ಕಾಂಗ್ರೆಸ್'ನಿಂದಲೂ ನಿಯಮ ಉಲ್ಲಂಘನೆ: ನಗರದಲ್ಲಿ ರಾರಾಜಿಸುತ್ತಿವೆ ಅನಧಿಕೃತ ಫ್ಲೆಕ್ಸ್, ಬ್ಯಾನರ್'ಗಳು!

ಅನಧಿಕೃತ ಫ್ಲೆಕ್ಸ್‌, ಬ್ಯಾನರ್ ಕುರಿತು ಹೈಕೋರ್ಟ್‌ ನಿರ್ದೇಶನ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿಯಮಗಳ ನಡುವೆಯೂ ರಾಜಕೀಯ ನಾಯಕ ನಿರ್ಲಕ್ಷ್ಯಯುತ ನಡೆಗಳು ಎಂದಿನಂತೆ ಮುಂದುವರೆದಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಅನಧಿಕೃತ ಫ್ಲೆಕ್ಸ್‌, ಬ್ಯಾನರ್ ಕುರಿತು ಹೈಕೋರ್ಟ್‌ ನಿರ್ದೇಶನ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿಯಮಗಳ ನಡುವೆಯೂ ರಾಜಕೀಯ ನಾಯಕ ನಿರ್ಲಕ್ಷ್ಯಯುತ ನಡೆಗಳು ಎಂದಿನಂತೆ ಮುಂದುವರೆದಿವೆ.

ಅನಧಿಕೃತ ಬ್ಯಾನರ್ ಹಾಗೂ ಫ್ಲೆಕ್ಸ್ ಹಾಕಿಕೊಳ್ಳುತ್ತಿದ್ದ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರುತ್ತಿದ್ದ ಕಾಂಗ್ರೆಸ್ ನಾಯಕರೇ ಇದೀಗ ನಿಯಮಗಳನ್ನು ಗಾಳಿಗೆ ತೂರುವ ಕೆಲಸ ಮಾಡುತ್ತಿದ್ದಾರೆ.

ಬಕ್ರೀದ್ ಹಿನ್ನೆಲೆಯಲ್ಲಿ ಚಾಮರಾಜಪೇಟೆ ಬಳಿ ಸಚಿವ ಹಾಗೂ ಶಾಸಕ ಬಿಝಡ್ ಜಮೀರ್ ಅಹಮದ್ ಖಾನ್ ಬೆಂಬಲಿಗರು ಫ್ಲೆಕ್ಸ್ ಹಾಕಿದ್ದರು. ಇದೀಗ ವಿಧಾನಸೌಧದ ಬಳಿ ಎಂಎಲ್ ಸಿ ಸಲೀಂ ಅಹ್ಮದ್ ಬೆಂಬಲಿಗರು ಫ್ಲೆಕ್ಸ್ ಹಾಕಿರುವುದು ಕಂಡು ಬಂದಿದೆ.

ಈ ಹಿಂದೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಜನ್ಮದಿನ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ರಾಜಭವನ ರಸ್ತೆ ಮತ್ತು ವಿಧಾನಸೌಧದ ಬಳಿ ಫೋಟೋಗಳನ್ನು ಹಾಕಿದಾಗ, ಕಾಂಗ್ರೆಸ್ ಕಾರ್ಯಕರ್ತೆ ಬಿಂದುಗೌಡ ಅವರು ಪ್ರತಿಭಟಿಸಿ, ಬ್ಯಾನರ್ ಹರಿದು ಹಾಕಿದ್ದರು. ಈ ವಿಚಾರ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿತ್ತು.

ಫ್ಲೆಕ್ಸ್ ನಿಷೇಧ ಆದೇಶದ ಉಲ್ಲಂಘನೆಯ ಬಗ್ಗೆ ಅಂದಿನ ಆಡಳಿತಾರೂಢ ಬಿಜೆಪಿ ವಿರುದ್ಧ ಕಾಂಗ್ರೆಸ್ ಬೆಂಬಲಿಗರು ವಾಗ್ದಾಳಿ ನಡೆಸಿದ್ದರು, ಅಲ್ಲದೆ, ಕಮಲ ಪಾಳಯವನ್ನು ಲೇವಡಿ ಮಾಡಿದ್ದರು.

ಇದೀಗ ಅಧಿಕಾರಕ್ಕೆ ಬಂದ ಬಳಿಕ ಸ್ವತಃ ಕಾಂಗ್ರೆಸ್ ನಾಯಕರೇ ನಿಯಮವನ್ನು ಗಾಳಿಗೆ ತೂರಿರುವುದು ಹಲವು ಟೀಕೆಗಳಿಗೆ ಎಡೆ ಮಾಡಿಕೊಟ್ಟಿದೆ.

ಈ ಹಿಂದೆ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 27 ಮಂದಿ ವಿರುದ್ಧ ಪ್ರಕರಣ ದಾಖಲಿಸಿತ್ತು. ಅಲ್ಲದೆ, ನಗರದಾದ್ಯಂತ 6,000 ಫ್ಲೆಕ್ಸ್‌ಗಳನ್ನು ತೆಗೆದುಹಾಕಿತ್ತು.

1981 ರ ಕರ್ನಾಟಕ ತೆರೆದ ಸ್ಥಳಗಳ (ವಿಕಾರವನ್ನು ತಡೆಗಟ್ಟುವ ಕಾಯಿದೆ) ಅಡಿಯ ನಿಯಮಗಳ ಪ್ರಕಾರ, ಸ್ಥಳೀಯ ಪ್ರಾಧಿಕಾರದಿಂದ ಲಿಖಿತ ಅನುಮತಿಯಿಲ್ಲದೆ ವ್ಯಕ್ತಿಯ ಪ್ರತಿಮೆ ಹಾಕುವುದು, ಕೆತ್ತಿಸುವುದು ಅಥವಾ ಜಾಹೀರಾತು ನೀಡಲು ಅವಕಾಶ ನೀಡುವುದಿಲ್ಲ. ಈ ಕಾನೂನು  ನಿಯಮ ಉಲ್ಲಂಘನೆ ಮಾಡಿದವರಿಗೆ ಶಿಕ್ಷೆಯಾಗಿ ರೂ. 1000 ಅಥವಾ ಆರು ತಿಂಗಳ ಜೈಲು ಶಿಕ್ಷೆ ಅಥವಾ ದಂಡ ಮತ್ತು ಶಿಕ್ಷೆ ಎರಡೂ ವಿಧಿಸಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com