2023 ವಿಶೇಷ ಪರಿಷ್ಕರಣೆ: ಬಾಕಿ ಉಳಿದಿದ್ದ 3 ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿ ಬಿಡುಗಡೆ, 9.80 ಲಕ್ಷ ಜನ ಸೇರ್ಪಡೆ

ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಬೆಂಗಳೂರಿನ ಮೂರು ವಿಧಾನಸಭಾ ಕ್ಷೇತ್ರಗಳಾದ ಶಿವಾಜಿನಗರ, ಮಹದೇವಪುರ ಮತ್ತು ಚಿಕ್ಕಪೇಟೆಯ ಅಂತಿಮ ಮತದಾರರ ಪಟ್ಟಿ ಬಿಡುಗಡೆ ಮಾಡಲಾಗಿತ್ತು, ಒಟ್ಟು 9.80 ಲಕ್ಷ ಮತದಾರರಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಬೆಂಗಳೂರಿನ ಮೂರು ವಿಧಾನಸಭಾ ಕ್ಷೇತ್ರಗಳಾದ ಶಿವಾಜಿನಗರ, ಮಹದೇವಪುರ ಮತ್ತು ಚಿಕ್ಕಪೇಟೆಯ ಅಂತಿಮ ಮತದಾರರ ಪಟ್ಟಿ ಬಿಡುಗಡೆ ಮಾಡಲಾಗಿತ್ತು, ಒಟ್ಟು 9.80 ಲಕ್ಷ ಮತದಾರರಿದ್ದಾರೆ. ಇದರೊಂದಿಗೆ ನಗರ ಜಿಲ್ಲೆ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು ಮತದಾರರ ಸಂಖ್ಯೆ 92.09 ಲಕ್ಷ ತಲುಪಿದೆ.

ಕಳೆದ ಜ.5ರಂದು 25 ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿ ಬಿಡುಗಡೆ ಮಾಡಲಾಗಿತ್ತು. ಚಿಲುಮೆ ಎನ್‌ಜಿಒ ಹಗರಣದಿಂದಾಗಿ ಈ ಕ್ಷೇತ್ರಗಳ ಮತದಾರರ ಅಂತಿಮ ಪಟ್ಟಿ ವಿಳಂಬವಾಗಿತ್ತು. ಇದರಂತೆ ಭಾನುವಾರ ಬಾಕಿ ಉಳಿದ ಮೂರು ಕ್ಷೇತ್ರದ ಅಂತಿಮ ಮತದಾರರ ಪಟ್ಟಿ ಬಿಡುಗಡೆ ಮಾಡಲಾಗಿದೆ.

ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಭಾನುವಾರ ಪಟ್ಟಿ ಬಿಡುಗಡೆ ಮಾಡಿದರು. ಪಟ್ಟಿಯ ಪ್ರಕಾರ, 9,80542 ಮತದಾರರಿದ್ದು, ಅವರಲ್ಲಿ 5,15,983 ಪುರುಷರು, 4,64,415 ಮಹಿಳೆಯರು ಮತ್ತು 144 ತೃತೀಯಲಿಂಗಿಗೆ ಸೇರಿದವರಾಗಿದ್ದಾರೆ.

ಅಂತಿಮ ಪಟ್ಟಿಯಲ್ಲಿ ಶಿವಾಜಿನಗರ ಕ್ಷೇತ್ರದಲ್ಲಿ 1,94,937, ಚಿಕ್ಕಪೇಟೆಯಲ್ಲಿ 2,13,066, ಮಹದೇವಪುರದಲ್ಲಿ 5,72,539 ಮತದಾರರಿದ್ದಾರೆಂದು ತಿಳಿದುಬಂದಿದೆ.

ನ.11ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಿದ ಬಳಿಕ ಆಕ್ಷೇಪಣೆ ಸಲ್ಲಿಸಲು ಡಿ.12ರವರೆಗೆ ಕಾಲಾವಕಾಶ ನೀಡಲಾಗಿದ್ದು, ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಈ ಮೂರು ಕ್ಷೇತ್ರಗಳಲ್ಲಿ ವಿಶೇಷ ಅಭಿಯಾನ ನಡೆಸಲಾಗಿತ್ತು.

ಆಕ್ಷೇಪಣೆಗಳನ್ನು ಜನವರಿ 6ರಂದು ಇತ್ಯರ್ಥಪಡಿಸಲಾಗಿದ್ದು, ಜನವರಿ 15ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ತುಷಾರ್ ಗಿರಿನಾಥ್ ಅವರು ಹೇಳಿದ್ದಾರೆ.

ಮತದಾರರ ಪಟ್ಟಿಯ ನಿರಂತರ ಪರಿಷ್ಕರಣೆ, ಸೇರ್ಪಡೆ ತಿದ್ದುಪಡಿ, ವರ್ಗಾವಣೆ ಮತ್ತು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಪ್ರಕ್ರಿಯೆ ಮುಂದುವರಿಯುತ್ತದೆ. ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಬಯಸುವವರು www.ceokarnataka.kar.nic.in ಗೆ ಭೇಟಿ ನೀಡಬಹುದಾಗಿದೆ ಎಂದು ತಿಳಿಸಿದ್ದಾರೆ.

ಏತನ್ಮಧ್ಯೆ, ಬಿಬಿಎಂಪಿ ವ್ಯಾಪ್ತಿಯ ವಿಧಾನಸಭಾ ಚುನಾವಣೆಗೆ ಸಿದ್ಧತೆಗಳು ಮುಂದುವರೆದಿದ್ದು, ಈ ನಿಟ್ಟಿನಲ್ಲಿ ಸಹಾಯಕ ಮತಗಟ್ಟೆ ನೋಂದಣಾಧಿಕಾರಿಗಳು ಬಿಬಿಎಂಪಿ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳ ಎಲ್ಲಾ ಮತಗಟ್ಟೆಗಳ ಪರಿಶೀಲನೆಯನ್ನು ಜನವರಿ 16, 2023 ರಿಂದ ಪ್ರಾರಂಭಿಸಲಿದ್ದಾರೆಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com