ಶಾಲಾ ಭೂ ವಿವಾದ: ತರಗತಿಗಳಲ್ಲಿ ಕೂರಲು ಸಾಧ್ಯವಾಗದೆ ಬಯಲಿನಲ್ಲಿ ಕುಳಿತು ಮಕ್ಕಳ ವಿದ್ಯಾಭ್ಯಾಸ!

ತಮ್ಮದಲ್ಲದ ತಪ್ಪಿಗೆ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಮಹದೇವಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸೋಮವಾರ ಸಂಕಷ್ಟ ಎದುರಿಸಿದರು.
ಮೈದಾನದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಹದೇವಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು.
ಮೈದಾನದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಹದೇವಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು.
Updated on

ಬೆಂಗಳೂರು: ತಮ್ಮದಲ್ಲದ ತಪ್ಪಿಗೆ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಮಹದೇವಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸೋಮವಾರ ಸಂಕಷ್ಟ ಎದುರಿಸಿದರು.
    
ಶಾಲೆ ಇರುವ ಜಮೀನು ವ್ಯಾಜ್ಯದಲ್ಲಿದ್ದು, ಇದರ ಪರಿಣಾಮ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳು ಬಯಲಿನಲ್ಲಿ ಕುಳಿತುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

ಕೆಲ ವ್ಯಕ್ತಿಗಳು ಇದ್ದಕ್ಕಿದ್ದಂತೆ ಶಾಲಾ ಆವರಣಕ್ಕೆ ನುಗ್ಗಿದ್ದು, ಭಾನುವಾರ ಶಾಲೆ ಮುಚ್ಚಿದ್ದರೂ ಕೂಡ ಶಾಲೆಗೆ ಬಂದು ಕೊಠಡಿಗಳಿಗೆ ಬೀಗ ಹಾಕಿ ಹೋಗಿದ್ದರು. ಬೆಂಗಳೂರಿನ ಐಟಿಪಿಎಲ್‌ ಬಳಿ ಇರುವ ಶಾಲೆಗೆ ಕೆಲ ವ್ಯಕ್ತಿಗಳು ಬೀಗ ಜಡಿದಿದ್ದಾರೆ. ಸೋಮವಾರ ಶಾಲೆಗೆ ಮತ್ತೆ ಬಂದು ಶಿಕ್ಷಕರಿಗೆ ಶಾಲೆಗೆ ಬರದಂತೆ ಬೆದರಿಕೆ ಹಾಕಿದ್ದಾರೆ.

ಇದರ ಪರಿಣಾಮ ಮಕ್ಕಳು ಸೋಮವಾರ ತರಗತಿಯ ಹೊರಗೆ ತೆರೆದ ಮೈದಾನದಲ್ಲಿ ಕುಳಿತುಕೊಂಡಿದ್ದದ್ದು ಕಂಡು ಬಂದಿತ್ತು. ಈ ವೇಳೆ ಬಿಇಒ ಪೊಲೀಸರಿಗೆ ದೂರು ನೀಡಿದ್ದು, ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ವಿದ್ಯಾರ್ಥಿಗಳು ತರಗತಿಗಳ ಒಳಗೆ ಕುಳಿತುಕೊಳ್ಳಲು ಅನುಮತಿ ನೀಡಿದರು.

ವೈಟ್‌ಫೀಲ್ಡ್ ಮುಖ್ಯರಸ್ತೆಯ ಫೀನಿಕ್ಸ್ ಮಾಲ್‌ಗೆ ಸಮೀಪವಿರುವ ಜಮೀನು 89 X 74 ಅಡಿ ವಿಸ್ತೀರ್ಣ ಹೊಂದಿದ್ದು, ಇದರ ಮೌಲ್ಯ ಸುಮಾರು 15 ಕೋಟಿ ಎಂದು ಹೇಳಲಾಗುತ್ತಿದೆ.

ಈ ಭೂಮಿಯಲ್ಲಿ ಶಾಲೆಯಿದ್ದು, ಕಟ್ಟಡದಲ್ಲಿ ಏಳು ಕೊಠಡಿಗಳು, ಶೌಚಾಲಯಗಳು ಮತ್ತು ಇತರ ಸೌಲಭ್ಯಗಳಿವೆ. ಈ ಭೂಮಿಯಲ್ಲಿ ಕನ್ನಡ ಮಾಧ್ಯಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 1964 ರಲ್ಲಿ ಪ್ರಾರಂಭಗೊಂಡಿತ್ತು. ಇಂದಿಗೂ ಕಟ್ಟಡದಲ್ಲಿ 4, 5 ಮತ್ತು 6ನೇ ತರಗತಿ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸಲಾಗುತ್ತಿದೆ.

2018 ರಲ್ಲಿ, ಹೋಪ್ ಫೌಂಡೇಶನ್ ಹೊಸ ಶಾಲಾ ಕಟ್ಟಡವನ್ನು ನಿರ್ಮಿಸಿದ್ದು, ಇಲ್ಲಿ ಇಂಗ್ಲೀಷ್ ಮಾಧ್ಯಮದ ಶಾಲೆಯನ್ನು ಆರಂಭಿಸಲಾಗಿದೆ. ಆದರೆ, ಕನ್ನಡ ಮಾಧ್ಯಮ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಹಳೆಯ ಕಟ್ಟಡದಲ್ಲಿಯೇ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಹೊಸ ಕಟ್ಟಡವಿದ್ದರೂ ಆಸ್ತಿ ಕಳೆದುಕೊಳ್ಳುವ ಭೀತಿಯಿಂದ ಮಕ್ಕಳನ್ನು ಸ್ಥಳಾಂತರಿಸಲು ಮುಂದಾಗುತ್ತಿಲ್ಲ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

ನಾವು ಸಂಪೂರ್ಣವಾಗಿ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡರೆ, ಕಳೆದ 50 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಶಾಲೆಯ ಭೂಮಿಯನ್ನು ಯಾರೋ ಸ್ವಾಧೀನಪಡಿಸಿಕೊಳ್ಳುತ್ತಾರೆಂಬ ಆತಂಕ ಶಿಕ್ಷಣ ಇಲಾಖೆಗೆ ಮೂಡಿದೆ ಎನ್ನಲಾಗಿದೆ.

60ರ ದಶಕದಲ್ಲಿ ಡಿ ಪುಟ್ಟಪ್ಪ ಎಂಬುವರು ಭೂಮಿಯನ್ನು ದಾನವಾಗಿ ನೀಡಿದ್ದರು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ನಂತರ, ಇದನ್ನು ಕೈಗಾರಿಕಾ ಇಲಾಖೆ ಸ್ವಾಧೀನಪಡಿಸಿಕೊಂಡಿತು. ಕೆಲವು ವ್ಯಕ್ತಿಗಳು ಜಮೀನು ತಮಗೆ ಸೇರಿದ್ದು ಎಂದು ಸಿವಿಲ್ ಕೋರ್ಟ್‌ಗೆ ಹೋದಾಗ ತೊಂದರೆ ಪ್ರಾರಂಭವಾಯಿತು. ಶಾಶ್ವತ ತಡೆಯಾಜ್ಞೆ ನೀಡುವಂತೆ ನ್ಯಾಯಾಲಯಕ್ಕೆ ಮನವಿಯನ್ನೂ ಸಲ್ಲಿಸಿದ್ದರು.

ಆದಾಗ್ಯೂ, ನ್ಯಾಯಾಲಯವು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಎರಡೂ ಕಡೆಗಳಿಗೆ ತಿಳಿಸಿತು ಮತ್ತು ಮುಂದಿನ ವಿಚಾರಣೆಯನ್ನು ಫೆಬ್ರವರಿ 4 ರಂದು ನಡೆಸಲು ನಿರ್ಧರಿಸಿತು. TNIE ಯೊಂದಿಗೆ ಮಾತನಾಡಿದ ಬ್ಲಾಕ್ ಶಿಕ್ಷಣಾಧಿಕಾರಿ DR ರಾಮಮೂರ್ತಿ, ನ್ಯಾಯಾಲಯವು ಯಥಾಸ್ಥಿತಿಗೆ ಆದೇಶಿಸಿರುವುದರಿಂದ, ಅವರು (ನ್ಯಾಯಾಲಯಕ್ಕೆ ಹೋದವರು) ಶಾಲೆ ನಡೆಸಲು ಅವಕಾಶ ನೀಡಬೇಕಿತ್ತು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com