವರು, ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ನನ್ನ ತೇಜೋವಧೆ ಮಾಡುವ ಉದ್ದೇಶದಿಂದ ಬಿಜೆಪಿ 'ಸಿದ್ದು ನಿಜಕನಸುಗಳು' ಎಂಬ ಪುಸ್ತಕ ಬರೆದಿದ್ದು, ಇದು ಸಂಪೂರ್ಣ ಮಾನಹಾನಿಕರವಾಗಿದೆ. ಈ ಪುಸ್ತಕದ ವಿರುದ್ಧ ಕಾನೂನು ಕ್ರಮಕ್ಕೆ ಚಿಂತನೆ ನಡೆಸುತ್ತಿದ್ದೇನೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com