ಮುಂದಿನ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ: ರಾಜ್ಯ ಸರ್ಕಾರ

ಶಾಲಾ ಶಿಕ್ಷಣ ಹಂತದಲ್ಲಿ ಪಠ್ಯಪುಸ್ತಕಗಳನ್ನು ಸಂಪೂರ್ಣವಾಗಿ ಪರಿಷ್ಕರಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಈ ನಡುವಲ್ಲೇ ಮುಂದಿನ ಶೈಕ್ಷಿಣ ವರ್ಷದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹಲವು ಪ್ರಮುಖ ಬದಲಾವಣೆಗಳ ತರಲು ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಶಾಲಾ ಶಿಕ್ಷಣ ಹಂತದಲ್ಲಿ ಪಠ್ಯಪುಸ್ತಕಗಳನ್ನು ಸಂಪೂರ್ಣವಾಗಿ ಪರಿಷ್ಕರಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಈ ನಡುವಲ್ಲೇ ಮುಂದಿನ ಶೈಕ್ಷಿಣ ವರ್ಷದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹಲವು ಪ್ರಮುಖ ಬದಲಾವಣೆಗಳ ತರಲು ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ರಾಜ್ಯ ಮಟ್ಟದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಬದಲಿಗೆ ರಾಜ್ಯ ಶಿಕ್ಷಣ ನೀತಿಯನ್ನು (ಎಸ್‌ಇಪಿ) ಜಾರಿಗೊಳಿಸಲು ಚಿಂತನೆಗಳು ನಡೆಯುತ್ತಿವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಖಚಿತಪಡಿಸಿದ್ದಾರೆ.

ಉಪಕುಲಪತಿಗಳು, ಶಿಕ್ಷಣ ತಜ್ಞರು, ಮತ್ತು ವಿದ್ಯಾರ್ಥಿ ಮುಖಂಡರು ಸೇರಿದಂತೆ ರಾಜ್ಯದ ಹಲವಾರು ಪಾಲುದಾರರೊಂದಿಗೆ ನಡೆಸಿದ ಸಭೆಗಳ ನಂತರ ಸಚಿವರು ಈ ಮಾಹಿತಿಯನ್ನು ನೀಡಿದರು.

ಜುಲೈ 3 ರಿಂದ ಜುಲೈ 14 ರವರೆಗೆ ನಡೆಯಲಿರುವ ವಿಧಾನಸಭೆ ಅಧಿವೇಶನದ ನಂತರ ಬದಲಾವಣೆಗಳ ಕುರಿತು ಚರ್ಚೆಗಳು ನಡೆಯಲಿವೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.

“ಎನ್‌ಇಪಿ ಕುರಿತು ಅಧ್ಯಯನ ನಡೆಸಲು ಶಿಕ್ಷಣ ತಜ್ಞರು ಮತ್ತು ಮಧ್ಯಸ್ಥಗಾರರನ್ನು ಒಳಗೊಂಡಂತೆ ಸಮಿತಿಯನ್ನು ರಚಿಸಲಾಗುವುದು. ಸಮಿತಿ ನೀಡುವ ವರದಿಯನ್ನು ಆಧರಿಸಿ ಬದಲಾವಣೆಗಳನ್ನು ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ಸಮಿತಿಯು ರಾಜ್ಯದಲ್ಲಿ ನೀತಿಗೆ ಮಾಡಬೇಕಾದ ಬದಲಾವಣೆಗಳ ಕುರಿತು ವರದಿಯನ್ನು ಸಲ್ಲಿಸುತ್ತದೆ, ನಂತರ ಸರ್ಕಾರವು ಅಂತಿಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಈ ಕುರಿತ ಚರ್ಚೆಗಳು ನಡೆಯುತ್ತಿವೆ ಎಂದು ಮಾಹಿತಿ ನೀಡಿದ್ದಾರೆ.

ಎನ್ಇಪಿಯನ್ನು ಶಾಲಾ ಹಂತದಲ್ಲಿ ಅಳವಡಿಸಲಾಗಿಲ್ಲವಾದ್ದರಿಂದ, ಪಠ್ಯಪುಸ್ತಕ ಪರಿಷ್ಕರಣೆ ಹೊರತುಪಡಿಸಿ ಶಾಲೆಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಎನ್ಇಪಿ ಕುರಿತು ಸೂಕ್ಷ್ಮ ರೀತಿಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಈ ಕುರಿತ ಅಭಿಪ್ರಾಯಗಳನ್ನು ಕೂಲಂಕುಶವಾಗಿ ಪರಿಶೀಲಿಸಲಾಗುತ್ತಿದೆ. ಸಾಕಷ್ಟು ಜನರು ಎನ್ಇಪಿ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಕೆಲವು ಭಾಗಗಳ ಕುರಿತು ವಿರೋಧಗಳೂ ಇವೆ. ಶಿಕ್ಷಣ ತಜ್ಞರು ನೀತಿ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನೀತಿಯು ಒಳ್ಳೆಯ ಉದ್ದೇಶವನ್ನು ಹೊಂದಿದ್ದರೂ, ತರಾತುರಿಯಲ್ಲಿ ಮತ್ತು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ಜಾರಿಗೊಳಿಸಲಾಗಿದೆ ಎಂದು ಹೇಳಿದ್ದಾರೆಂದು ಸಚಿವರು ತಿಳಿಸಿದರು.

ಪ್ರಸ್ತುತ, ಎನ್ಇಪಿ ಮೂರನೇ ಶೈಕ್ಷಣಿಕ ವರ್ಷದಲ್ಲಿ ಅನುಷ್ಠಾನದಲ್ಲಿದೆ, ಇದನ್ನು ಬಿಜೆಪಿ ಸರ್ಕಾರದ ಅಡಿಯಲ್ಲಿ 2021 ರಲ್ಲಿ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಜಾರಿಗೊಳಿಸಲಾಗಿದೆ. ಎರಡು ವರ್ಷಗಳ ಹಿಂದೆ ನೀತಿಯನ್ನು ಜಾರಿಗೆ ತಂದಿದ್ದರೂ, ಸಿದ್ಧತೆಗಳನ್ನು ಸರಿಯಾಗಿ ಮಾಡದ ಕಾರಣ ಇದು ನ್ಯೂನತೆಗಳನ್ನು ಎದುರಿಸುತ್ತಿದೆ. ಇದರ ತ್ವರಿತ ಅನುಷ್ಠಾನದಿಂದ ಬಹಳಷ್ಟು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ರಾಜ್ಯದ ನೀತಿಯೊಂದಿಗೆ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರದ ರೀತಿಯಲ್ಲಿ ಎಸ್ಇಪಿಯನ್ನು ಜಾರಿಗೆ ತರುತ್ತೇವೆ. ವಿದ್ಯಾರ್ಥಿಗಳನ್ನು ಉದ್ಯಮಕ್ಕೆ ಸಿದ್ಧಗೊಳಿಸುವತ್ತ ಗಮನ ಹರಿಸುತ್ತೇವೆಂದು ಸಚಿವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com