
ಬೆಂಗಳೂರು: ಮೀಸಲಾತಿ ಕುರಿತ ನಮ್ಮ ಬೇಡಿಕೆ ಈಡೇರದಿದ್ದರೆ, ಸರ್ಕಾರ ವೈಫಲ್ಯಗಳ ಹಿಡಿದು ಮತದಾರರ ಬಳಿ ಹೋಗಲೂ ನಾವು ಹಿಂಜರಿಯುವುದಿಲ್ಲ ಎಂದು ಪಂಚಮಸಾಲಿ ಸಮುದಾಯದ ಧರ್ಮಾಧ್ಯಕ್ಷ ಬಸವ ಜಯಮೃತ್ಯುಂಜಯ ಸ್ವಾಮೀಜಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಕಳೆದ ಹಲವು ತಿಂಗಳುಗಳಿಂದ ಮೀಸಲಾತಿ ವಿಚಾರವಾಗಿ ಪ್ರತಿಭಟನೆ ನಡೆಸುತ್ತಿರುವ ಸ್ವಾಮೀಜಿ, ಸಮುದಾಯದ ಬೆಂಬಲವನ್ನು ಲಘುವಾಗಿ ತೆಗೆದುಕೊಳ್ಳಬೇಡಿ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಸರಕಾರ ತಮ್ಮ ಬೇಡಿಕೆಗೆ ಮನ್ನಣೆ ನೀಡಲು ವಿಫಲವಾದರೆ ರಾಜ್ಯದ 224 ಕ್ಷೇತ್ರಗಳಿಗೂ ತೆರಳಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರೂ ಪಕ್ಷಗಳ ಚುನಾಯಿತ ಶಾಸಕರ ವೈಫಲ್ಯವನ್ನು ಬಯಲಿಗೆಳೆಯಲು ಹಿಂಜರಿಯುವುದಿಲ್ಲ ಎಂದು ತಿಳಿಸಿದ್ದಾರೆ.
2ಎ ಮೀಸಲಾತಿ ವಿಚಾರವಾಗಿ ಫ್ರೀಡಂ ಪಾರ್ಕ್‌ನಲ್ಲಿ ನಡೆಸುತ್ತಿರುವ ಧರಣಿಯು 13ನೇ ದಿನಕ್ಕೆ ಕಾಲಿಟ್ಟಿದ್ದು, ಬೇಡಿಕೆ ಈಡೇರುವವರೆಗೂ ನಮ್ಮ ಪ್ರತಿಭಟನೆ ಹೀಗೆಯೇ ಮುಂದುವರೆಯಲಿದೆ ಎಂದಿದ್ದಾರೆ.
ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದು, ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬರುವ ಭರವಸೆ ಇದೆ ಎಂದು ಸ್ವಾಮೀಜಿಗಳು ತಿಳಿಸಿದ್ದಾರೆ.
Advertisement