ಎನ್ಇಪಿ ಬದಲು ರಾಜ್ಯ ಶಿಕ್ಷಣ ನೀತಿ ಜಾರಿಗೆ: ಸಚಿವ ಡಾ‌. ಎಂ.ಸಿ.ಸುಧಾಕರ್​

ರಾಷ್ಟ್ರೀಯ ಶಿಕ್ಷಣ ನೀತಿ ಬದಲು ಸಮಗ್ರವಾಗಿ ಎಲ್ಲ ಜಾತಿ, ವರ್ಗಗಳ ಹಿತ ಮತ್ತು ಉದ್ಯೋಗ ಸೃಷ್ಟಿಯನ್ನು ಒಳಗೊಂಡ ರಾಜ್ಯ ಶಿಕ್ಷಣ ನೀತಿಯನ್ನು ಅನುಷ್ಠಾನಕ್ಕೆ ತರುತ್ತೇವೆ ಎಂದು ಡಾ. ಎಂ.ಸಿ. ಸುಧಾಕರ್​ ಅವರು ಶುಕ್ರವಾರ ಹೇಳಿದರು.
ಸಚಿವ ಸುಧಾಕರ್.
ಸಚಿವ ಸುಧಾಕರ್.

ಬೆಳಗಾವಿ: ರಾಷ್ಟ್ರೀಯ ಶಿಕ್ಷಣ ನೀತಿ ಬದಲು ಸಮಗ್ರವಾಗಿ ಎಲ್ಲ ಜಾತಿ, ವರ್ಗಗಳ ಹಿತ ಮತ್ತು ಉದ್ಯೋಗ ಸೃಷ್ಟಿಯನ್ನು ಒಳಗೊಂಡ ರಾಜ್ಯ ಶಿಕ್ಷಣ ನೀತಿಯನ್ನು ಅನುಷ್ಠಾನಕ್ಕೆ ತರುತ್ತೇವೆ ಎಂದು ಡಾ. ಎಂ.ಸಿ. ಸುಧಾಕರ್​ ಅವರು ಶುಕ್ರವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿ ರದ್ದುಪಡಿಸುವ ಬಗ್ಗೆ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಸ್ಪಷ್ಟವಾಗಿ ಹೇಳಿದ್ದೇವೆ. ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಹೊಸ ಶಿಕ್ಷಣ ನೀತಿ ಕಿತ್ತೆಸೆದು, ರಾಜ್ಯ ಶಿಕ್ಷಣ ನೀತಿ ಜಾರಿಗೆ ತರುತ್ತೇವೆಂದು ಹೇಳಿದರು.

ಎರಡು ವರ್ಷದ ಹಿಂದೆ ನಮ್ಮ ರಾಜ್ಯದಲ್ಲಿ ಮಾತ್ರ ಹೊಸ ಶಿಕ್ಷಣ ನೀತಿ ಅನುಷ್ಠಾನಕ್ಕೆ ತರಲಾಗಿದೆ. ಅದಕ್ಕೆ ಬಹಳಷ್ಟು ಪೂರ್ವ ತಯಾರಿ‌ ಆಗಬೇಕಿತ್ತು ಮತ್ತು ಅದರಲ್ಲಿ ಕೆಲ ನ್ಯೂನತೆಗಳಿವೆ. ಈ ಎಲ್ಲ ವಿಚಾರಗಳ ಬಗ್ಗೆ ವಿವರವಾಗಿ ಶಿಕ್ಷಣ ತಜ್ಞರ ಜೊತೆಗೆ ಚರ್ಚಿಸುತ್ತಿದ್ದೇವೆ. ಯಾವುದೇ ರೀತಿ ವಿದ್ಯಾರ್ಥಿಗಳ‌ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆ ಆಗದಂತೆ, ಯಾವ ರೀತಿಯಲ್ಲಿ ಬದಲಾವಣೆ ತರಬೇಕೆಂದು ಬಹಳಷ್ಟು ಗಮನಹರಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಒಂದು ಸ್ಪಷ್ಟವಾದ ರೂಪವನ್ನು‌ ಕೊಟ್ಟು ಬದಲಾವಣೆ ಪ್ರಕ್ರಿಯೆ ಪ್ರಾರಂಭ ಮಾಡುತ್ತೇವೆ ಎಂದು ತಿಳಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ನ್ಯೂನತೆಗಳ ಕುರಿತು ಮಾತನಾಡಿ, ಈ ಶಿಕ್ಷಣ ನೀತಿಯಲ್ಲಿ ಬೇರೆ ಬೇರೆ ಅವಿಷ್ಕಾರಗಳಿವೆ ಎಂದರು.

ಎರಡು ಮುಖ್ಯ ವಿಷಯಗಳನ್ನು ತೆಗೆದುಕೊಳ್ಳುವುದು, ಮತ್ತೊಂದು ಎಲೆಕ್ಟಿವ್ ವಿಷಯ ತೆಗೆದುಕೊಳ್ಳುವುದು. ಥೇರಿಯಾಟಿಕಲ್​ಗಿಂತ ಪ್ರಾಕ್ಟಿಕಲ್ ಜ್ಞಾನ ಕೌಶಲ್ಯಭಿವೃದ್ಧಿ ವಿಚಾರ ಸೇರಿ ಬಹಳಷ್ಟು ವಿಚಾರಗಳು ಒಳಗೊಂಡಿವೆ. ಯಾವುದೇ ನೀತಿ ಜಾರಿಗೆ ತರಬೇಕಾದರೆ ಮೂಲಭೂತ ಸೌಲಭ್ಯಗಳು ಇರಬೇಕು. ಅದಕ್ಕೆ ಬೇಕಾದ ಬೋಧಕ, ಬೋಧಕೇತರ ಸಿಬ್ಬಂದಿಗಳ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ. ಅದಕ್ಕೆ ಅನುದಾನ ಒದಗಿಸುವ ಬಗ್ಗೆ ತಯಾರಿ ಮಾಡಬೇಕಾಗುತ್ತದೆ. ಇನ್ನು ಖಾಸಗಿ ಸಂಸ್ಥೆಗಳಲ್ಲಿ ಒಂದು ರೀತಿ ಆದರೆ ಸರ್ಕಾರಿ ಸಂಸ್ಥೆಗಳಲ್ಲಿ ಮತ್ತೊಂದು ರೀತಿ ಆಗುತ್ತದೆ. ಈ ಎಲ್ಲಾ ವಿಚಾರಗಳ ಬಗ್ಗೆ ಹೆಚ್ಚಿನ ಅಧ್ಯಯನ ಮಾಡುತ್ತೇವೆ ಎಂದು ಹೇಳಿದರು.

ಹಂತ ಹಂತವಾಗಿ ಯಾವುದೇ ಒಂದು ನೀತಿಯಲ್ಲಿ ಬದಲಾವಣೆ ತರಬೇಕಾಗುತ್ತದೆ. ಆದರೆ ಏಕಾಏಕಿ 2021ರಲ್ಲಿ ಅನುಷ್ಠಾನಕ್ಕೆ ತರುವ ಕೆಲಸ ಆಗಿದೆ. ಒಂದೆರಡಲ್ಲ ಇದರಲ್ಲಿ ಇರುವ ಬಹಳಷ್ಟು ವಿಚಾರಗಳ ಬಗ್ಗೆ ಎಲ್ಲರ ಜೊತೆಗೂ ಚರ್ಚಿಸಿ ಮಾಹಿತಿ ಸಂಗ್ರಹಿಸುವ ಕೆಲಸ ಮಾಡುತ್ತಿದ್ದೇವೆ. ಸಮಗ್ರವಾಗಿ ಎಲ್ಲ ಜಾತಿ, ವರ್ಗಗಳ ಹಿತ ಮತ್ತು ಉದ್ಯೋಗ ಸೃಷ್ಟಿಯನ್ನು ಒಳಗೊಂಡ ರಾಜ್ಯ ಶಿಕ್ಷಣ ನೀತಿಯನ್ನು ಅನುಷ್ಠಾನಕ್ಕೆ ತರುತ್ತೇವೆ ಎಂದು ಸಚಿವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com