ಮೊದಲ ರಫೇಲ್ ಯುದ್ಧ ವಿಮಾನ ಭಾರತಕ್ಕೆ ತಂದಿದ್ದ ಪೈಲಟ್ ಗಳ ತಂಡ ಮುನ್ನಡೆಸಿದ್ದರು ಬೆಳಗಾವಿಯ ಹನುಮಂತ ಸಾರಥಿ!

ಗ್ವಾಲಿಯರ್ ಏರ್ ಬೇಸ್ ಬಳಿ ಶನಿವಾರ ಸಂಭವಿಸಿದ ಮತ್ತೊಂದು ಯುದ್ಧ ವಿಮಾನ ದುರಂತದಲ್ಲಿ ಬೆಳಗಾವಿಯ ವೀರ ಪುತ್ರ ವಿಂಗ್ ಕಮಾಂಡರ್ ಹನುಮಂತ್ ಸಾರಥಿ (36) ಹುತಾತ್ಮರಾಗಿದ್ದು, ಈ ಬೆಳವಣಿಗೆ ಬೆಳಗಾವಿಯಲ್ಲಿ ಕತ್ತಲು ಕವಿಯುವಂತೆ ಮಾಡಿದೆ.
ಹನುಮಂತ್ ಸಾರಥಿ
ಹನುಮಂತ್ ಸಾರಥಿ

ಹುಬ್ಬಳ್ಳಿ/ಬೆಳಗಾವಿ: ಗ್ವಾಲಿಯರ್ ಏರ್ ಬೇಸ್ ಬಳಿ ಶನಿವಾರ ಸಂಭವಿಸಿದ ಮತ್ತೊಂದು ಯುದ್ಧ ವಿಮಾನ ದುರಂತದಲ್ಲಿ ಬೆಳಗಾವಿಯ ವೀರ ಪುತ್ರ ವಿಂಗ್ ಕಮಾಂಡರ್ ಹನುಮಂತ್ ಸಾರಥಿ (36) ಹುತಾತ್ಮರಾಗಿದ್ದು, ಈ ಬೆಳವಣಿಗೆ ಬೆಳಗಾವಿಯಲ್ಲಿ ಕತ್ತಲು ಕವಿಯುವಂತೆ ಮಾಡಿದೆ.

ಮಧ್ಯಪ್ರದೇಶದ ಗ್ವಾಲಿಯರ್ ಸಮೀಪ ಸುಖೋಯ್‌ 30 ಎಂಕೆಐ ಹಾಗೂ ಮಿರಾಜ್–2000 ಯುದ್ಧ ವಿಮಾನಗಳ ಮಧ್ಯೆ ಶನಿವಾರ ಬೆಳಿಗ್ಗೆ ಸಂಭವಿಸಿದ ಅಪಘಾತದಲ್ಲಿ ಹನುಮಂತ್ ಸಾರಥಿಯವರು ಹುತಾತ್ಮರಾಗಿದ್ದು, ಇವರು ಬೆಳಗಾವಿ ಮೂಲದವರೆಂದು ತಿಳಿದುಬಂದಿದೆ.

ಇಲ್ಲಿನ ಗಣೇಶಪುರದ ಮನೆಯಲ್ಲಿ ಹನುಮಂತ್ ಸಾರಥಿ ಅವರು 1987ರಲ್ಲಿ ಜನಿಸಿದ್ದರು, ಬಾಲ್ಯವನ್ನು ಇಲ್ಲಿಯೇ ಕಳೆದಿದ್ದರು. ನಗರದ ಕೇಂದ್ರೀಯ ವಿದ್ಯಾಲಯ–2ರಲ್ಲಿ ಶಿಕ್ಷಣ ಪೂರೈಸಿದ್ದರು. ಪೈಲೆಟ್‌ ಆದ ಮೇಲೆ ಪತ್ನಿ, ಮಕ್ಕಳ ಸಮೇತ ಗ್ವಾಲಿಯರ್‌ನಲ್ಲಿ ನೆಲೆಸಿದ್ದರು.

2009ರಿಂದ ಭಾರತೀಯ ವಾಯುಪಡೆಯಲ್ಲಿ ಹನುಮಂತ್ ಸಾರಥಿ ಸೇವೆ ಸಲ್ಲಿಸುತ್ತಿದ್ದರು. ಅವರ ತಂದೆ ರೇವಣಸಿದ್ಧಪ್ಪ ಕೂಡ ಸೇನೆಯಲ್ಲಿ ಕ್ಯಾಪ್ಟನ್ ಆಗಿ ನಿವೃತ್ತಿ ಹೊಂದಿದ್ದಾರೆ. ಸಹೋದರ ಪ್ರವೀಣ ಭಾರತೀಯ ವಾಯುಪಡೆಯಲ್ಲಿಯೇ ಗ್ರೂಪ್‌ ಕ್ಯಾಪ್ಟನ್‌ ಆಗಿದ್ದಾರೆ. ಇನ್ನು ಪತ್ನಿ ಕೂಡ ಐಎಎಫ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

‘ನಿತ್ಯದ ತರಬೇತಿ ಹಾರಾಟಕ್ಕೆ ಎರಡು ವಿಮಾನಗಳು ಹೋದಾಗ ಈ ಅವಘಡ ಸಂಭವಿಸಿದೆ. ವಿಶೇಷ ವಿಮಾನದಲ್ಲಿ ಅವರ ಪಾರ್ಥಿವ ಶರೀರವನ್ನು ಇಂದು ಗಣೇಶಪುರಕ್ಕೆ ತರುವ ಸಾಧ್ಯತೆಗಳಿದ್ದು, ಬೆಳಗಾವಿಯ ಗಣೇಶಪುರ ಸಮೀಪದ ಬೆನಕನಹಳ್ಳಿಯಲ್ಲಿ ಸಕಲ ಸೇನಾ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರು ಐಎಎಫ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ.

ಹನುಮಂತ್ ಸಾರಥಿ ಅವರಿಗೆ ತಂದೆ– ತಾಯಿ, ಪತ್ನಿ ಮೀಮಾಂಶ, ಮೂರು ವರ್ಷದ ಪುತ್ರಿ, ಒಂದು ವರ್ಷದ ಪುತ್ರ ಇದ್ದಾರೆ. ತಂದೆ ರೇವಣಸಿದ್ಧಪ್ಪ ಹಾಗೂ ತಾಯಿ ಸಾವಿತ್ರಿ ಬೆಳಗಾವಿ ನಗರದಲ್ಲೇ ವಾಸವಿದ್ದಾರೆ.

ಹನುಮಂತ್ ಸಾರಥಿ ಅವರನ್ನು ಸ್ಕ್ವಾಡ್ರನ್‌ನ ಅತ್ಯುತ್ತಮ ಪೈಲಟ್ ಎಂದು ಕರೆಯಲಾಗುತ್ತಿತ್ತು. ಅಲ್ಲದೆ, ಭಾರತಕ್ಕೆ ಮೊದಲ ರಫೇಲ್ ಯುದ್ಧ ವಿಮಾನವನ್ನು ಕರೆತಂದಿದ್ದ ಪೈಲಟ್ ಗಳ ತಂಡವನ್ನು ಮುನ್ನಡೆಸಿದ್ದ ಕೀರ್ತಿಯನ್ನು ಹನುಮಂತ ಸಾರಥಿಯವರು ಪಡೆದುಕೊಂಡಿದ್ದರು.

 ಬೆಳಗಾವಿಯ ಕೇಂದ್ರೀಯ ವಿದ್ಯಾಲಯದಲ್ಲಿ ವಿಂಗ್ ಕಮಾಂಡರ್‌ನ ಬ್ಯಾಚ್‌ಮೇಟ್ ಹನುಮಂತ ಸಾರಥಿಯವರನ್ನು ಸ್ಮರಿಸಿದ್ದು, ಅವರಲ್ಲಿದ್ದ ಪೈಲಟಿಂಗ್ ಕೌಶಲ್ಯಗಳನ್ನು ಕೊಂಡಾಡಿದ್ದಾರೆ. ಹನುಮಂತ್ ಸಾರಥಿ ಅತ್ಯಂತ ವಿನಮ್ರ ವ್ಯಕ್ತಿಯಾಗಿದ್ದ. ಅವರೊಂದಿಗೆ ಕೆಲಸ ಮಾಡುತ್ತಿದ್ದ ಅಧಿಕಾರಿಗಳು, ಸಹ ಪೈಲಟ್ ಗಳು ಅವನ ಪೈಲಟಿಂಗ್ ಕೌಶಲ್ಯಗಳ ಬಗ್ಗೆ ಮೆಚ್ಚುಗೆಗಳ ವ್ಯಕ್ತಪಡಿಸುತ್ತಿದ್ದರು. ಶಾಲೆಯಲ್ಲಿ ಅತ್ಯಂತ ಚುರುಕುಳ್ಳ ವಿದ್ಯಾರ್ಥಿಯಾಗಿದ್ದ. ದ್ವಿತೀಯ ಪಿಯುಸಿ ಪೂರ್ಣಗೊಳಿಸಿದ ಬಳಿಕ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ) ಗೆ ಸೇರ್ಪಡೆಗೊಂಡಿದ್ದ ಎಂದು ಸ್ಮರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com