ಹಾಸನ: ಎರಡು ಎಕರೆ ಪ್ರದೇಶದಲ್ಲಿದ್ದ 2 ಲಕ್ಷ ರೂ. ಮೌಲ್ಯದ ಟೊಮೆಟೋ ಕಳ್ಳತನ

ದೇಶಾದ್ಯಂತ ಟೊಮೆಟೋ ದರ ಗಗನಕ್ಕೇರಿರುವಂತೆಯೇ ಹಾಸನದಲ್ಲಿ ಸುಮಾರು 2 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಸುಮಾರು 2 ಲಕ್ಷ ರೂ ಮೌಲ್ಯದ ಟೊಮೆಟೋ ಬೆಳೆಯನ್ನು ದುಷ್ಕರ್ಮಿಗಳು ಕಳ್ಳತನ ಮಾಡಿದ್ದಾರೆ.
ಬೇಲೂರು ತಾಲೂಕಿನ ಗೋಣಿಸೋಮೇನಹಳ್ಳಿಯಲ್ಲಿ ಸೋಮಶೇಖರ್ ಅವರ ಜಮೀನು
ಬೇಲೂರು ತಾಲೂಕಿನ ಗೋಣಿಸೋಮೇನಹಳ್ಳಿಯಲ್ಲಿ ಸೋಮಶೇಖರ್ ಅವರ ಜಮೀನು
Updated on

ಹಾಸನ: ದೇಶಾದ್ಯಂತ ಟೊಮೆಟೋ ದರ ಗಗನಕ್ಕೇರಿರುವಂತೆಯೇ ಹಾಸನದಲ್ಲಿ ಸುಮಾರು 2 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಸುಮಾರು 2 ಲಕ್ಷ ರೂ ಮೌಲ್ಯದ ಟೊಮೆಟೋ ಬೆಳೆಯನ್ನು ದುಷ್ಕರ್ಮಿಗಳು ಕಳ್ಳತನ ಮಾಡಿದ್ದಾರೆ.

ಹಾಸನ ಜಿಲ್ಲೆಯ ಬೇಲೂರು (Belur) ತಾಲೂಕಿನ ಗೋಣಿ ಸೋಮನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸುಮಾರು ಒಂದೂವರೆ ಲಕ್ಷಕ್ಕೂ ಅಧಿಕ ಮೌಲ್ಯದ ಟೊಮೆಟೋವನ್ನು ಕಳ್ಳರು ಕದ್ದೊಯ್ದಿದ್ದಾರೆ. ಗ್ರಾಮದ ಸೋಮಶೇಖರ್ ಎಂಬವರು ತಮ್ಮ ಸುಮಾರು 2 ಎಕರೆ ಜಮೀನಿನಲ್ಲಿ ಟೊಮೆಟೋ ಬೆಳೆದಿದ್ದರು. ಸೋಮಶೇಖರ್ ಮತ್ತು ಅವರ ಏಕೈಕ ಪುತ್ರ ಧರಣಿ ಶ್ರಮಜೀವಿಗಳಾಗಿದ್ದು ಟೊಮೆಟೊ ಬೆಲೆ ಏರಿಕೆಯ ನಂತರ ತಮ್ಮ ಜೀವನದಲ್ಲಿ ಅತ್ಯಧಿಕ ಕೃಷಿ ಆದಾಯವನ್ನು ನಿರೀಕ್ಷಿಸಿದ್ದರು. ಟೊಮೆಟೋ ಬೆಳೆಯಿಂದ ಉತ್ತಮ ಇಳುವರಿ ಬಂದಿದ್ದ ಹಿನ್ನೆಲೆ ಕಳೆದ ಮೂರು ದಿನದಿಂದ ಟೊಮೆಟೊ ಕೊಯ್ದು ಮಾರಾಟ ಮಾಡುತ್ತಿದ್ದರು. 

<strong>ಸೋಮಶೇಖರ್ ಅವರ ಜಮೀನು</strong>
ಸೋಮಶೇಖರ್ ಅವರ ಜಮೀನು

ಸೋಮಶೇಖರ್ ಐದು ವರ್ಷಗಳ ಹಿಂದೆ ಎಡಗೈ ಪಾರ್ಶ್ವವಾಯುವಿಗೆ ತುತ್ತಾಗಿ ಬಲಗೈಯಲ್ಲಿ ಕೆಲಸ ಮಾಡುತ್ತಿದ್ದರು. ಕೃಷಿಯಲ್ಲಿ ಬದ್ಧರಾಗಿರುವ ತಂದೆ ಮತ್ತು ಮಗ ಧರಣಿಗೆ ಮಾರುಕಟ್ಟೆಯಲ್ಲಿ ಟೊಮೆಟೊಗೆ ಭಾರಿ ಬೇಡಿಕೆ ಮತ್ತು ಅತ್ಯಧಿಕ ಬೆಲೆಯ ಬಗ್ಗೆ ತಿಳಿದಿತ್ತು. ಜಾನುವಾರುಗಳ ಹಾವಳಿ ತಪ್ಪಿಸಲು ಅವರು ಪ್ರತಿದಿನ ಬೆಳಿಗ್ಗೆಯಿಂದ ಸಂಜೆಯವರೆಗೆ ಹೊಲದಲ್ಲಿ ಕಾವಲು ಕಾಯುತ್ತಿದ್ದರು. ಇದೇ ಕಾರಣಕ್ಕಾಗಿ ಅವರು ತಮ್ಮ  ಕೃಷಿ ಭೂಮಿಯಲ್ಲೇ ಉಪಹಾರ ಮತ್ತು ಊಟ ಕೂಡ ಸೇವಿಸುತ್ತಿದ್ದರು. ಆದರೆ ಇಷ್ಟು ಭದ್ರತೆಯ ಹೊರತಾಗಿಯೂ ಬೆಳೆ ಕಳ್ಳತನವಾಗಿದೆ. ದುಷ್ಕರ್ಮಿಗಳು ಗಿಡಗಳನ್ನು ಹಾಳು ಮಾಡಿದ್ದು, ಗಿಡದಿಂದ ಅಪಾರ ಪ್ರಮಾಣದ ಹೂವು, ಮೊಗ್ಗುಗಳು ಬಿದ್ದಿದ್ದರಿಂದ ಸಂಪೂರ್ಣ ಬೆಳೆ ನಷ್ಟವಾಗಿದೆ. ಹಾಸನದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಜಮೀನಿನಲ್ಲಿದ್ದ ಟೊಮೆಟೊ ಬೆಳೆ ಕಳ್ಳತನವಾಗಿದೆ.

ರಾತ್ರಿ ಜಮೀನಿಗೆ ನುಗ್ಗಿರುವ ಕಳ್ಳರು 50ರಿಂದ 60 ಬ್ಯಾಗ್‌ನಷ್ಟು ಟೊಮೆಟೋ ಕೊಯ್ದಿದ್ದು, ಅಂದಾಜು 2 ಲಕ್ಷಕ್ಕೂ ಹೆಚ್ಚು ಮೌಲ್ಯದ ಟೊಮೆಟೋ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಬುಧವಾರ ಬೆಳಗ್ಗೆ ಸೋಮಶೇಖರ್ ತಮ್ಮ ಜಮೀನಿನ ಬಳಿ ಹೋದಾಗ ಟೊಮೆಟೋ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಕಳ್ಳತನದ ಕುರಿತು ಸೋಮಶೇಖರ್ ಹಳೇಬೀಡು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಲಕ್ಷಾಂತರ ಮೌಲ್ಯದ ಟೊಮೆಟೋ ಕಳೆದುಕೊಂಡ ಸೋಮಶೇಖರ್ ಕಂಗಾಲಾಗಿದ್ದಾರೆ. 

ಈ ಬಗ್ಗೆ ಮಾತನಾಡಿರುವ ಸೋಮಶೇಖರ್, 'ನಮ್ಮಲ್ಲಿ ಕೃಷಿ ಆದಾಯಕ್ಕಿಂತ ಪರ್ಯಾಯ ಆದಾಯದ ಮೂಲವಿದೆ. ಆದರೆ ಐದು ವರ್ಷಗಳಿಂದ ನಾವು ವಿವಿಧ ಕಾರಣಗಳಿಂದ ಅನೇಕ ಬೆಳೆಗಳನ್ನು ಕಳೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ. ಪೊಲೀಸರ ಪ್ರಕಾರ ದುಷ್ಕರ್ಮಿಗಳು ತಡರಾತ್ರಿ ಗೂಡ್ಸ್ ಕ್ಯಾರಿಯರ್‌ನಲ್ಲಿ ಬಂದು ಬುಧವಾರ ಬೆಳಗಿನ ಜಾವದವರೆಗೆ ಸುಮಾರು 90 ಚೀಲ ಟೊಮೆಟೊಗಳನ್ನು ಕೊಯ್ದು ಕದ್ದೊಯ್ದಿದ್ದಾರೆ. ಪೊಲೀಸರು ಸ್ಥಳದಲ್ಲಿ ಮದ್ಯದ ಬಾಟಲಿಗಳು ಮತ್ತು ಸಿಗರೇಟ್ ಪ್ಯಾಕ್‌ಗಳನ್ನು ಪತ್ತೆಹಚ್ಚಿದ್ದು, ಕಳ್ಳತನದಲ್ಲಿ ಸ್ಥಳೀಯರ ಕೈವಾಡದ ಶಂಕೆ ವ್ಯಕ್ತಪಡಿಸಿದ್ದಾರೆ. ಹಿರಿಯ ತೋಟಗಾರಿಕಾ ಅಧಿಕಾರಿಗಳು ಕೂಡ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ. 

ರಾಜ್ಯದ ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೇಟೊ ಕೆಜಿಗೆ 110 ರಿಂದ 150 ರೂ ಇದ್ದು. ಕರ್ನಾಟಕದ ದಕ್ಷಿಣ ಭಾಗಗಳಲ್ಲಿ ಒಣಹವೆಯಿಂದಾಗಿ ಶೇ.50 ರಷ್ಟು ಬೆಳೆ ಕುಸಿದಿದೆ ಎಂದು ಮೂಲಗಳು ತಿಳಿಸಿವೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com