ಬಿಜೆಪಿ ಕಾರ್ಯಕರ್ತ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣ: ಆರೋಪಿಗಳ ಆಸ್ತಿ ಜಪ್ತಿಗೆ ಎನ್ ಐಎ ಸಜ್ಜು
ಬೆಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳು ಶರಣಾಗದ ಹಿನ್ನೆಲೆಯಲ್ಲಿ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಪ್ರಕರಣದ ತನಿಖೆ ನಡೆಸುತ್ತಿರುವ ಎನ್ ಐಎ ಸಿದ್ಧವಾಗಿದೆ ಎಂದು ಮೂಲಗಳು ಸೋಮವಾರ ತಿಳಿಸಿವೆ.
ಆರೋಪಿಗಳ ಶರಣಾಗತಿಗೆ ಜೂನ್ 30ರವರೆಗೆ ಗಡುವು ನೀಡಲಾಗಿತ್ತು. ಈ ಬಗ್ಗೆ ಸುಳ್ಯ ಮತ್ತು ಬೆಳ್ಳಾರೆ ಪಟ್ಟಣಗಳಲ್ಲಿ ಏಜೆನ್ಸಿ ಅಧಿಕಾರಿಗಳು ಮೈಕ್ ಮೂಲಕ ಘೋಷಣೆ ಮಾಡಿದ್ದರು. ಆರೋಪಿಗಳ ನಿವಾಸಗಳಿಗೆ ನೋಟಿಸ್ ಅಂಟಿಸಿ, ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿತ್ತು. ಆರೋಪಿಗಳ ಬಗ್ಗೆ ಪೊಲೀಸರಿಗೆ ಸುಳಿವು ನೀಡಿದವರಿಗೆ ನಗದು ಬಹುಮಾನದ ಘೋಷಣೆಯನ್ನೂ ಅಧಿಕಾರಿಗಳು ಮಾಡಿದ್ದಾರೆ
ನೆಟ್ಟಾರು ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ಕಲ್ಲು ಮುಟ್ಲು ನಿವಾಸಿಗಳಾದ ಉಮರ್ ಫಾರೂಕ್ ಮತ್ತು ಮುಸ್ತಫಾ ಪೈಚಾರ್ ಅವರಿಗಾಗಿ ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಎನ್‌ಐಎ ಸಂಪೂರ್ಣ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರೂ ಇಲ್ಲಿಯವರೆಗೆ ಬಂಧಿಸಲು ಸಾಧ್ಯವಾಗಿಲ್ಲ. ಹೀಗಾಗಿ ಎನ್‌ಐಎ ಆರೋಪಿಗಳ ಚರ ಮತ್ತು ಸ್ಥಿರ ಆಸ್ತಿಗಳ ವಿವರಗಳನ್ನು ಕಂದಾಯ ಇಲಾಖೆ ಮತ್ತು ಇತರ ಮೂಲಗಳಿಂದ ಸಂಗ್ರಹಿಸುತ್ತಿದೆ. ಅಧಿಕೃತ ಬ್ಯಾಂಕ್ ಖಾತೆಗಳ ವಿವರಗಳನ್ನು ಸಹ ಕಲೆಹಾಕಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಎನ್‌ಐಎ ಆಸ್ತಿಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದ್ದು, ನಂತರ ಅವುಗಳನ್ನು ಮುಟ್ಟುಗೋಲು ಹಾಕಿಕೊಂಡು ಸರ್ಕಾರಕ್ಕೆ ಹಸ್ತಾಂತರಿಸಲಾಗುತ್ತದೆ. ಘಟನೆ ನಡೆದು 11 ತಿಂಗಳಾದರೂ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಲು ಎನ್‌ಐಎಗೆ ಸಾಧ್ಯವಾಗಿಲ್ಲ.
ಪ್ರವೀಣ್ ಕುಮಾರ್ ನೆಟ್ಟಾರೆ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎನ್ಐಎ 20 ಆರೋಪಿಗಳ ವಿರುದ್ಧ ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ. 14 ಮಂದಿಯನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಆರು ಮಂದಿಗಾಗಿ ಶೋಧ ನಡೆಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ