
ಕಾರವಾರ: ಕರಾವಳಿ ಕರ್ನಾಟಕದಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಹಳ್ಳದಲ್ಲಿ ಕೊಚ್ಚಿ ಹೋಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಸಂಭವಿಸಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಕೊಂಚ ಕಡಿಮೆಯಾಗಿದೆಯಾದರೂ, ಗುರುವಾರ ಸುರಿದ ಭಾರೀ ಮಳೆಗೆ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಇಬ್ಬರು ಸಾವನ್ನಪ್ಪಿದ್ದು, ಆ ಮೂಲಕ ಉತ್ತರ ಕನ್ನಡದಲ್ಲಿ ಮಳೆ ಸಂಬಂಧಿತ ದುರ್ಘಟನೆಯಲ್ಲಿ ಸಾವಿಗೀಡಾದವರ ಸಂಖ್ಯೆ 3ಕ್ಕೇರಿದೆ.
ಧಾರಾಕಾರವಾಗಿ ಸುರಿದ ಭಾರಿ ಮಳೆಗೆ ಹಲವೆಡೆ ನೀರು ತುಂಬಿ ಸಾಕಷ್ಟು ಅನಾಹುತ ಸೃಷ್ಟಿಯಾಗಿತ್ತು. ಕುಮಟಾ ಬೆಟ್ಕುಳಿಯಲ್ಲಿ ಇಬ್ಬರು ಹಳ್ಳದಲ್ಲಿ ಕೊಚ್ಚಿ ಹೋಗಿದ್ದು, ಸತೀಶ ಪಾಂಡುರಂಗ ನಾಯ್ಕ(38), ಉಲ್ಲಾಸ ಗಾವಡಿ(50) ಮೃತ ಪಟ್ಟಿದ್ದಾರೆ. ಇಬ್ಬರು ಹಳ್ಳದಂಚಿನ ಜಮೀನಿನಲ್ಲಿ ಬೇಲಿ ಕಟ್ಟುತ್ತಿರುವಾಗ ಓರ್ವ ಕಾಲು ಜಾರಿ ಹಳ್ಳಕ್ಕೆ ಬಿದ್ದಿದ್ದು ಆತನ ರಕ್ಷಣೆಗೆ ಹೋದ ಇನ್ನೋರ್ವ ಕೂಡ ಕೊಚ್ಚಿ ಹೋಗಿದ್ದ. ಕಣ್ಮರೆಯಾದವರಿಗಾಗಿ ಶೋಧ ನಡೆಸಿದ್ದ ಗ್ರಾಮಸ್ಥರು ರಾತ್ರಿ ಬಳಿಕ ಇಬ್ಬರೂ ಶವವಾಗಿ ಪತ್ತೆಯಾಗಿದ್ದಾರೆ. ಇವರಿಬ್ಬರು ತಮ್ಮ ಕೃಷಿ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂರನೇ ದಿನವೂ ರಜೆ ಮುಂದುವರಿಕೆ
ಜಿಲ್ಲೆಯಲ್ಲಿ ಭಾರಿ ಮಳೆ ಬೀಳುವ ಸೂಚನೆಯನ್ನು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೆಂಗಳೂರು ಮಾಹಿತಿ ನೀಡಿದ್ದು ಹೀಗಾಗಿ ಜಿಲ್ಲಾಡಳಿತವು ಮುಂಜಾಗ್ರತೆ ಕ್ರಮವಾಗಿ ಜುಲೈ 7 ರಂದು ಜಿಲ್ಲೆಯ ಕರಾವಳಿ ತಾಲೂಕುಗಳಾದ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಮತ್ತು ಭಟ್ಕಳ್ ಈ ಪ್ರದೇಶಗಳ ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶಿಸಿದ್ದಾರೆ.
ಕುಮಟಾದಲ್ಲಿ ಗುರುವಾರ ಸಂಜೆ ಬೀಸಿದ ಗಾಳಿಗೆ 30 ಬೃಹತ್ ಮರಗಳು ಧರೆಗುರುಳಿದ್ದು, ಹಲವಾರು ಮನೆಗಳು, ವಾಹನಗಳು ಮತ್ತು ಅಂಗಡಿಗಳಿಗೆ ಹಾನಿಯಾಗಿದೆ. ಈ ಹಿಂದೆ ಜಿಲ್ಲೆಯ ಕಾರವಾರ ಸಮೀಪದ ಅರ್ಗಾದಲ್ಲಿ ಭಾರೀ ಮಳೆಯ ವೇಳೆ ಕಾಲು ಜಾರಿ ಬಿದ್ದು 75 ವರ್ಷದ ಮಹಿಳೆ ಸಾವನ್ನಪ್ಪಿದ್ದರು.
ಶಾಸಕರ ಭೇಟಿ
ಇದೇ ವೇಳೆ, ಮಳೆ ಸಂಬಂಧಿ ಸಮಸ್ಯೆಗಳ ನಿವಾರಣೆಗಾಗಿ ಬಜೆಟ್ ಅಧಿವೇಶನ ಮೊಟಕುಗೊಳಿಸಿ ಕಾರವಾರಕ್ಕೆ ಮರಳಿದ ಕಾರವಾರ-ಅಂಕೋಲಾ ಶಾಸಕ ಸತೀಶ್ ಸೈಲ್ ಅವರು ಕಾರವಾರದ ಹೊರವಲಯದಲ್ಲಿರುವ ಬೈತ್‌ಕೋಲ್ ಮತ್ತು ನೌಕಾಪಡೆಯ ಅಧಿಕಾರಿಗಳು ನಿರ್ಬಂಧಿಸಿದ ಸ್ಥಳಕ್ಕೆ ಭೇಟಿ ನೀಡಿದರು. ನೌಕಾಪಡೆಯ ಅಧಿಕಾರಿಗಳು ಶಾಸಕರ ಜೊತೆಗೂಡಿ ಭಾರೀ ಮಳೆಯಿಂದ ಸ್ಥಳೀಯರಿಗೆ ತೊಂದರೆಯಾಗದಂತೆ ಅಥವಾ ಯಾವುದೇ ಆಸ್ತಿ ಅಥವಾ ಜೀವ ಹಾನಿಯಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು. ಶಾಸಕರ ಬಿಣಗಾ, ಆರಗಾ, ಚೆಂಡಿಯ, ಅಲಿಗದ್ದಾ ಮತ್ತಿತರ ಕಡೆ ಭೇಟಿ ನೀಡಿದರು.
Advertisement