ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ಅನುಮತಿ ನೀಡದ ಸರ್ಕಾರ: ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಹೈಕೋರ್ಟ್‌ ಚಾಟಿ

ಗಣಿ ಉದ್ಯಮಿ ಮತ್ತು ರಾಜಕಾರಣಿ ಗಾಲಿ ಜನಾರ್ದನ ರೆಡ್ಡಿ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಅನುಮತಿ ನೀಡದ ಬಿಜೆಪಿ ಸರ್ಕಾರವನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ತರಾಟೆಗೆ ತೆಗೆದುಕೊಂಡಿದೆ.
ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್
Updated on

ಬೆಂಗಳೂರು: ಗಣಿ ಉದ್ಯಮಿ ಮತ್ತು ರಾಜಕಾರಣಿ ಗಾಲಿ ಜನಾರ್ದನ ರೆಡ್ಡಿ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಅನುಮತಿ ನೀಡದ ಬಿಜೆಪಿ ಸರ್ಕಾರವನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ತರಾಟೆಗೆ ತೆಗೆದುಕೊಂಡಿದೆ.

ಐದು ವರ್ಷಗಳಿಂದ ಒಪ್ಪಿಗೆ ನೀಡುವ ಬಗ್ಗೆ ಏಕೆ ನಿರ್ಧಾರ ಕೈಗೊಂಡಿಲ್ಲ ಎಂದು ಪೀಠ ಸರ್ಕಾರವನ್ನು ಪ್ರಶ್ನಿಸಿದೆ. 'ಸರ್ಕಾರದ ಪ್ರಕಾರ, ಯಾವುದೇ ಕ್ರಮ ಕೈಗೊಳ್ಳದಿರುವುದು ಕೂಡ 'ಕ್ರಿಯೆ' ಆಗಿರಬಹುದು. ಆದರೆ, ಇದು ನ್ಯಾಯಾಲಯಕ್ಕೆ ಸ್ವೀಕಾರಾರ್ಹವಲ್ಲ' ಎಂದು ಪೀಠ ಹೇಳಿದೆ.

ಈ ಬಗ್ಗೆ ಸ್ಪಷ್ಟನೆ ನೀಡುವಂತೆಯೂ ನ್ಯಾಯಾಲಯ ಸರ್ಕಾರಕ್ಕೆ ಸೂಚಿಸಿತ್ತು. ಅಕ್ರಮವಾಗಿ ಆಸ್ತಿಗಳನ್ನು ಸಂಗ್ರಹಿಸಲಾಗಿದೆ ಎಂದು ಆರೋಪಿಸಿದ್ದ ಕೇಂದ್ರೀಯ ತನಿಖಾ ದಳ (ಸಿಬಿಐ) 2022ರ ಆಗಸ್ಟ್ 30 ರಂದು ಜನಾರ್ದನ ರೆಡ್ಡಿ ಅವರ ಆಸ್ತಿಯನ್ನು ಜಪ್ತಿ ಮಾಡಿಕೊಳ್ಳಲು ಸರ್ಕಾರದ ಒಪ್ಪಿಗೆಯನ್ನು ಕೋರಿತ್ತು.

ಆದರೆ, ಸರ್ಕಾರ ಇದುವರೆಗೂ ಒಪ್ಪಿಗೆ ನೀಡಿಲ್ಲ. ಈ ಬೆಳವಣಿಗೆಯ ಬೆನ್ನಲ್ಲೇ ಸಿಬಿಐ ಈ ಸಂಬಂಧ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿತ್ತು.

ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ 219 ಹೊಸ ಆಸ್ತಿಗಳನ್ನು ಪತ್ತೆ ಮಾಡಿದ್ದು, ಅಕ್ರಮ ಆದಾಯದ ಮೂಲಗಳ ಮೂಲಕ ಈ ಆಸ್ತಿಗಳನ್ನು ಖರೀದಿಸಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಸಿಬಿಐ ಹೇಳಿದೆ.

ಅಲ್ಲದೆ, ಇದಾದ ಬಳಿಕ ಜನಾರ್ದನ ರೆಡ್ಡಿ ಅವರು ಕರ್ನೂಲ್ ಮತ್ತು ರಂಗಾರೆಡ್ಡಿ ಜಿಲ್ಲೆಗಳಲ್ಲಿನ ತಮ್ಮ ಆಸ್ತಿಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಜನಾರ್ದನ ರೆಡ್ಡಿ ಅವರು ಇತ್ತೀಚೆಗೆ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ಹೊಸ ರಾಜಕೀಯ ಪಕ್ಷವನ್ನು ಘೋಷಿಸಿದ್ದು, ಪ್ರಚಾರವನ್ನೂ ಪ್ರಾರಂಭಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com